Site icon Vistara News

NEET UG 2022 | ನೀಟ್​ ಯುಜಿ ಪರೀಕ್ಷೆಯ ಕೀ ಉತ್ತರ ಇಂದು ಬಿಡುಗಡೆ ಸಾಧ್ಯತೆ; ರಿಸಲ್ಟ್​ ಆಗಸ್ಟ್ 21ಕ್ಕೆ

NEET UG 2022

ಪದವಿಪೂರ್ವ ವೈದ್ಯಕೀಯ ಕೋರ್ಸ್​​ಗಳ ಪ್ರವೇಶ ಪರೀಕ್ಷೆ ನೀಟ್​ ಯುಜಿ 2022ರ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- NEET UG 2022 ) ಕೀ ಉತ್ತರಗಳು ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಜುಲೈ 17ರಂದು ನೀಟ್​ ಯುಜಿ 2022ರ ಪರೀಕ್ಷೆ ನಡೆದಿತ್ತು. ಒಂದು ತಿಂಗಳು ಕಳೆದರೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕೀ ಉತ್ತರಗಳನ್ನು ಬಿಡುಗಡೆ ಮಾಡಿರಲಿಲ್ಲ ಮತ್ತು ಯಾವಾಗ ಬಿಡುಗಡೆ ಮಾಡುತ್ತೇವೆ ಎಂದು ಒಂದು ದಿನಾಂಕವನ್ನೂ ನಿಗದಿಪಡಿಸಿರಲಿಲ್ಲ. ಪರೀಕ್ಷೆ ಬರೆದವರು ಕಾಯುತ್ತಲೇ ಇದ್ದರು. ಇಂದು ಎನ್​ಟಿಎಯ ಅಧಿಕೃತ ವೆಬ್​ಸೈಟ್​ neet.nta.nic.in ನಲ್ಲಿ ಕೀ ಉತ್ತರಗಳು ಬಿಡುಗಡೆಯಾಗುವ ಸಾಧ್ಯತೆ ಇದ್ದು, ನೀಟ್​ ಯುಜಿ 2022ರ ಪರೀಕ್ಷಾ ಫಲಿತಾಂಶ ಆಗಸ್ಟ್​ 21ಕ್ಕೆ ಪ್ರಕಟಗೊಳ್ಳಲಿದೆ.

ಇಂದು ನೀಟ್​ ಕೀ ಉತ್ತರದೊಂದಿಗೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಮತ್ತು ಅಭ್ಯರ್ಥಿಗಳ ಪ್ರತಿಕ್ರಿಯಾ ಶೀಟ್​ಗಳೂ ಕೂಡ ಎನ್​ಟಿಎ ವೆಬ್​​ಸೈಟ್​​ನಲ್ಲಿ ಲಭ್ಯವಾಗಲಿದೆ. ಹಾಗೇ, ಪರೀಕ್ಷೆ ಬರೆದಿರುವವರಿಗೆ ಏನಾದರೂ ಆಕ್ಷೇಪಣೆಗಳು ಇದ್ದರೆ, ಅದನ್ನು ಸಲ್ಲಿಸಲು ಕೂಡ ಅವಕಾಶ ಕಲ್ಪಿಸಲಾಗುತ್ತದೆ. ಎಂಬಿಬಿಎಸ್​, ಬಿಡಿಎಸ್​, ಬಿಎಎಂಎಸ್​, ಬಿಎಸ್​ಎಂಎಸ್​, ಬಿಯುಎಂಎಸ್​ ಮತ್ತು ಬಿಎಚ್ಎಂಎಸ್​ ಮತ್ತು ಇತರ ಕೋರ್ಸ್​​ಗಳಿಗೆ ಸೇರಲು ಬಯಸುವ ಸುಮಾರು 18 ಲಕ್ಷ ವಿದ್ಯಾರ್ಥಿಗಳು ಈ ಸಲ ನೀಟ್ ಯುಜಿ ಪರೀಕ್ಷೆ ಬರೆದಿದ್ದರು.

ಕೀ ಉತ್ತರ ಚೆಕ್​ ಮಾಡುವ ವಿಧಾನ ಹೀಗಿದೆ
1. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಧಿಕೃತ ವೆಬ್​ಸೈಟ್ neet.nta.nic.in ಗೆ ಭೇಟಿ ನೀಡಿ.
2. ಹೋಂ ಪೇಜ್​​ನಲ್ಲಿ ಕಾಣಿಸುವ ‘NEET 2022 Answer Key’ ಮೇಲೆ ಕ್ಲಿಕ್ ಮಾಡಿ.
3. ಅಲ್ಲಿ ನಿಮ್ಮ ಕ್ರೆಡೆನ್ಷಿಯಲ್​​ಗಳನ್ನು ದಾಖಲಿಸಿ, ಲಾಗಿನ್ ಆಗಿ.
4. ಆಗ ಸ್ಕ್ರೀನ್​ ಮೇಲೆ ನೀಟ್​ ಯುಜಿ ಕೀ ಉತ್ತರಗಳು ಕಾಣಿಸುತ್ತವೆ.
ಇದೇ ಮಾದರಿಯ ವಿಧಾನಗಳನ್ನು ಅನುಸರಿಸಿ nta.ac.in ವೆಬ್​ಸೈಟ್​ನಲ್ಲೂ ಕೀ ಉತ್ತರಗಳನ್ನು ನೋಡಬಹುದು.

ಆಕ್ಷೇಪಣೆ ಸಲ್ಲಿಸುವುದು ಹೇಗೆ?
ನೀಟ್​ ಯುಜಿ ಕೀ ಉತ್ತರಗಳು ಬಿಡುಗಡೆಯಾಗುತ್ತಿದ್ದಂತೆ, ಎನ್​ಟಿಎಯ ವೆಬ್​ಸೈಟ್​ neet.nta.nic.inನಲ್ಲಿ ಒಂದು ವಿಂಡೋ ಆ್ಯಕ್ಟಿವೇಟ್​ ಆಗುತ್ತದೆ. ಅಲ್ಲಿ ಹೋಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ನೇರವಾಗಿ ಆನ್​ಲೈನ್​ ಮೂಲಕ ಇಲ್ಲಿಯೇ ಸಲ್ಲಿಸಬೇಕು ಹೊರತು, ಯಾವುದೇ ಪತ್ರದಲ್ಲಿ ಬರೆದು ಪೋಸ್ಟ್​ ಅಥವಾ ಇನ್ಯಾವುದೇ ಮಾದರಿಯಲ್ಲಿ ಕಳಿಸಿದರೆ ಅದು ಸ್ವೀಕಾರಾರ್ಹವಲ್ಲ.

ಇದನ್ನೂ ಓದಿ: Neet Exam 2022 | ನೀಟ್‌ ಪರೀಕ್ಷೆಗೆ ಕ್ಷಣಗಣನೆ; ರಾಜ್ಯದ 1.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ

Exit mobile version