Site icon Vistara News

SSLC Result : ರಾಜ್ಯ ಶಿಕ್ಷಣ ಗುಣಮಟ್ಟ ಕುಸಿತ, ICSE-CBSE ಕಡೆ ವಲಸೆ; ಇಲಾಖೆ ವಿರುದ್ಧ ಕ್ಯಾಮ್ಸ್‌ ಕಟು ಟೀಕೆ

sslc result

ಬೆಂಗಳೂರು: ಕರ್ನಾಟಕದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರಸ್ತುತ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಕಲಿಕೆಯ ಗುಣ ಮಟ್ಟ ಕುಸಿದಿದೆ (SSLC Result) ಎಂದು ಖಾಸಗಿ ಶಾಲಾ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

ಗುಣಮಟ್ಟ ಹೆಚ್ಚಿಸುವಲ್ಲಿ ಯಾವುದೇ ಹೆಚ್ಚು ಪರಿಣಾಮಕಾರಿಯಾಗಿ ರೂಪುರೇಷಗಳನ್ನು ಮಾಡುತ್ತಿಲ್ಲ. ಬದಲಿಗೆ ಶಿಕ್ಷಣ ಇಲಾಖೆ ದಿನಕ್ಕೊಂದು ನಿಯಮಗಳನ್ನು ಮಾಡುತ್ತಿದೆ. ಆದರೆ ತಾವೇ ನಡೆಸುವ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನ ಮಾಡದೇ, ಕೇವಲ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ನಿಯಮ ಎಂಬಂತೆ ವರ್ತಿಸುತ್ತಿದೆ ಎಂದು ಶಶಿಕುಮಾರ್‌ ಆಕ್ರೋಶ ಹೊರಹಾಕಿದರು.

ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌

ಸುಖಾಸುಮ್ಮನೆ ಕಿರುಕುಳ, ದಬ್ಬಾಳಿಕೆ ಹಾಗೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಂಡು ಕೆಳ ಹಂತದ ಅಧಿಕಾರಿಗಳು ಲಾಭ ಪಡೆಯುತ್ತಿದ್ದಾರೆ. ಬಿಇಒ (BEO) ಹಾಗೂ ಡಿಡಿಪಿಐ (DDPI) ಹಂತದ ಎಲ್ಲ ಅಧಿಕಾರಿಗಳು ಕೇವಲ ಆಡಳಿತಾತ್ಮಕ ವ್ಯವಹಾರಗಳನ್ನು ಮಾಡುತ್ತಾ, ಸರ್ಕಾರಿ ಶಾಲೆಗಳಲ್ಲಿ ಯಾವುದೇ ಗುಣಮಟ್ಟದ ಬಗ್ಗೆ ಕ್ರಮ ವಹಿಸದೇ ಇರುವುದೇ ಫಲಿತಾಂಶ ಕುಸಿಯಲು ಕಾರಣ ಎಂದು ಕಿಡಿಕಾರಿದರು.

ಸೋಮವಾರ ಸುದ್ಧಿಗೋಷ್ಠಿ ನಡೆಸಿದ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲೆ ಶಿಕ್ಷಣ ಗುಣಮಟ್ಟ ಕಾಪಾಡದೇ ಇರುವುದರಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕುಸಿತ ಉಂಟಾಗಿದೆ. 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಿರಾಶದಾಯವಾಗಿದೆ.

ಸಿಸಿಟಿವಿ ಹಾಕಿದ್ದಕ್ಕೆ ಫಲಿತಾಂಶ ಕಡಿಮೆ ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಅಧಿಕಾರಿಗಳ ಬಳಿ ಚರ್ಚೆ ಮಾಡಿದಾಗ, ಮಕ್ಕಳು ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರನ್ನು ಪಾಸ್ ಮಾಡಬೇಕು ಎಂದಿದ್ದರು. ಹತ್ತಾರು ವರ್ಷಗಳಿಂದ ಶಾಲೆಯಲ್ಲಿ ಕಲಿತರೂ 10ನೇ ತರಗತಿಗೆ ಬಂದಾಗ ಕನಿಷ್ಠ 25 ಅಂಕ ಗಳಿಸಲು ಆಗದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸರ್ಕಾರವೇ ಕಾರಣ. ಇದಕ್ಕೆ ಪರಿಹಾರ ಹುಡುಕುವ ಬದಲು ಮಕ್ಕಳ ಹಿತದೃಷ್ಟಿಯ ಹೆಸರಲ್ಲಿ ಗ್ರೇಸ್‌ ಅಂಕದ ಪ್ರಮಾಣ ಹೆಚ್ಚಿಸುತ್ತಿರುವುದು ಸರಿಯಲ್ಲ ಎಂದರು.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್, ವಿಡಿಯೊ ಇದ್ದವರನ್ನೆಲ್ಲ ಬಂಧಿಸ್ತಾರಾ?; ಆಪ್ತರ ಬಂಧನದ ಬಗ್ಗೆ ಪ್ರೀತಂ ಗೌಡ ಫಸ್ಟ್‌ ರಿಯಾಕ್ಷನ್

ಗುಣಮಟ್ಟದ ಪಠ್ಯ ಪುಸ್ತಕ ಇಲ್ಲದೆ CBSE-ICSE ಕಡೆ ವಲಸೆ

ಅಹಿಂದ ಸೇರಿ ಎಲ್ಲಾ ವರ್ಗದ ಜನರ ಪರ ಇರುವ ಸಿಎಂ ಸಿದ್ದರಾಮಯ್ಯರಿಗೆ ಕ್ಯಾಮ್ಸ್‌ನಿಂದ ಮನವಿ ಮಾಡುತ್ತೇವೆ. ಪ್ರತಿ ಮಗುವಿಗೂ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸಬೇಕು. ಪ್ರತಿ ಬಾರಿ ಪಠ್ಯಕ್ರಮವು ರಾಜಕೀಯವಾಗಿ ಪರಿಷ್ಕರಣೆ ಮಾಡುತ್ತಿದೆ. ಕಳೆದ 10 ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಶಿಕ್ಷಣ ಇಲಾಖೆಯಿಂದ ಗುಣಮಟ್ಟದ ಪಠ್ಯ ಪುಸ್ತಕ ರಚನೆ ಆಗದೇ ಇದ್ದಲ್ಲಿ ಇದರ ಅಡ್ಡಪರಿಣಾಮ ಮುಂದೆ ಅನುಭವಿಸಬೇಕಾಗುತ್ತೆ.

ಮಕ್ಕಳಿಗೆ ಬೇಕಾದಂತಹ ಸಂಯೋಜಿತ ಪಠ್ಯ ರಚನೆಯಾಗದೆ ಇದ್ದರೆ, ಪೋಷಕರು ಅನಿವಾರ್ಯವಾಗಿ CBSE-ICSE ಕಡೆ ಹೋಗಬೇಕಾಗುತ್ತದೆ. ಶಿಕ್ಷಣ ಇಲಾಖೆಯು ಗುಣಮಟ್ಟ ಶಿಕ್ಷಣ ಕಾಪಾಡದಿರುವ ಪರಿಣಾಮ, ಇದನ್ನು ತಕ್ಷಣ ಸರಿ ಪಡಿಸಬೇಕು.ಈ ಮೂಲಕ ರಾಜ್ಯದ ವಿದ್ಯಾರ್ಥಿಗಳು ನೆರೆಹೊರೆ ರಾಜ್ಯದ ಪಠ್ಯಕ್ಕೆ ಪೂರಕವಾಗಿ ರಾಷ್ಟ್ರಮಟ್ಟದ ಶಿಕ್ಷಣದ ಪೈಪೋಟಿಗೆ ಸಿದ್ದ ಮಾಡುವುದು ಸರ್ಕಾರದ ಆದ್ಯ ಜವಾಬ್ದಾರಿಯಾಗಿದೆ ಎಂದರು.

ಶಿಕ್ಷಣ ಸಚಿವರು ಯಾರು ಎಂಬುದೇ ಗೊಂದಲ

ಪ್ರಸ್ತುತ ಶಿಕ್ಷಣ ವ್ಯವಸ್ಥೆ ಅತಂತ್ರ ಸ್ಥಿತಿಯಲ್ಲಿ ಇದೆ. ಇದಕ್ಕೆ ಇಲಾಖೆಯ ಮೇಲಾಧಿಕಾರಿಗಳು, ರಾಜಕೀಯ ಮುಖಂಡರು, ಸರ್ಕಾರ ಎಲ್ಲರೂ ಹೊಣೆಯಾಗಿದ್ದಾರೆ. ಶಿಕ್ಷಣ ಮಂತ್ರಿಗಳು ನಮಗೆ ಲಭ್ಯವೇ ಇರುವುದಿಲ್ಲ. ಸಚಿವರ ಪಿಎ ಅವರೇ ಮಂತ್ರಿಗಳ ರೀತಿ ವರ್ತನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ಸಚಿವರು ಯಾರು ಎಂಬ ಅನುಮಾನ ಮೂಡುತ್ತೆ. ಕಾರಣ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಕಿಶೋರ್ ಅವರೇ ಸಚಿವರಾಗಿದ್ದಾರೆ. ಎಲ್ಲ ಪ್ರಶ್ನೆಗಳಿಗೆ ಸಚಿವರ ಆಪ್ತ ಕಾರ್ಯದರ್ಶಿ ಕಿಶೋರ್ ಉತ್ತರ ನೀಡುತ್ತಾರೆ ಇದು ನಿಜಕ್ಕೂ ಅತ್ಯಂತ ದುರಾದೃಷ್ಟಕರ ಎಂದು ಖಾಸಗಿ ಶಾಲೆಗಳ ಒಕ್ಕೂಟ ಸಿಡಿದೆದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version