Site icon Vistara News

SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

SSLC Result 2024

ಬೆಂಗಳೂರು: ರಾಜ್ಯಾದ್ಯಂತ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Result 2024) ಫಲಿತಾಂಶವು ಮೇ 9ರಂದು ಪ್ರಕಟಿಸಲಾಗಿದೆ. ಇದೀಗ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಸ್ಕ್ಯಾನ್‌ ಪ್ರತಿ, ಮರು ಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಮಂಡಳಿಯ ವೆಬ್‌ಸೈಟ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮೇ 9ರಿಂದ 16ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಯನ್ನು ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಗಳ ಮರುಎಣಿಕೆಗೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಮೇ 13ರಿಂದ 22ವರೆಗೆ ಅರ್ಜಿ ಸಲ್ಲಿಸಬಹುದು ಜತೆಗೆ ಶುಲ್ಕವನ್ನು ಪಾವತಿಬಹುದಾಗಿದೆ.

ಇನ್ನೂ ನೇರವಾಗಿ ಮರು ಎಣಿಕೆಗಾಗಿ ಭೌತಿಕವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಬದಲಿಗೆ ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಿದೆ. ಮರು ಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್‌ ಪ್ರತಿಯನ್ನು ಪಡೆಯಬೇಕು.

ಇದನ್ನೂ ಓದಿ: SSLC 2 Exam Time Table : ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ಡೇಟ್‌ ಫಿಕ್ಸ್‌; ವೇಳಾಪಟ್ಟಿ ಹೀಗಿದೆ

ಸ್ಕ್ಯಾನ್‌ ಪ್ರತಿಯನ್ನು ಪಡೆದ ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದರೆ, ಅದನ್ನೂ ಖಚಿತಪಡಿಸಿಕೊಂಡ ನಂತರವಷ್ಟೇ ಮರುಎಣಿಕೆಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಮರುಎಣಿಕೆಗಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ರದ್ದುಗೊಳಿಸಲಾಗಿದೆ. ಮರುಎಣಿಕೆ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಇನ್ನೂ ಮರುಎಣಿಕೆಯು ಉಚಿತವಾಗಿದ್ದು ಪ್ರತ್ಯೇಕ ಶುಲ್ಕವಿರುವುದಿಲ್ಲ. ಮರು ಎಣಿಕೆ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಪರಿಶೀಲಿಸಿ, ನಂತರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಸಹಾಯವಾಣಿಗೆ ಕರೆ ಮಾಡಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ, ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪಡೆಯುವ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಯಾವುದೇ ಮಾಹಿತಿ ಪಡೆಯಬಹುದಾಗಿದೆ. ಹೀಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಹಾಯವಾಣಿಯನ್ನು ಆರಂಭವಿಸಿದೆ. ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 080 23310075, 23310076ಕ್ಕೆ ಕರೆ ಮಾಡಬಹುದು..

SSLC Result 2024: ಎಸ್‌ಎಸ್‌ಎಲ್‌ಸಿ 2, 3ನೇ ಪರೀಕ್ಷೆ ಬರೆಯುವವರಿಗೆ ಗುಡ್‌ ನ್ಯೂಸ್‌! ಇರಲಿದೆ ಸ್ಪೆಷಲ್‌ ಕ್ಲಾಸ್‌

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. ಅಲ್ಲದೆ, ಫಲಿತಾಂಶವನ್ನು ಸುಧಾರಣೆ ಮಾಡಿಕೊಳ್ಳುವವರು, ಅನುತ್ತೀರ್ಣ ಹೊಂದಿದವರ ಸಲುವಾಗಿ ವಿಶೇಷ ಬೋಧನೆ ವ್ಯವಸ್ಥೆಯನ್ನು ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಅಂದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬಂದಿಲ್ಲ. ಕೆಲವು ಕಟ್ಟುನಿಟ್ಟಿನ ಕ್ರಮದಿಂದಾಗಿ ಭಾರಿ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಶೇಕಡಾ 20ರಷ್ಟು ಗರೇಸ್‌ ಮಾರ್ಕ್ಸ್‌ ಅನ್ನು ಕೊಟ್ಟು ಪಾಸ್‌ ಮಾಡಲಾಗಿತ್ತು. ಮುಂದೆ ಬರುವ 2, 3ನೇ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕ್ರಮವನ್ನು ತೆಗೆದುಕೊಂಡಿದೆ. ಅಂಥ ಮಕ್ಕಳಿಗೆ ಮುಂದಿನ ಒಂದು ತಿಂಗಳಲ್ಲಿ “ಪರಿಹಾರ ಬೋಧನೆ” ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.

ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಪರಿಹಾರ ಕ್ರಮವಾಗಿ ಶಿಕ್ಷಣ ಇಲಾಖೆಯು ಪರೀಕ್ಷೆ-1 ರಲ್ಲಿ ಉತ್ತಮ ಸಾಧನೆ ಮಾಡದ ಅಥವಾ ತಮ್ಮ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಬಯಸುವ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ಒಂದು ತಿಂಗಳಲ್ಲಿ ಪರಿಹಾರ ಬೋಧನೆಯನ್ನು ಆಯೋಜಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆ-2 ಮತ್ತು ಪರೀಕ್ಷೆ-3ಕ್ಕೆ ಉತ್ತಮವಾಗಿ ಸಿದ್ಧರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

ಶಿಕ್ಷಣ ಇಲಾಖೆ ಈ ಬಾರಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಡಲಾಗಿದೆ.

ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದ್ದು, ಶೇಕಡಾ 20 ಗ್ರೇಸ್ ಮಾರ್ಕ್ಸ್‌ ಕೊಟ್ಟರೂ ಕಡಿಮೆ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿ ಹಿತದೃಷ್ಟಿಯಿಂದ ಗ್ರೇಸ್‌ ಮಾರ್ಕ್ಸ್‌ ನೀಡಿದೆ ಎನ್ನಲಾಗಿದೆ. ಒಟ್ಟು 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್‌ ಸಿಕ್ಕಿದೆ.

ವೆಬ್‌ ಕಾಸ್ಟಿಂಗ್‌ನಲ್ಲಿ ನಡೆದ ಪರೀಕ್ಷೆ

ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್ ವಿಧಾನವನ್ನು ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆಯಾಗಿರುವ ಫಲಿತಾಂಶವನ್ನು ಉತ್ತಮ ಪಡಿಸಲು ಸರ್ಕಾರ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ, ಒಂದು ಬಾರಿಯ ಕ್ರಮವಾಗಿ, 2024ರ ಎಲ್ಲ 3 ಎಸ್ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಎಲ್ಲ ವಿಷಯಗಳಲ್ಲಿ ನೀಡುವ ಕೃಪಾಂಕಗಳನ್ನು ಆಕರ್ಷಿಸಲು ಪಡೆಯಬೇಕಾದ ಅರ್ಹ ಅಂಕಗಳನ್ನು ಶೇ. 35 ರಿಂದ ಶೇ. 25ಕ್ಕೆ ಇಳಿಸಲಾಗಿದೆ ಮತ್ತು ಕೃಪಾಂಕದ ಪ್ರಮಾಣವನ್ನು ಶೇ. 10 ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು, ಮೇಲಿನ ಕೋಷ್ಟಕದಲ್ಲಿನಂತೆ, 73.40% ಆಗಿದೆ. ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version