Site icon Vistara News

PGCET 2024: ಪಿಜಿಸಿಇಟಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ; ಶುಲ್ಕ ಪಾವತಿಗೂ ಅವಕಾಶ

PGCET 2024

ಬೆಂಗಳೂರು: ಎಂಬಿಎ, ಎಂಸಿಎ, ಎಂ.ಟೆಕ್ ಸೇರಿದಂತೆ ಇತರ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಪಿಜಿಸಿಇಟಿ-24ಗೆ ಅರ್ಜಿ ಸಲ್ಲಿಸಲು (PGCET 2024) ಕೊನೆ ದಿನಾಂಕವನ್ನು ಜೂನ್ 20ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ. ಶುಲ್ಕ ಪಾವತಿಸಲು ಜೂನ್ 21ವರೆಗೆ ಅವಕಾಶ ಇರುತ್ತದೆ.

ಡಿಸಿಇಟಿ-2024 ಪ್ರವೇಶಪತ್ರ ಡೌನ್‌ಲೋಡ್‌ಗೆ ಅವಕಾಶ

ಡಿಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶಪತ್ರ ಡೌನ್ ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ಕೆಇಎ ವೆಬ್‌ಸೈಟ್ ಗೆ ಭೇಟಿ ನೀಡಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಅರ್ಜಿ ಸಂಖ್ಯೆ ಮತ್ತು ಅರ್ಜಿದಾರರ ಹೆಸರು (ಮೊದಲ ನಾಲ್ಕು ಅಕ್ಷರಗಳು) ನಮೂದಿಸಿ ಡಿಸಿಇಟಿ-2024 ರ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಪ್ರವೇಶಪತ್ರದ ಜೊತೆಯಲ್ಲಿ ಅಭ್ಯರ್ಥಿಗಳಿಗೆ ನೀಡಲಾಗಿರುವ ಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹಾಗು ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿರುವ ವಸ್ತ್ರ ಸಂಹಿತೆಯನ್ನು ತಪ್ಪದೆ ಅನುಸರಿಸಲು ಸೂಚಿಸಲಾಗಿದೆ. ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ, ನಿಗದಿತ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕೆಂದು ಸ್ಪಷ್ಟಪಡಿಸಲಾಗಿದೆ. ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ; ಕಡ್ಡಾಯ, ಹೆಚ್ಚುವರಿ‌ ಟ್ರಾನ್ಸ್‌ಫರ್ ಇಲ್ಲ, ಕೋರಿಕೆ ವರ್ಗ ಮಾತ್ರ

ಬೆಂಗಳೂರು: ರಾಜ್ಯಾದ್ಯಂತ (Teachers Transfer 2024) ಸಾವಿರಾರು ಸರ್ಕಾರಿ ಶಿಕ್ಷಕರು ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ವರ್ಗಾವಣೆ ವೇಳಾಪಟ್ಟಿ ಶನಿವಾರ (ಜೂನ್‌ 15) ಪ್ರಕಟಗೊಂಡಿದೆ. ಕಡ್ಡಾಯ ಹಾಗೂ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರವು (Karnataka Government), ಕೋರಿಕೆಯ ವರ್ಗಾವಣೆ ಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಇದರಿಂದ ಸಾವಿರಾರು ಶಿಕ್ಷಕರು ನಿಟ್ಟುಸಿರು ಬಿಡುವಂತಾಗಿದೆ. ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ವಲಯವಾರು ವರ್ಗಾವಣೆ ಈ ವರ್ಷ ಕೈಬಿಡುವಂತೆಯೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿತ್ತು.

ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರನ್ನೂ ಒಳಗೊಂಡಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಈ ವೇಳಾಪಟ್ಟಿ ಪ್ರಕಟವಾಗಿದೆ. ಇನ್ನುಮುಂದೆ ವರ್ಗಾವಣೆಗೆ ಸಂಬಂಧಿಸಿ ಕೌನ್ಸೆಲಿಂಗ್‌ ನಡೆಯಲಿದೆ. ವರ್ಗಾವಣೆಗೆ ಅರ್ಜಿ ಇತ್ಯಾದಿ ಪ್ರಕ್ರಿಯೆ ಮಾರ್ಚ್‌ 18ರಿಂದ ಪ್ರಾರಂಭವಾಗಿತ್ತು. ಲೋಕಸಭೆ ಚುನಾವಣೆ ಘೋಷಣೆ ಮತ್ತು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯು ಈ ಪ್ರಕ್ರಿಯೆಗೆ ತೊಡಕಾಗಿತ್ತು. ಈಗ ಕೊನೆಗೂ ವರ್ಗಾವಣೆ ವೇಳಾಪಟ್ಟಿ ಪ್ರಕಟಗೊಂಡಿದೆ.

ವರ್ಗಾವಣೆಗಳಲ್ಲಿ ಮೂರು ವಿಧ

ಸಾಮಾನ್ಯವಾಗಿ ಶಿಕ್ಷಕರ ವರ್ಗಾವಣೆಯಲ್ಲಿ ಮೂರು ವಿಧಗಳಿವೆ. ಇವುಗಳನ್ನೇ ರಾಜ್ಯ ಸರ್ಕಾರ ಅನುಸರಿಸುತ್ತದೆ. ಸಾಮಾನ್ಯ ವರ್ಗಾವಣೆಯಲ್ಲಿ ಕೋರಿಕೆ ಸಲ್ಲಿಸಿದವರು, ಪರಸ್ಪರ ವರ್ಗಾವಣೆ ಬಯಸಿದವರಿಗೆ ಮಾತ್ರ ವರ್ಗಾವಣೆ ಮಾಡಲಾಗುತ್ತದೆ. ಇನ್ನು, ಒಂದೇ ಶಾಲೆಯಲ್ಲಿ ಸತತ 10 ವರ್ಷ ಕಾರ್ಯನಿರ್ವಹಿಸಿದವರಿಗೆ ಕಡ್ಡಾಯ ವರ್ಗಾವಣೆ ಮಾಡಲಾಗುತ್ತದೆ. ಹಾಗೆಯೇ, ಯಾವುದಾದರೂ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಹೆಚ್ಚಿನ ಶಿಕ್ಷಕರು ಇದ್ದರೆ, ಅವರನ್ನು ಹೆಚ್ಚುವರಿ ವರ್ಗಾವಣೆ ವಿಧದಲ್ಲಿ ಟ್ರಾನ್ಸ್‌ಫರ್‌ ಮಾಡಲಾಗುತ್ತದೆ.

ಕಡ್ಡಾಯ ವರ್ಗಾವಣೆ ಮಾಡುವ ವೇಳೆ ಮೂರು ವಲಯಗಳನ್ನು ಗಮನಿಸಲಾಗುತ್ತದೆ. ಎ ವಲಯದಲ್ಲಿ ನಗರಗಳು ಅಥವಾ ಪಟ್ಟಣಗಳು ಇದ್ದರೆ, ಬಿ ವಲಯದಲ್ಲಿ ನಗರದಿಂದ ಮೂರು ಕಿಲೋಮೀಟರ್‌ ದೂರದಲ್ಲಿರುವ ಗ್ರಾಮಗಳು, ಸಿ ವಲಯದಲ್ಲಿ ನಗರದಿಂದ 10 ಕಿಲೋಮೀಟರ್‌ ದೂರದಲ್ಲಿರುವ ಗ್ರಾಮಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಎ ವಲಯದಲ್ಲಿ ಅಂದರೆ ಯಾವುದೇ ಒಂದು ನಗರದಲ್ಲಿ 10 ವರ್ಷ ಸತತವಾಗಿ ಕಾರ್ಯನಿರ್ವಹಿಸಿದ ಶಿಕ್ಷಕರನ್ನು ಬಿ ಅಥವಾ ಸಿ ವಲಯಗಳಿಗೆ, ಅಂದರೆ ಹಳ್ಳಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಹಾಗೆಯೇ, ಸಿ ವಲಯದಲ್ಲಿ ಕೆಲಸ ಮಾಡಿದ ಶಿಕ್ಷಕರನ್ನು ಎ ವಲಯಕ್ಕೂ ವರ್ಗಾವಣೆ ಮಾಡಲಾಗುತ್ತದೆ.

ಶಿಕ್ಷಕರ ಸಂಘದಿಂದ ಅಭಿನಂದನೆ

ವಲಯವಾರು ವರ್ಗಾವಣೆಯನ್ನು ಕೈಬಿಟ್ಟು, ಕೋರಿಕೆಯ ವರ್ಗಾವಣೆಯ ವೇಳಾಪಟ್ಟಿ ಪ್ರಕಟಿಸಿದ ಕಾರಣ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ್‌ ಅವರು ಸಂಘದ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಂಘದ ಪರವಾಗಿ ರಾಜ್ಯಾಧ್ಯಕ್ಷ ಕೆ.ನಾಗೇಶ್‌ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ವರ್ಗಾವಣೆಗೆ ಕಾಯುತ್ತಿರುವ ಶಿಕ್ಷಕರು

ಕೌಟುಂಬಿಕ, ಶೈಕ್ಷಣಿಕ ಇತ್ಯಾದಿ ಕಾರಣಗಳಿಂದ ರಾಜ್ಯಾದ್ಯಂತ ಸಾವಿರಾರು ಶಿಕ್ಷಕರು ವರ್ಗಾವಣೆಯನ್ನು ಎದುರು ನೋಡುತ್ತಿದ್ದಾರೆ. ಪ್ರತಿ ಬಾರಿಯೂ ರಾಜ್ಯ ಸರ್ಕಾರ, ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲೇ ವರ್ಗಾವಣೆ ಪ್ರಕ್ರಿಯೆ ಮುಗಿಸಲಾಗುವುದು ಎಂದು ಹೇಳುತ್ತದೆ. ಆದರೆ ನಾನಾ ಕಾರಣಗಳಿಂದ ಇದು ವಿಳಂಬವಾಗುತ್ತಲೇ ಇತ್ತು. ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿವೆ. ಆದರೆ ಇನ್ನೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದಿಲ್ಲ. ಈ ತಿಂಗಳಲ್ಲಿ ಕೌನ್ಸೆಲಿಂಗ್‌ ಆರಂಭವಾದರೂ ಈ ಪ್ರಕ್ರಿಯೆ ಅಂತಿಮವಾಗಿ ಮುಗಿಯಲು ಕನಿಷ್ಠ ಇನ್ನೆರಡು ತಿಂಗಳು ಬೇಕಾಗಬಹುದು.

ದ್ವಿಭಾಷಾ ನೀತಿಗೂ ಅನುಮತಿ

ಶಿಕ್ಷಕರ ವರ್ಗಾವಣೆ ಜತೆಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ನೀತಿಯ ಜಾರಿಗೂ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಒಂದು ಸಾವಿರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿಗಳ ಜತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನೂ ಪ್ರಾರಂಭಿಸಬೇಕು ಎಂಬುದಾಗಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ನೀತಿ ಜಾರಿಗೆ ಬರಲಿದೆ.

ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿಗೆ ತರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಹಾಗೆಯೇ, ದ್ವಿಭಾಷಾ ನೀತಿ ಅನ್ವಯ ತರಗತಿಗಳನ್ನು ಆರಂಭಿಸುವ ಕುರಿತು ಆಯಾ ಜಿಲ್ಲೆಗಳಲ್ಲಿರುವ ಶಾಲೆಗಳ ಪಟ್ಟಿಯನ್ನೂ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version