ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಅದರಲ್ಲೀಗ 26ನೇ ಶ್ರೇಯಾಂಕ ಪಡೆದ ವಿದ್ಯಾರ್ಥಿ ಓಜಸ್ ಮಹೇಶ್ವರಿ ಒಂದು ವಿಶೇಷ ಕಾರಣಕ್ಕೆ ಗಮನಸೆಳೆದಿದ್ದಾರೆ. ಓಜಸ್ ಮಹೇಶ್ವರಿ ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು PDW (Persons with Disabilities) ಅಂದರೆ ಅಂಗವೈಕಲ್ಯತೆ ಮೀಸಲಾತಿ ವಿಭಾಗದಲ್ಲಿ ಬರೆದಿದ್ದರು. ಅವರೀಗ ಆ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ ಮತ್ತು ಅಖಿಲ ಭಾರತ ಶ್ರೇಣಿಯಲ್ಲಿ 26ನೇ ಶ್ರೇಯಾಂಕ ಪಡೆದು ಸಾಧನೆ ಮಾಡಿದ್ದಾರೆ.
ಮುಂಬೈನ ಅಂಧೇರಿ ನಿವಾಸಿಯಾದ ಓಜಸ್ ಮಹೇಶ್ವರಿ ಹೈದರಾಬಾದ್ನ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದಿದ್ದರು. ತಮ್ಮ ಪುತ್ರ ಕೇವಲ PwD ವಿಭಾಗದಲ್ಲಿ ಮಾತ್ರವಲ್ಲ, ಆಲ್ ಇಂಡಿಯಾ ಅಖಿಲ ಭಾರತ ಶ್ರೇಣಿಯಲ್ಲೇ ಟಾಪರ್ ಆಗುತ್ತಾನೆ ಎಂಬ ನಂಬಿಕೆ ಆತನ ಪಾಲಕರಿಗೆ ಇತ್ತು. ಅಂದಹಾಗೇ, ಹೀಗೆ ವಿಕಲಾಂಗ ವಿಭಾಗದಲ್ಲಿ ಪರೀಕ್ಷೆ ಬರೆದು ಜನರಲ್ ಕೆಟಗರಿಯಲ್ಲಿ 26ನೇ ಶ್ರೇಯಾಂಕ ಪಡೆದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಓಜಸ್ ಮಹೇಶ್ವರಿ, ಇತಿಹಾಸ ಸೃಷ್ಟಿಸಿದ್ದಾರೆ.
ಪುತ್ರ ಓಜಸ್ ಸಾಧನೆ ಬಗ್ಗೆ ಅವನ ತಾಯಿ ಪೂಜಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ‘ಓಜಸ್ ವಿಕಲಾಂಗ ಆಗಿದ್ದರೂ, ಆ ವರ್ಗಕ್ಕೆ ಇರುವ ಯಾವುದೇ ವ್ಯವಸ್ಥೆ, ಸೌಕರ್ಯವನ್ನೂ ಬಯಸಲಿಲ್ಲ. ಆತ ವಿಕಲಾಂಗರ ವಿಭಾಗದಲ್ಲಿ ಖಂಡಿತವಾಗಿಯೂ ಶ್ರೇಯಾಂಕ ಪಡೆಯುತ್ತಾನೆ ಎಂಬ ನಂಬಿಕೆ ನಮಗೆ ಇತ್ತು. ಆದರೆ ಆತನ ಜನರಲ್ ಱಂಕ್ ಬಗ್ಗೆ ತುಂಬ ಕುತೂಹಲ ಇತ್ತು. ಅದರಲ್ಲೀಗ 26ನೇ ಶ್ರೇಯಾಂಕ ಪಡೆದಿದ್ದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ಓಜಸ್ ಮಹೇಶ್ವರ್ ಹುಟ್ಟುವಾಗ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಆತನಿಗೆ 6 ವರ್ಷ ಇದ್ದಾಗ ಮೊದಲಿಗೆ ಕಿವಿ ಕೇಳುವುದು ನಿಂತು ಹೋಯಿತು. ಹಾಗಂತ ಆತನ ಓದಬೇಕು ಎಂಬ ಆಸೆಗೆ ಅದೇನೂ ಸಮಸ್ಯೆ ಕೊಡಲಿಲ್ಲ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದ. 8ನೇ ವರ್ಷದಿಂದ ಓಜಸ್ ಈ ಎರಡೂ ವಿಷಯಗಳಿಗೆ ಸಂಬಂಧಿಸಿದ ವಸ್ತುಪ್ರದರ್ಶನ, ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದ. ಜೆಇಇ ಮೇನ್ ಪರೀಕ್ಷೆಯಲ್ಲೂ ಟಾಪರ್ ಎನ್ನಿಸಿಕೊಂಡಿದ್ದ.
ಇದನ್ನೂ ಓದಿ: JEE Advanced Result | ಜೆಇಇನಲ್ಲಿ 9ನೇ ಶ್ರೇಯಾಂಕ ಪಡೆದ ಮಹಿತ್ಗೆ ಪುಷ್ಪಾ ಸಿನಿಮಾದ ಡೈಲಾಗ್ ಸ್ಫೂರ್ತಿ !