ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿದ್ದು, ದಾಖಲಾತಿ ಪ್ರಕ್ರಿಯೆಯು ಆರಂಭಗೊಂಡಿದೆ. ಈಗ ಆರ್‌ಟಿಇ ಅಡಿ ಶಾಲಾ ದಾಖಲಾತಿ (RTE Admission 2024) ಜೂನ್ 8ರಿಂದ ಪ್ರಾರಂಭವಾಗಲಿದ್ದು, ಜೂ.19ರಂದು ಕೊನೆ ದಿನವಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಆರ್‌ಟಿಇ ಪ್ರವೇಶಕ್ಕೆ ಅರ್ಜಿಗಳ ಸಲ್ಲಿಕೆಯಾಗಿದ್ದು, ಡೇಟಾ ಪರಿಶೀಲನೆ ಮಾಡಲಾಗಿದೆ. ಲಾಟರಿ ಪ್ರಕ್ರಿಯೆಯಲ್ಲಿ ಅರ್ಹರ ಪಟ್ಟಿ ಬಿಡುಗಡೆಯಾಗಿದ್ದು, ಜೂ.7ರಂದು ಆನ್‌ಲೈನ್ ಮೂಲಕ ಆರ್‌ಟಿಇ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ.
ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ಜೂನ್ 8ರಿಂದ 19ರವರೆಗೆ ದಾಖಲಾತಿ ಮಾಡಿಕೊಳ್ಳಬೇಕಿದೆ. ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಜೂನ್ 20ವರೆಗೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕಿದೆ.
ಮೊದಲ ಸುತ್ತಿನ ಸೀಟು ಹಂಚಿಕೆ ನಂತರ ಜೂನ್ 25ರಂದು ಎರನಡೇ ಸುತ್ತಿನ ಸೀಟು ಹಂಚಿಕೆಯನ್ನು ನಡೆಸಲಾಗುತ್ತದೆ. ಎರಡನೇ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ಜೂನ್ 26 ರಿಂದ ಜುಲೈ 2ರ ವರೆಗೆ ದಾಖಲಾತಿ ಮಾಡಿಕೊಳ್ಳಬೇಕಿದೆ. ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ಆಯಾ ಶಾಲಾ ಮುಖ್ಯಸ್ಥರು ಜುಲೈ 3ರಂದು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕಿದೆ.
ಆರ್‌ಟಿಇ ಅಡಿ ಮೊದಲ ಸುತ್ತಿನ ಆನ್‌ಲೈನ್ ಲಾಟರಿ ಪ್ರಕ್ರಿಯೆಯನ್ನು ಈ ಮೊದಲು ಜೂ 5ಕ್ಕೆ ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಲಾಟರಿ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಅದರಂತೆ ಜೂ. 7ರಂದು ಶುಕ್ರವಾರ ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆಯು ನಡೆಯಲಿದೆ.
ಮೊದಲ ಸುತ್ತಿನಲ್ಲಿ 6,090 ಮಕ್ಕಳು ಅರ್ಹ
2024-25ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಹಾಗೂ 12(1)(ಸಿ) ಅಡಿಯಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕಾಗಿ ಅರ್ಹ 15,895 ಅರ್ಜಿಗಳನ್ನು ಮೊದಲ ಸುತ್ತಿನ ಲಾಟರಿಗೆ ಪರಿಗಣಿಸಲಾಗಿದೆ. ಜೂ.7ರಂದು ಮೊದಲನೇ ಸುತ್ತಿನ ಲಾಟರಿಯನ್ನು ಆನ್‌ಲೈನ್ ಮೂಲಕ ನಡೆಸಲಾಗಿದೆ.
ಇಂದು ನಡೆದ ಈ ಮೊದಲನೇ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ 6,090 ಅರ್ಹ ಮಕ್ಕಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳ ಪೋಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ಸೀಟು ಹಂಚಿಕೆ ಮಾಹಿತಿಯನ್ನು ನೀಡಲಾಗಿದೆ. ಎಲ್ಲಾ ಪೋಷಕರು ಜೂ.8 ರಿಂದ 19 ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ದಾಖಲಾತಿ ಮಾಡಲು ಶಿಕ್ಷಣ ಇಲಾಖೆ ತಿಳಿಸಿದೆ. ಸೀಟು ಹಂಚಿಕೆ ವಿವರ ಇಲಾಖಾ ವೆಬ್‌ಸೈಟ್ ನಲ್ಲಿ ಲಭ್ಯವಿರಲಿದೆ.
ಇದನ್ನೂ ಓದಿ: Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!
ವಸತಿ ಶಾಲೆಗಳಿಗೂ ಆರ್‌ಟಿಇ ಅನ್ವಯ
ಕರ್ನಾಟಕ ಹೈಕೋರ್ಟ್ ಕಳೆದ ವಾರ ವಸತಿ ಶಾಲೆಗಳಿಗೂ ಆರ್‌ಟಿಐ ಕಾಯಿದೆಯ ಅಂಶಗಳು ಅನ್ವಯವಾಗುತ್ತವೆ ಎಂದು ಆದೇಶ ನೀಡಿತ್ತು. ಇದರಿಂದಾಗಿ ಇನ್ನು ಮುಂದೆ ವಸತಿ ಶಾಲೆಗಳು ಆರ್‌ಟಿಇ ಅನ್ವಯವಾಗುವುದಿಲ್ಲವೆಂದು ಹೇಳುವಂತಿಲ್ಲ. ಅಲ್ಲದೇ ಕೋರ್ಟ್ ತನ್ನ ಆದೇಶದಲ್ಲಿ ಆರ್‌ಟಿಇ ಕಾಯಿದೆ ನಿಯಮ 18ರ ಪ್ರಕಾರ ಮತ್ತು ಕರ್ನಾಟಕ ಆರ್‌ಟಿಇ ಕಾಯಿದೆ ನಿಯಮ 11ರಂತೆ, ನಮೂನೆ-1ರಂತೆ ಸರಕಾರ ಹೊರತುಪಡಿಸಿ ಇತರೆ ಎಲ್ಲಾ ಶಾಲೆಗಳು ಸಕ್ಷಮ ಪ್ರಾಧಿಕಾರದಲ್ಲಿಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಹೇಳಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ