Site icon Vistara News

ಪಾಠಕ್ಕೆ ವಿದ್ಯಾರ್ಥಿಗಳಿಲ್ಲ, ಹಾಗಾಗಿ ಸಂಬಳವೂ ಬೇಡ!

ಪಟನಾ: ತರಗತಿಯ ಪಾಠ-ಪ್ರವಚನಗಳಿಗೆ ಯಾವ ವಿದ್ಯಾರ್ಥಿಯೂ ಮುಖ ತೋರಿಸುತ್ತಿಲ್ಲ ಎಂದು ಬೇಸತ್ತ ಬಿಹಾರದ ಅಧ್ಯಾಪಕರೊಬ್ಬರು, ತಮ್ಮ ಎರಡೂಮುಕ್ಕಾಲು ವರ್ಷಗಳ ವೇತನವನ್ನು ಹಿಂದಿರುಗಿಸಲು ಮುಂದಾಗಿದ್ದಾರೆ. ಆದರೆ ಅವರು ಹಿಂದಿರುಗಿಸಿರುವ ವೇತನದ ಹಣವನ್ನು ಸರಕಾರ ಇನ್ನೂ ಒಪ್ಪಿಕೊಂಡಿಲ್ಲ.

ಬಿಹಾರದ ಮುಝಫರ್‌ಪುರದ ನಿತೀಶ್ವರ್‌ ಕಾಲೇಜಿನಲ್ಲಿ ಹಿಂದಿ ಅಧ್ಯಾಪಕರಾಗಿರುವ ಲಲನ್‌ ಕುಮಾರ್‌, ʻಪಾಠ ಮಾಡುವುದಕ್ಕೆ ಯಾರೂ ಇಲ್ಲ, ಇನ್ನು ವೇತನ ಯಾವುದಕ್ಕೆ?ʼ ಎಂಬ ತರ್ಕದ ಮೇಲೆ ಸುಮಾರು 24 ಲಕ್ಷ ರೂ. ವೇತನವನ್ನು ಸರಕಾರಕ್ಕೆ ಹಿಂದಿರುಗಿಸುವುದಕ್ಕೆ ಮುಂದಾಗಿದ್ದಾರೆ. ಇದು ಹೀಗೆಯೇ ಮುಂದುವರಿದರೆ ತಾವು ಶೈಕ್ಷಣಿಕವಾಗಿ ಜಡವಾಗುವ ಭೀತಿಯನ್ನು ವ್ಯಕ್ತಪಡಿಸಿರುವ ಅವರು, ಇಲ್ಲಿಂದ ತಮ್ಮನ್ನು ಬೇರೆ ಕಾಲೇಜಿಗೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ದೆಹಲಿಯ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪೂರ್ವ ವಿದ್ಯಾರ್ಥಿಯಾಗಿರುವ ಅವರ ಪ್ರಕಾರ, ಮೊದಲಿಗೆ ತಮ್ಮನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಲ್ಲದ ಕಾಲೇಜಿಗೆ ನೇಮಕ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ವರ್ಗಾವಣೆಯ ಪಟ್ಟಿಯಿಂದ ತಮ್ಮ ಹೆಸರನ್ನು ಪದೇಪದೆ ಕೈಬಿಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲರಾದ ಮನೋಜ್‌ ಕುಮಾರ್‌, ತರಗತಿಗೆ ವಿದ್ಯಾರ್ಥಿಗಳ ಶೂನ್ಯ ಹಾಜರಾತಿಯ ಆರೋಪವನ್ನು ತಳ್ಳಿಹಾಕಿದರು. ʻಕಳೆದೆರಡು ವರ್ಷಗಳಿಂದ ಕೋವಿಡ್‌ನಿಂದಾಗಿ ತರಗತಿಗಳು ನಡೆದಿಲ್ಲ. ಅವರಿಗೆ ವರ್ಗಾವಣೆ ಬೇಕಿದ್ದರೆ ನನ್ನಲ್ಲಿ ನೇರವಾಗಿ ಮಾತನಾಡಬೇಕಿತ್ತುʼ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿರುವ ಬಾಬಾಸಾಹೇಬ್‌ ಭೀಮರಾವ್‌ ಅಂಬೇಡ್ಕರ್‌ ಬಿಹಾರ ವಿಶ್ವವಿದ್ಯಾಲಯದ ಉಪಕುಲಪತಿ ಆರ್‌.ಕೆ. ಠಾಕೂರ್‌, ʻಈ ಬಗ್ಗೆ, ಪ್ರಾಧ್ಯಾಕರಾದ ಲಲನ್‌ ಕುಮಾರ್‌ ಅವರ ದೂರು ಬಂದಿದೆ. ತನಿಖೆ ನಡೆಸುತ್ತೇವೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ| ಹಂತಕರಿಗೆ ಹತ್ಯೆಯ ಮೂಲಕವೇ ಪಾಠ ಕಲಿಸಬೇಕು; ಶಿರಚ್ಛೇದ ಘಟನೆಗೆ ಬಿಜೆಪಿ ನಾಯಕ ಈಶ್ವರಪ್ಪ ಆಕ್ರೋಶ

Exit mobile version