ಬೆಂಗಳೂರು: ಎಸ್ಎಸ್‌ಎಲ್‌ಸಿಯಲ್ಲಿ (SSLC Results ) ಕಳೆದ ಹತ್ತು ವರ್ಷಗಳಲ್ಲಿಯೇ ಈ ಬಾರಿ ಅತ್ಯುತ್ತಮ ಫಲಿತಾಂಶ ಬಂದಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ನೂರಕ್ಕೆ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಇದನ್ನೇ ಎತ್ತಿ ತೋರಿಸುತ್ತಿದೆ.
2020ರಲ್ಲಿ ಕೇವಲ 11 ವಿದ್ಯಾರ್ಥಿಗಳು ಮಾತ್ರ 625ಕ್ಕೆ 625 ಅಂಕ ಪಡೆದಿದ್ದರು. ಈ ಬಾರಿ ಈ ಸಂಖ್ಯೆ 145ಕ್ಕೆ ಏರಿದೆ. “ಕಳೆದ ವರ್ಷ ಅಂದರೆ 2021ರಲ್ಲಿ 158 ವಿದ್ಯಾರ್ಥಿಗಳು 625 ಅಂಕ ಪಡೆದಿದ್ದರು. ಆದರೆ ಕೊರೊನಾ ಕಾರಣದಿಂದ ಕೆಲವು ವಿನಾಯಿತಿ ನೀಡಿದ್ದರಿಂದ ಈ ವರ್ಷದ ಫಲಿತಾಂಶ ಹೆಚ್ಚು ಮುಖ್ಯವಾಗುತ್ತದೆʼʼ ಎಂದು ಸಚಿವರು ಹೇಳಿದ್ದಾರೆ.
ಶೇಕಡಾ ನೂರರಷ್ಟು ಫಲಿತಾಂಶ ಪಡೆದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಎಂದಿನಂತೆ ಅನುದಾನವಿಲ್ಲದ, ಖಾಸಗಿ ಶಾಲೆಗಲ್ಲಿಯೇ ಓದಿದ್ದಾರೆ. 145 ವಿದ್ಯಾರ್ಥಿಗಳಲ್ಲಿ 116 ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಓದಿದವರಾಗಿದ್ದಾರೆ. ಉಳಿದ 21 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದಿದ್ದರೆ, 8 ವಿದ್ಯಾರ್ಥಿಗಳು ಅನುದಾನಿತ ಶಾಲೆಯಲ್ಲಿ ಓದಿದ್ದಾರೆ.
ಈ ಬಾರಿ ಅತಿ ಹೆಚ್ಚು ಅಂಕ ಪಡೆದವರ ವಿವರ
ಈ ಬಾರಿ 309 ವಿದ್ಯಾರ್ಥಿಗಳು ಒಂದು ಅಂಕದಿಂದ ʼ ಔಟ್ ಆಫ್ ಔಟ್ʼನಿಂದ ವಂಚಿತರಾಗಿದ್ದಾರೆ. 2020ರಲ್ಲಿ 14 ವಿದ್ಯಾರ್ಥಿಗಳು ಮಾತ್ರ 624 ಅಂಕ ಪಡೆದಿದ್ದರು. ಈ ವರ್ಷ 624 ಅಂಕ ಪಡೆದವರಲ್ಲಿ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 237 ಆದರೆ ಅನುದಾನಿತ ಶಾಲೆಗಳ 24 ಹಾಗೂ ಸರ್ಕಾರಿ ಶಾಲೆಯ 48 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ| SSLC Results | ವಿಜ್ಞಾನ ಕಬ್ಬಿಣದ ಕಡಲೆ, ಸಮಾಜ ಸುಲಭ
ಈ ವರ್ಷ 472 ವಿದ್ಯಾರ್ಥಿಗಳು 623ಅಂಕ, 615 ವಿದ್ಯಾರ್ಥಿಗಳು 622 ಅಂಕ, 706 ವಿದ್ಯಾರ್ಥಿಗಳು 621 ಅಂಕ ಹಾಗೂ773 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದಾರೆ.
ಅನುದಾನಿತ ಶಾಲೆಗಳಿಗಿಂತ ಸರ್ಕಾರಿ ಶಾಲೆಯೇ ಮೇಲು!
ವಿಶೇಷ ವೆಂದರೆ ಈ ಬಾರಿ ಅನುದಾನಿತ ಶಾಲೆಗಳ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೇ ಹೆಚ್ಚಿನ ಅಂಕ ಪಡೆದಿದ್ದಾರೆ. ಅನುದಾನಿತ ಶಾಲೆಯ 8 ವಿದ್ಯಾರ್ಥಿಗಳು 625 ಅಂಕ ಪಡೆದಿದ್ದರೆ, ಸರ್ಕಾರಿ ಶಾಲೆಯ 21 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. ಅನುದಾನಿತ ಶಾಲೆಯ 24 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದರೆ, ಸರ್ಕಾರಿ ಶಾಲೆಯ 48 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದಾರೆ. ಅನುದಾನಿತ ಶಾಲೆಯ 75 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದರೆ ಸರ್ಕಾರಿ ಶಾಲೆಯ 129 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.