ಬೆಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿ ಇರುವ ಶಿಕ್ಷಕರ ಹುದ್ದೆಗಳ ಗುರುತಿಸುವಿಕೆ ಹಾಗೂ ಮರು ಹೊಂದಾಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಅಧಿಸೂಚನೆಯು ಕೆಲವು ನ್ಯೂನತೆಗಳಿಂದ ಕೂಡಿದ್ದು, ಇದರಿಂದ ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ (KSGEA News) ಹೇಳಿದೆ.
ಈ ಸಂಬಂಧ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಶಿಕ್ಷಕರ ಆತಂಕವನ್ನು ದೂರ ಮಾಡಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಸರ್ಕಾರದ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ವಿನಾಯಿತಿ ನೀಡಿರುವ ಮಾದರಿಯಲ್ಲಿ ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆ ಹಾಗೂ ಹೊಂದಾಣಿಕೆ ಪ್ರಕ್ರಿಯೆಯಲ್ಲಿ ವಿನಾಯಿತಿ ನೀಡಬೇಕು ಎಂದು ಕೂಡ ಆಗ್ರಹಿಸಿದ್ದಾರೆ.
ದೈಹಿಕ ಶಿಕ್ಷಕರು, ಆಂಗ್ಲ ಭಾಷೆ ಮತ್ತು ಹಿಂದಿ ಶಿಕ್ಷಕರನ್ನು ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಹೆಚ್ಚುವರಿ ಎಂದು ಪರಿಗಣಿಸಬಾರದು. ಪ್ರಾಥಮಿಕ ಶಾಲಾ ಕನ್ನಡ ಭಾಷಾ ಶಿಕ್ಷಕರಂತೆ ಹಿಂದಿ ಶಿಕ್ಷಕರು ಪಿ.ಯು.ಸಿ. ವಿದ್ಯಾರ್ಹತೆಯೊಂದಿಗೆ ಟಿ.ಸಿ.ಹೆಚ್/ಡಿ.ಇ.ಡಿ. ವಿದ್ಯಾರ್ಹತೆ ಪಡೆದು ಹೆಚ್ಚುವರಿಯಾಗಿ ಪಿ.ಯು.ಸಿ.ಗೆ ತತ್ಸಮಾನವಾದ ಹಿಂದಿ ಭಾಷಾ ಪ್ರಚಾರ ಸಭಾಗಳು ನಡೆಸುವ ಸರ್ಟಿಫಿಕೇಟ್ ಕೋರ್ಸ್ ಹೊಂದಿರುವ ಕಾರಣ ಹಿಂದಿ ಶಿಕ್ಷಕರೆಂದು ನೇಮಕಾತಿ ಮಾಡಲಾಗಿದ್ದು, ಇಂತಹ ಹಿಂದಿ ಶಿಕ್ಷಕರನ್ನು ಕನ್ನಡ ಶಿಕ್ಷಕರೆಂದೇ ಪರಿಗಣಿಸಿ ಹೆಚ್ಚುವರಿ ಪ್ರಕ್ರಿಯೆಯಿಂದ ವಿನಾಯಿತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ಬೇಡಿಕೆಗಳು ಇಂತಿವೆ;
- ಹಿಂದಿ ಶಿಕ್ಷಕರ ಅವಶ್ಯಕತೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ (6-8 ತರಗತಿ) ಅವಶ್ಯವಿರುವುದರಿಂದ ಹಿಂದಿ ಶಿಕ್ಷಕರಿಗೆ ಹೆಚ್ಚುವರಿ ಪ್ರಕ್ರಿಯೆಯಿಂದ ವಿನಾಯಿತಿ ನೀಡಬೇಕು.
- ಹೆಚ್ಚುವರಿ ಪ್ರಕ್ರಿಯೆಗೆ ದಿನಾಂಕ: 31-12-2021ರ ದಾಖಲಾತಿಯನ್ನು ಪರಿಗಣಿಸಿರುವುದನ್ನು ಮಾರ್ಪಡಿಸಿ ಪ್ರಸಕ್ತ ಸಾಲಿನ ಮಕ್ಕಳ ದಾಖಲಾತಿ ಅಂದರೆ; 30-09-2022ರವರೆಗಿನ ದಾಖಲಾತಿಯನ್ನು ಪರಿಗಣಿಸಬೇಕು.
- ಅವಧಿ ಮುಗಿದಿರುವ ಸಿ.ಆರ್.ಪಿ/ಬಿ.ಆರ್.ಪಿ. ಗಳಿಗೆ ಹೆಚ್ಚುವರಿ ಪ್ರಕ್ರಿಯೆ ಕೈಗೊಳ್ಳುವ ಪೂರ್ವದಲ್ಲೇ ಕೌನ್ಸಿಲಿಂಗ್ ನಡೆಸಿ ಸ್ಥಳನಿಯುಕ್ತಿಗೊಳಿಸಬೇಕು.
- ವಿಷಯವಾರು, ವೃಂದವಾರು ಹೆಚ್ಚುವರಿ ಪ್ರಕ್ರಿಯೆ ಕೈಗೊಳ್ಳುವ ಕ್ರಮವನ್ನು ಕೈಬಿಟ್ಟು ಶಾಲೆಯಲ್ಲಿ ಮಂಜೂರಾಗಿರುವ ಹುದ್ದೆ ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳನ್ನು ಪರಿಗಣಿಸಿ ಮಕ್ಕಳು- ಶಿಕ್ಷಕರ ಅನುಪಾತದ ಆಧಾರದ ಮೇಲೆ ಮಂಜೂರಾದ ಹುದ್ದೆಗಳಿಗಿಂತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹೆಚ್ಚಾಗಿದ್ದರೆ ಮಾತ್ರ ಅಂತಹ ಹುದ್ದೆಗಳನ್ನು ಹೆಚ್ಚುವರಿ ಎಂದು ಪರಿಗಣಿಸಬೇಕು.
- ಹೆಚ್ಚುವರಿ ಪ್ರಕ್ರಿಯೆಯಲ್ಲಿ ಪತಿ-ಪತ್ನಿ ಪ್ರಕರಣಗಳನ್ನು ಪರಿಗಣಿಸಬೇಕು ಎಂದು ನಮೂದಿಸಲಾಗಿದೆ. ಆದರೆ, ಇ.ಇ.ಡಿ.ಎಸ್. (ಶಿಕ್ಷಕ ಮಿತ್ರ) ತಂತ್ರಾಂಶದಲ್ಲಿ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಬೇಕು.
- ಹೆಚ್ಚುವರಿ ಪ್ರಕ್ರಿಯೆ ಪೂರ್ವದಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವುದರಿಂದ ಹೆಚ್ಚಿನ ಮಟ್ಟದಲ್ಲಿ ಖಾಲಿ ಹುದ್ದೆಗಳು ಲಭ್ಯವಾಗಲಿವೆ, ಇದರಿಂದ ರಿಂದ ಹೆಚ್ಚುವರಿ ಶಿಕ್ಷಕರಿಗೆ ಅನುಕೂಲವಾಗಲಿದೆ.
- ಶೈಕ್ಷಣಿಕ ಬೆಳವಣಿಗೆಗಳಿಗೆ ತೊಂದರೆಯಾಗದಂತೆ ಹೆಚ್ಚುವರಿ ಪ್ರಕ್ರಿಯೆಗಳನ್ನು ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಕೈಗೊಳ್ಳಬೇಕು.
ಇದನ್ನೂ ಓದಿ | NPS News | ಎನ್‌ಪಿಎಸ್ ರದ್ದು; ಹಿಮಾಚಲ ಪ್ರದೇಶದಂತೆ ರಾಜ್ಯದಲ್ಲಿಯೂ ಚುನಾವಣಾ ವಿಷಯವಾಗಲಿದೆಯೇ?