Site icon Vistara News

PUC result 2022 | ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ ಆಗಿಲ್ಲ, ಸೆ.12ಕ್ಕೆ ರಿಸಲ್ಟ್‌

2nd puc result

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು (PUC result 2022) ಗುರುವಾರ ಪ್ರಕಟಿಸಿದೆ ಎಂಬ ವದಂತಿ ಹರಡಿ, ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದರು.

ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ಫಲಿತಾಂಶದ ಲಿಂಕ್‌ ಅಲ್ಲಿ ಪ್ರಕಟವಾಗಿರಲಿಲ್ಲ. ಈ ಬಗ್ಗೆ ಇಲಾಖೆಗೆ ಅನೇಕರು ಕರೆ ಮಾಡಿ ವಿಚಾರಿಸುವುದೂ ನಡೆಯಿತು.

ಈ ವದಂತಿ ಕುರಿತು ಸ್ಪಷ್ಟನೆ ನೀಡಿರುವ ಇಲಾಖೆಯ ಅಧಿಕಾರಿಗಳು ಗುರುವಾರ ಫಲಿತಾಂಶವನ್ನು ಪ್ರಕಟಿಸಲಾಗಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹರಡಿದ್ದು, ವಿದ್ಯಾರ್ಥಿಗಳು ಇದನ್ನು ನಂಬಬಾರದು ಎಂದು ಕೋರಿದ್ದಾರೆ. ಈ ಗೊಂದಲದ ನಂತರ ಟ್ವೀಟ್‌ ಮಾಡಿದ ಶಿಕ್ಷಣ ಸಚಿವ ಬಿ ಸಿ. ನಾಗೇಶ್‌, “ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಸೆಪ್ಟೆಂಬರ್ 12ರಂದು ಪ್ರಕಟಿಸಲಾಗುತ್ತದೆ. ಬೆಳಗ್ಗೆ 11 ಗಂಟೆ ನಂತರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆʼʼ ಎಂದು ಪ್ರಕಟಿಸಿದರು.

ಕಳೆದ ಏಪ್ರಿಲ್‌/ ಮೇ ತಿಂಗಳಿನಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ಈ ಪೂರಕ ಪರೀಕ್ಷೆ ಬರೆದಿದ್ದರು. ಒಟ್ಟು 1,85,449 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಆಗಸ್ಟ್‌ 12 ರಿಂದ 25ರ ವರೆಗೆ ರಾಜ್ಯಾದ್ಯಂತ 307 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಫಲಿತಾಂಶಕ್ಕಾಗಿ ಸೆ. ೧೨ರಂದು ಈ ವೆಬ್‌ಸೈಟ್‌ ನೋಡಿ : https://karresults.nic.in/

ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಮಂಡಳಿಯ ವೆಬ್‌ಸೈಟ್‌ನಲ್ಲಿ ರಿಜಿಸ್ಟೇಷನ್‌ ನಂಬರ್‌ ಮತ್ತು ಜನ್ಮದಿನಾಂಕವನ್ನು ದಾಖಲಿಸಿ ಫಲಿತಾಂಶ ನೋಡಬಹುದಾಗಿರುತ್ತದೆ.

ಈ ವರ್ಷ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯನ್ನು ಬರೆಯಲು ಒಟ್ಟಾರೆ 6,83,563 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಇದರಲ್ಲಿ 4,22,966 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 61.88 ರಷ್ಟು ಶೇಕಡವಾರು ಫಲಿತಾಂಶ ಬಂದಿತ್ತು.

ಇದನ್ನೂ ಓದಿ | NEET UG 2022 | ನೀಟ್‌ನಲ್ಲಿ ತನಿಷ್ಕಾರಷ್ಟೇ ಅಂಕ ಪಡೆದಿದ್ದ ರಾಜ್ಯದ ಹೃಷಿಕೇಶ್‌, ರುಚಾಗೆ ಮೊದಲ ರ‍್ಯಾಂಕ್‌ ತಪ್ಪಿದ್ದೇಕೆ?

Exit mobile version