ಬೆಂಗಳೂರು: 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ -2ರ (SSLC Examination 2) ದಿನಾಂಕ ನಿಗಧಿಯಾಗಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜೂನ್ 7ರಿಂದ 14ರವರೆಗೆ ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷಾ (SSLC 2 Exam Time Table) ಸಮಯವಾಗಿದೆ. ಇನ್ನೂ ಪ್ರತಿ ವಿಷಯಕ್ಕೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ -2ರ ವೇಳಾಪಟ್ಟಿ ಹೀಗಿದೆ
7-6-2024- ಪ್ರಥಮ ಭಾಷೆ
8-6-2024- ತೃತೀಯ ಭಾಷೆ
10-6-2024- ಗಣಿತ, ಸಮಾಜ ಶಾಸ್ತ್ರ
11-6-2024- ಅರ್ಥ ಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
12-6-2024- ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
13-6-2024- ದ್ವಿತೀಯ ಭಾಷೆ (ಇಂಗ್ಲೀಷ್ ಹಾಗೂ ಕನ್ನಡ)
14-6-2024 – ಸಮಾಜ ವಿಜ್ಞಾನ
ಸೂಚನೆಗಳು ಹೀಗಿವೆ..
ಜೂನ್ 15ರಂದು ಜೆಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುವುದು. ಸಬ್ಜೆಕ್ಟ್ ಕೋಡ್ 15 ಮತ್ತು 60ರ ವಿಷಯಗಳು ಆದರ್ಶ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತವೆ. ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5.15 ರವರೆಗೆ ನಿಗದಿಪಡಿಸಿದೆ. ಸದರಿ ವಿಷಯಗಳ ತಾತ್ವಿಕ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಮಧ್ಯಾಹ್ನ 3.45 ಗಂಟೆಯವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45 ರಿಂದ ಸಾಯಂಕಾಲ 5.15 ಗಂಟೆಯವರೆಗೆ ನಡೆಸಲಾಗುವುದು.
ವಿವಿಧ ಪ್ರಕಾರದ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಬರಹಗಾರರ ಸೌಲಭ್ಯ ಅಥವಾ ಹೆಚ್ಚುವರಿ ಸಮುಯದ ಅಥವಾ ಎರಡನ್ನೂ ಪಡೆಯುವ ಅವಕಾಶವಿದೆ. ಈ ವಿದ್ಯಾರ್ಥಿಗಳು ಮೂರು ಗಂಟೆಯ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಹೆಚ್ಚುವರಿಯಾಗಿ 60 ನಿಮಿಷಗಳು, ಎರಡೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 50 ನಿಮಿಷಗಳು, ಎರಡು ಗಂಟೆಯ ಪ್ರಶ್ನೆಪತ್ರಿಕೆಗೆ 40 ನಿಮಿಷಗಳು, ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿಯಾಗಿ 30 ನಿಮಿಷಗಳನ್ನು ನೀಡಲಾಗುವುದು.
ಪ್ರಥಮ ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳಿಗೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ದ್ವಿತೀಯ ಭಾಷಾ ವಿಷಯಗಳು ಹಾಗೂ ತೃತೀಯ ಭಾಷಾ ವಿಷಯಗಳಿಗೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1:15ರವರೆಗೆ ಅವಧಿ ನಿಗದಿಪಡಿಸಿದೆ. ಪ್ರಥಮ ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆ ಬರೆಯಲು 3 ಗಂಟೆ ಮತ್ತು ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಹಾಗೂ ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಿಗೆ ಪರೀಕ್ಷೆ ಬರೆಯಲು 2 ಗಂಟೆ 45 ನಿಮಿಷ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ. ಎನ್.ಎಸ್.ಕ್ಯೂ.ಎಫ್ ವಿಷಯಗಳ ಪರೀಕ್ಷೆ ಬೆಳಗ್ಗೆ 10.15 ರಿಂದ 12.30ರವರೆಗೆ ನಡೆಯಲಿದೆ. ಎನ್.ಎಸ್.ಕ್ಯೂ.ಎಫ್. ಪರೀಕ್ಷಾ ವಿಷಯಗಳ ಪರೀಕ್ಷೆ ಬರೆಯಲು 2 ಗಂಟೆ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: SSLC Result 2024: ಈ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾರೂ ಫೇಲ್ ಆಗಿಲ್ಲ! ಶಿಕ್ಷಣ ಇಲಾಖೆ ಹೀಗೆ ಹೇಳಿದ್ದು ಯಾಕೆ?
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್ ವರಿ
ಬೆಂಗಳೂರು: ಮೇ 9ರಂದು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟವಿ, ಕಡಿಮೆ ಅಂಕ ಬಂತಲ್ಲ ಎಂದು ಬೇಜಾರಾಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿಗಳಿಗೆ (SSLC Result 2024) ಗುಡ್‌ನ್ಯೂಸ್ ನೀಡಿದೆ.
ಅಂದಹಾಗೇ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈಗಾಗಲೇ ಎಸ್‌ಎಸ್‌ಎಲ್‌ಸಿ 1, 2, 3ರ ಹೊಸ ಪರೀಕ್ಷಾ ಮಾದರಿಯನ್ನು ಪರಿಚಯಿಸಿದೆ. ಇದರ ಕ್ರಮವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರಲ್ಲಿ ಅನುತೀರ್ಣರಾಗಿದ್ದರೆ ಅಥವಾ ಕಡಿಮೆ ಅಂಕ ಪಡೆದು ಜಸ್ಟ್ ಪಾಸ್ ಆಗಿದ್ದರೆ ಅಂತಹ ವಿದ್ಯಾರ್ಥಿಗಳು ಪರೀಕ್ಷೆ 2ರಲ್ಲಿ ಅಂಕವನ್ನು ಸರಿದೂಗಿಸಿಕೊಳ್ಳಬಹುದಾಗಿದೆ. ಕೇವಲ ಫೇಲ್ ಆದವರು, ಕಡಿಮೆ ಅಂಕ ಬಂದವರು ಮಾತ್ರವಲ್ಲ ಹೆಚ್ಚು ಅಂಕ ಗಳಿಸಲು ಯಾವುದೇ ವಿದ್ಯಾರ್ಥಿಯಾದರು ಪರೀಕ್ಷೆ 2 ಹಾಗೂ 3ರಲ್ಲಿ ಹಾಜರಾಗಬಹುದು. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದಲೇ ಮುಂದಿನ 1 ತಿಂಗಳಲ್ಲಿ ಪರಿಹಾರ ಬೋಧನೆಯನ್ನು ಆಯೋಜಿಸಲಾಗುತ್ತದೆ. ಇದರಿಂದಾಗಿ ಪರೀಕ್ಷೆ 2-3ಕ್ಕೆ ಉತ್ತಮವಾಗಿ ಸಿದ್ಧರಾಗಲು ಸಹಾಯವಾಗುತ್ತದೆ.
ಎಸ್‌ಎಸ್‌ಎಲ್‌ಸಿಯ ಮೊದಲನೇ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯು ಫೇಲ್ ಆಗಿದ್ದರೆ, ಆ ವಿದ್ಯಾರ್ಥಿಯ ಫಲಿತಾಂಶವನ್ನು NC ಎಂದು ತೋರಿಸಲಾಗುತ್ತದೆ. NC ಅಂದರೆ Not Completed ಎಂದು ಪ್ರಕಟಿಸಲಾಗುತ್ತದೆ. ಈ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ 2-3ರಲ್ಲಿ ಬರೆದ ಪರೀಕ್ಷೆಗಳ ಪೈಕಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇಲೆ ಅಂತಿಮ ಫಲತಾಂಶವನ್ನು ಪ್ರಕಟಿಸಲಾಗುತ್ತದೆ. ಈ ಮೂಲಕ ಕಡಿಮೆ ಬಂದ ಫಲಿತಾಂಶವನ್ನು ಉತ್ತಮಗೊಳಿಸಿ ವಿದ್ಯಾರ್ಥಿಗಳಿಗೆ ಎರಡೆರಡು ಬಾರಿ ಅವಕಾಶ ಕೊಟ್ಟು ಅವರ ಏಳಿಗೆಗೆ ಇದು ಸಹಕಾರಿ ಆಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ