ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯು “ಕರ್ನಾಟಕ ಶುಶ್ರೂಷಾ ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರʼʼ ನವೆಂಬರ್ 22 ರಿಂದ ನವೆಂಬರ್ 25ರ ವರೆಗೆ ನಡೆಸಿದ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ (ಜಿಎನ್‌ಎಂ) ಪರೀಕ್ಷೆಯನ್ನು (KSDNEB GNM Exam) ರದ್ದು ಪಡಿಸಿದೆ.
ಕಟ್ಟು ನಿಟ್ಟಾಗಿ ಪರೀಕ್ಷೆ ನಡೆಯದೇ ಇರುವ ಕಾರಣದಿಂದ ಹಾಗೂ ಸಾಮೂಹಿಕ ನಕಲು ನಡೆದ ಹಿನ್ನೆಲೆಯಲ್ಲಿ ಪ್ರಾಧಿಕಾರ ಮಾಡಿಕೊಂಡ ಮನವಿಯ ಮೇರೆಗೆ ಈ ಪರೀಕ್ಷೆ ರದ್ದು ಪಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಸದ್ಯವೇ ಮರು ಪರೀಕ್ಷೆಯನ್ನು ನಡೆಸಲು ಇಲಾಖೆಯು ಸೂಚಿಸಿದ್ದು, ಸಿಸಿಟಿವಿ ಇರುವ ಪರೀಕ್ಷಾ ಕೇಂದ್ರಗಳಲ್ಲಿ, ಎಲ್ಲ ವಿದ್ಯಾರ್ಥಿಗಳಿಗೆ ಭಾವಚಿತ್ರ ಹಾಗೂ ಪ್ರಾಂಶುಪಾಲರ ಸಹಿ ಇರುವ ಪ್ರವೇಶ ಪತ್ರವನ್ನು ವಿತರಿಸಿ ಈ ಪರೀಕ್ಷೆಯನ್ನು ನಡೆಸಬೇಕೆಂದು ಸೂಚಿಸಲಾಗಿದೆ.
ಮುಂದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರದೊಂದಿಗೆ ಆಧಾರ್ ಕಾರ್ಡ್ ಅಥವಾ ಇನ್ನಿತರೆ ಗುರುತಿನ ಚೀಟಿಯನ್ನು ಹಾಜರು ಪಡಿಸುವುದನ್ನು ಕಡ್ಡಾಯಗೊಳಿಸಬೇಕೆಂದು ತಿಳಿಸಲಾಗಿದೆ. ನ.22 ರಿಂದ ನ.25 ರವರೆಗೆ ನಡೆದ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮ ನಡೆದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸಾಮೂಹಿಕ ನಕಲು ಹಾಗೂ ಸೂಕ್ತ ದಾಖಲೆಗಳಿಲ್ಲದೇ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟ ನರ್ಸಿಂಗ್ ಶಾಲೆಗಳ ಮತ್ತು ಪರೀಕ್ಷಾ ಕೇಂದ್ರಗಳ ಮೇಲೆ ಕೂಡಲೇ ನಿಯಮಾನುಸಾರ ಕ್ರಮ ಜರುಗಿಸುವಂತೆ ಸಹ ಸೂಚಿಸಲಾಗಿದೆ.
ಇದನ್ನೂ ಓದಿ | KSP Recruitment 2022 | ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕ; ಡಿ.18 ಕ್ಕೆ ಲಿಖಿತ ಪರೀಕ್ಷೆ