“ನನಗೆ ಯಾವುದಾದರೂ ವಿಷಯ ಅರ್ಥ ಆಗಲಿಲ್ಲ ಎಂದರೆ ಕೇಳಲು ಹಿಂಜರಿಯುತ್ತಿರಲಿಲ್ಲ. ಆ ವಿಷಯ ಮನದಟ್ಟಾಗುವವರೆಗೂ ಪ್ರಶ್ನೆ ಕೇಳಿ ನನ್ನೆಲ್ಲಾ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತಿದ್ದೆʼʼ– ಹೀಗೆ ತನ್ನ ಯಶಸ್ಸಿನ ಗುಟ್ಟು ತೆರೆದಿಟ್ಟವರು ಈ ಬಾರಿಯ ನೀಟ್ ಪರೀಕ್ಷೆಯಲ್ಲಿ (NEET UG 2022) ಮೊದಲ ರ‍್ಯಾಂಕ್ ಪಡೆದ ರಾಜಸ್ಥಾನದ ತನಿಷ್ಕಾ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ತನಿಷ್ಕಾ ಅಖಿಲ ಭಾರತ ಮಟ್ಟದಲ್ಲಿ (AIR) ಮೊದಲ ಸ್ಥಾನ ಪಡೆದಿದ್ದಾರೆ.
ಹರಿಯಾಣಾ ಮೂಲದ ತನಿಷ್ಕಾ ರಾಜಸ್ಥಾನದ ಕೋಟಾಕ್ಕೆ ಆಗಮಿಸಿ,ಅಲ್ಲಿಯೇ ಕಳೆದ ಎರಡು ವರ್ಷಗಳಿಂದ ನೀಟ್ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದರು. ಒಟ್ಟಾರೆ 720 ಅಂಕಗಳಲ್ಲಿ ತನಿಷ್ಕಾ 715 ಅಂಕ ಪಡೆದು ದೇಶಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ.
2020ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಅಲೆನ್ ಅಫ್ತಾಬ್ ಎಂಬ ವಿದ್ಯಾರ್ಥಿ 720ಕ್ಕೆ 720 ಅಂಕ ಪಡೆದಿದ್ದರು. ತನಿಷ್ಕಾಗೆ ಐದು ಅಂಕ ಕಡಿಮೆ ಬಂದಿದೆ. ಈ ಬಾರಿ ಒಟ್ಟು ನಾಲ್ವರು 715 ಅಂಕ ಪಡೆದಿದ್ದರೂ, ಎನ್‌ಟಿಎ ನಿಯಮದ ಪ್ರಕಾರ ತನಿಷ್ಕಾ ಅವರಿಗೆ ಟಾಪ್ ಸ್ಥಾನ ನೀಡಲಾಗಿದೆ.
ನೀಟ್‌ಗೆ ತನಿಷ್ಕಾ ನೀಡಿದ 5 ಟಿಪ್ಸ್
- ಕೋಚಿಂಗ್ ಸೆಂಟರ್‌ಗೆ ಹೋದರೂ ನೀವೇ ನಿತ್ಯ 6 ರಿಂದ 7 ಗಂಟೆ ಸ್ವಂತವಾಗಿ ಓದಿ.
- ನೀವು ಓದಿದ್ದನ್ನು ಆಗಾಗ ಪುನರ್ ಮನನ ಮಾಡುತ್ತಿರಿ.
- ಪ್ರತಿಯೊಂದು ವಿಷಯಕ್ಕೂ ಸಂಬಂಧಪಟ್ಟಂತೆ ಸಣ್ಣ ನೋಟ್ಸ್ ಬರೆದಿಟ್ಟುಕೊಂಡು ಬಿಡುವಿದ್ದಾಗ ಅದರ ಮೇಲೆ ಕಣ್ಣು ಹಾಯಿಸುತ್ತಿರಿ.
- ನಿಯಮಿತವಾಗಿ ಅಣಕು ಪರೀಕ್ಷೆ (ಮಾಕ್ ಟೆಸ್ಟ್) ಬರೆದು, ನಿಮ್ಮ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ. ಈ ಪರೀಕ್ಷೆಗಳಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಮುಂದೆ ಹೋಗಿ.
- ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟಾದರೂ ಅದನ್ನು ಪರಿಹರಿಸಿಕೊಳ್ಳಲು ಹಿಂಜರಿಯಬೇಡಿ. ಪ್ರಶ್ನೆಗಳನ್ನು ಕೇಳಲು ಹಿಂಜರಿಕೆ ಬೇಡ.
“ನೀವು ಬೇರೆಯವರಿಗೆ ನೆರವಾಗುತ್ತಲೇ ನೀವು ಸಾಧನೆ ಮಾಡಬುದಾದದ ಕ್ಷೇತ್ರವೆಂದರೆ ವೈದ್ಯಕೀಯ ಕ್ಷೇತ್ರ. ಹೀಗಾಗಿ ನಾನು ವೈದ್ಯಳಾಗಳು ಬಯಸುತ್ತಿದ್ದೇನೆʼʼ ಎಂದಿರುವ ತನಿಷ್ಕಾ, “ನಾನು ತರಬೇತಿ ಪಡೆಯುತ್ತಿದ್ದ ಅಲೆನ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಗೊಂದಲ, ಪ್ರಶ್ನೆಗಳಿಗೆ ಉತ್ತರ ದೊರೆಯುತ್ತಿತ್ತು. ವಾರದಲ್ಲಿ, ತಿಂಗಳಿನಲ್ಲಿ ನಿಯಮಿತವಾಗಿ ಅಣಕು ಪರೀಕ್ಷೆ (ಮಾಕ್ ಟೆಸ್ಟ್) ನಡೆಸಿ, ನಾವು ಎಷ್ಟು ಓದಿದ್ದೇವೆ, ಇನ್ನೆಷ್ಟು ಸಾಧನೆ ಮಾಡಬೇಕಿದೆ ಎಂಬುದನ್ನು ನಮಗೆ ಅರಿವು ಮೂಡಿಸಲಾಗುತ್ತಿತ್ತು ಎಂದು ತಾವು ಪಡೆದ ಕೋಚಿಂಗ್ ಕುರಿತು ವಿವಿರಿಸಿದ್ದಾರೆ.
ತನಿಷ್ಕಾರ ತಂದೆ ಕೃಷ್ಣ ಕುಮಾರ್ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರೆ, ತಾಯಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ತಂದೆ-ತಾಯಿ ಪ್ರೇರಣೆಯಿಂದಾಗಿ ನನಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದಿರುವ ಅವರು, ಅರ್ಥವಾಗದಿದ್ದರೆ ಪದೇ ಪದೇ ಪ್ರಶ್ನೆಯನ್ನು ಕೇಳುವಂತೆ ಅವರೇ ನನಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.
“ನಾನು ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆದಾದ ಹೆಚ್ಚು ಅಂಕ ತೆಗೆಯುವಂತೆ ಒತ್ತಡ ಹೇರುತ್ತಿರಲಿಲ್ಲ. ಬದಲಾಗಿ, ಇನ್ನಷ್ಟು ಸಾಧನೆ ಮಾಡುವಂತೆ ನನ್ನನ್ನು ಪ್ರೇರೇಪಿಸುತ್ತಿದ್ದರುʼʼ ಎಂದು ಹೇಳಿದ್ದಾರೆ. “ನಾನು ಪ್ರತಿ ನಿತ್ಯ ಆರರಿಂದ ಏಳು ಗಂಟೆ ಓದುತ್ತಿದ್ದೆ. ಬಿಡುವಾಗಿದ್ದಾಗ ನೋಟ್ಸ್‌ಗಳನ್ನು ನೋಡಿಕೊಳ್ಳುತ್ತಿದ್ದೆʼʼ ಎಂದು ಅವರು ತಮ್ಮ ಅಭ್ಯಾಸದ ಕುರಿತು ಮಾಹಿತಿ ನೀಡಿದ್ದಾರೆ.
“ನೀಟ್ ಪರೀಕ್ಷೆಗೆ ಕೊನೆಯ ದಿನಗಳಲ್ಲಿ ಸಿದ್ಧತೆ ನಡೆಸಿದರೆ ಪ್ರಯೋಜನವಾಗದು. ಮೊದಲ ದಿನದಿಂದಲೇ ವ್ಯವಸ್ಥಿತಿ ಟೈಮ್ ಟೇಬಲ್ ರೂಪಿಸಿಕೊಂಡು ಅಧ್ಯಯನ ನಡೆಸಬೇಕುʼʼ ಎಂದು ತನಿಷ್ಕಾ ಹೇಳಿದ್ದಾರೆ.
ತನಿಷ್ಕಾ ದ್ವಿತೀಯ ಪಿಯುಸಿಯಲ್ಲಿ ಶೇ.98.6 ಅಂಕ ಪಡೆದು ಉತ್ತೀರ್ಣರಾಗಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.96.4 ಅಂಕ ಪಡೆದಿದ್ದರೆ, ಜೆಇಇ ಮೇನ್ಸ್‌ನಲ್ಲಿ ಶೇ.99.50 ಅಂಕ ಪಡೆದಿದ್ದರು. ಈಗ ದೆಹಲಿಯ ಎಐಐಎಂಎಸ್‌ನಲ್ಲಿ ಎಂಬಿಬಿಎಸ್ ಮಾಡಲು ತನಿಷ್ಕಾ ನಿರ್ಧರಿಸಿದ್ದಾರೆ.
ಫಲಿತಾಂಶ ನೋಡಲು ವೆಬ್: https://ntaresults.nic.in/resultservices/NEET-2022-auth
ಇದನ್ನೂ ಓದಿ | NEET Result | ನೀಟ್ ಫಲಿತಾಂಶ ಪ್ರಕಟ, ದೇಶಕ್ಕೇ ಕರ್ನಾಟಕದ ರಿಷಿಕೇಶ್ 3ನೇ, ರುಚಾ 4ನೇ ರ‍್ಯಾಂಕ್!