ಬೆಂಗಳೂರು: ಸದ್ಯದಲ್ಲಿಯೇ ರಾಜ್ಯದಲ್ಲಿ ಹೋಮ್ ವರ್ಕ್ ಬೀಳಲಿದೆ ಬ್ರೇಕ್! ಶಾಲೆಯಷ್ಟೆ ಕೆಲಸಗಳನ್ನು ಮನೆಗೆ ನೀಡುತ್ತಿದ್ದ ಪರಿಪಾಠಕ್ಕೆ ಸದ್ಯದಲ್ಲೆ ಕೊನೆಯಾಗುವ ನಿರೀಕ್ಷೆಯಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಸರ್ಕಾರಿ ಶಾಲೆಗಳಿಗೆ ಈ ವರ್ಷದಿಂದಲೇ ನಲಿ-ಕಲಿ ರೀತಿ ಓದು ಮಾತ್ರ ಇರಬೇಕು. 1, 2ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ನೀಡದಂತೆ ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.
ಹೋಮ್‌ವರ್ಕ್ ಕುರಿತು ಈಗಾಗಲೆ ಮದ್ರಾಸ್ ಹೈಕೋರ್ಟ್ ತೀರ್ಪು ಇದೆ. ಪ್ರತಿ ಮಗುವಿನ ಒಟ್ಟು ತೂಕದ 10%ಗಿಂತ ಹೆಚ್ಚು ತೂಕವನ್ನು ಮಕ್ಕಳು ಹೊರಬಾರದು ಎಂದು ತಿಳಿಸಿದೆ. ಶಾಲೆಯಲ್ಲಿ ಪಾಠ ಮಾಡುವ ಪಠ್ಯಗಳ ಜತೆಗೆ ಹೋಮ್‌ವರ್ಕ್ ಪುಸ್ತಕಗಳನ್ನೂ ಹೊತ್ತು ತರುವುದರಿಂದ ಹೊರೆ ಹೆಚ್ಚಾಗುತ್ತಿದೆ.
ಇದೀಗ ದೇಶಾದ್ಯಂತ ಜಾರಿ ಮಾಡಲಾಗುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಎರಡನೇ ತರಗತಿವರೆಗೆ ಹೋಮ್‌ವರ್ಕ್ ನೀಡುವಂತಿಲ್ಲ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಒಲವು ವ್ಯಕ್ತಪಡಿಸಿದ್ದರು.
ಇದೆಲ್ಲದರ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಅನೇಕ ಸಭೆಗಳನ್ನು ನಡೆಸಿದೆ. ಹೋಮ್‌ವರ್ಕ್‌ಗೆ ಬ್ರೇಕ್ ಹಾಕಲು ನಿರ್ಧಾರ ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧ ಮತ ಹಾಕಿದ ಭಾರತದ ನ್ಯಾಯಾಧೀಶ
ಹೋಮ್‌ವರ್ಕ್ ಕಾರಣಕ್ಕೆ ಮಕ್ಕಳಿಗೆ ಮನೆಯಲ್ಲಿಯೂ ಒತ್ತಡ ಹೇರಲಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಬೇಡ. ಆಟವಾಡುತ್ತ, ಸಮಾಜದೊಂದಿಗೆ ಬೆರೆತು ತಿಳಿದುಕೊಳ್ಳುವ ವಯಸ್ಸು ಇದು. ಈಗಾಗಲೇ ಸರಕಾರಿ ಶಾಲೆಗಳಲ್ಲಿ ನಲಿ-ಕಲಿ ಪದ್ಧತಿ ಜಾರಿಯಲ್ಲಿದೆ. ಎನ್‌ಇಪಿ ಜಾರಿ ಮುನ್ನವೇ ಖಾಸಗಿ ಶಾಲೆಯಲ್ಲಿ ಹೋಮ್‌ವರ್ಕ್ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.
ಪುಟ್ಟ ಮಕ್ಕಳಿಗೆ ಹೋಮ್‌ವರ್ಕ್ ನೀಡುವುದು ದೊಡ್ಡ ಹೊರೆ. ಎರಡನೇ ತರಗತಿವರೆಗೆ ಹೋಮ್‌ವರ್ಕ್ ನೀಡದೇ ಇರುವುದು ಒಳ್ಳೆಯದು. ಸರ್ಕಾರ ಆದಷ್ಟು ಬೇಗನೆ ಇದನ್ನು ಜಾರಿಗೆ ತರಲಿದೆ ಎಂದು ನಾಗೇಶ್ ತಿಳಿಸಿದ್ದಾರೆ.