ವಿದೇಶಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ನಡೆಸಬೇಕು ಎನ್ನುವುದು ಅನೇಕರ ಕನಸು. ಆದರೆ ಈ ವಿಚಾರದಲ್ಲಿ ಎಲ್ಲರ ಕನಸು ನನಸಾಗುವುದಿಲ್ಲ. ಆದರೆ ವಿದ್ಯಾಭ್ಯಾಸದ ಕನಸನ್ನು ಹೊತ್ತು ವಿದೇಶದಲ್ಲಿ ಒಂಟಿ ಜೀವನ ನಡೆಸುವುದು ಸುಲಭದ ಮಾತಲ್ಲ. ಸರಿಯಾದ ಸಿದ್ಧತೆ ಇಲ್ಲದೆ ಹೋದರೆ ಆ ಕನಸು ಕೂಡ ಕಮರಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕಾಗಿಯೇ ವಿದೇಶದಲ್ಲಿದ್ದಾಗ ಯಾವ ರೀತಿಯಲ್ಲಿ ನೀವು ಇರಬೇಕು ಎನ್ನುವುದಕ್ಕೆ ಇಲ್ಲಿವೆ ಕೆಲವು (Education Guide) ಸಲಹೆಗಳು.
ಯೋಜನೆ ರೂಪಿಸಿಕೊಳ್ಳಿ
ಭಾರತದ ಶಿಕ್ಷಣ ವ್ಯವಸ್ಥೆಗೂ ವಿದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಗೂ (education news) ಸಾಕಷ್ಟು ವ್ಯತ್ಯಾಸ ಇರುತ್ತದೆ. ಹಾಗಾಗಿ ನೀವು ನಿಮ್ಮ ಶಿಕ್ಷಣ ಕ್ರಮದ ಬಗ್ಗೆ ವ್ಯವಸ್ಥೆ ರೂಪಿಸಿಕೊಳ್ಳಬೇಕಾದದ್ದು ಅವಶ್ಯ. ನಿಮ್ಮ ಪರೀಕ್ಷೆಗಳು ಯಾವಾಗ ಆರಂಭವಾಗಲಿವೆ? ಅದಕ್ಕೆ ಓದಿಕೊಳ್ಳುವುದಕ್ಕೆ ಎಷ್ಟು ಸಮಯ ಬೇಕು ಎನ್ನುವುದನ್ನು ನೀವು ಮುಂಚಿತವಾಗಿಯೇ ಗಮನಿಸಿಟ್ಟುಕೊಳ್ಳಬೇಕು. ಆದಷ್ಟು ನಿತ್ಯ ಓದುವುದು ಒಳ್ಳೆಯದು. ಹಾಗೊಂದು ವೇಳೆ ಆಗದಿದ್ದರೆ ಆ ವಾರದ ಪಾಠವನ್ನು ಅದೇ ವಾರದಲ್ಲಿ ಓದಿ, ಅನುಮಾನಗಳೇನಾದರೂ ಇದ್ದರೆ ನಿಮ್ಮ ಶಿಕ್ಷಕರ ಬಳಿ ಬಗೆಹರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮಗೆ ಪರೀಕ್ಷೆ ಸಮಯದಲ್ಲಿ ಒಮ್ಮೆಲೆ ಒತ್ತಡ ಬೀಳುವುದು ಕಡಿಮೆಯಾಗುತ್ತದೆ.
ಇದನ್ನೂ ಓದಿ: Viral News : ಅಮ್ಮ ಪರೀಕ್ಷೆ ಹಾಲ್‌ನಲ್ಲಿ, ಶಿಶು ಪೊಲೀಸರ ಕೈಯಲ್ಲಿ!
ವ್ಯವಸ್ಥಿತರಾಗಿರಿ
ನೀವು ಇರುವುದು ತಾಯ್ನಾಡಲ್ಲಿ ಅಲ್ಲ ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಅಧ್ಯಯನಕ್ಕೆ ಏನೇನು ಬೇಕಾಗುತ್ತದೆ ಎನ್ನುವುದನ್ನು ಮೊದಲೇ ಗೊತ್ತುಮಾಡಿಕೊಂಡು ತಂದಿಟ್ಟುಕೊಳ್ಳಿ. ಯಾವುದಾದರೂ ಪುಸ್ತಕ ನಿಮ್ಮ ಬಳಿ ಇಲ್ಲವಾದಲ್ಲಿ ಅದನ್ನು ಗ್ರಂಥಾಲಯದಿಂದ ಅಥವಾ ಸ್ನೇಹಿತರಿಂದ ಪಡೆದು ನಕಲು ಮಾಡಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಪರೀಕ್ಷೆಯ ಸಮಯದಲ್ಲಿ ಪುಸ್ತಕಕ್ಕಾಗಿ ಅಲೆಯುವುದು ತಪ್ಪುತ್ತದೆ.
ಓದಿನ ಸ್ಥಳ, ಸಮಯ ಮುಖ್ಯ
ಎಲ್ಲರಿಗೂ ಎಲ್ಲ ಸ್ಥಳಗಳಲ್ಲೂ, ಎಲ್ಲ ಸಮಯದಲ್ಲೂ ಓದಲು ಸಾಧ್ಯವಿಲ್ಲ. ಕೆಲವರಿಗೆ ಕೆಲವು ಸ್ಥಳದಲ್ಲಿ ಕುಳಿತು ಓದಿದರೆ ಹೆಚ್ಚು ಏಕಾಗ್ರತೆ ಉಂಟಾಗುತ್ತದೆ. ಹಾಗೆಯೇ ಕೆಲವು ನಿಗದಿತ ಸಮಯದಲ್ಲಿ ಹೆಚ್ಚಿನ ಏಕಾಗ್ರತೆ ಇರುತ್ತದೆ. ನಿಮಗೆ ಏಕಾಗ್ರತೆ ಹುಟ್ಟಿಸುವ ಸ್ಥಳ ಮತ್ತು ಸಮಯ ಯಾವುದು ಎಂದು ತಿಳಿದುಕೊಳ್ಳಿ. ಆ ಸಮಯದಲ್ಲೇ ಮತ್ತು ಸ್ಥಳದಲ್ಲೇ ಓದುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಆದಷ್ಟು ಬೇಗ ವಿಷಯಗಳನ್ನು ನೀವು ಕಲಿಯಬಹುದು. ಹಾಗೆಯೇ ಓದಿನ ಮಧ್ಯದಲ್ಲಿ ಆಗಾಗ ವಿರಾಮವೂ ಅತಿಮುಖ್ಯ. ವಿರಾಮ ತೆಗೆದುಕೊಂಡು ಮೆದುಳಿಗೆ ವಿಶ್ರಾಂತಿ ಕೊಡುವುದನ್ನು ಮರೆಯಬೇಡಿ.
ಇದನ್ನೂ ಓದಿ: Yoga Camp: ಜು.12ರಿಂದ ರಾಜ್ಯ, ರಾಷ್ಟ್ರೀಯ, ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರ ಯೋಗ ಜೀವನ ದರ್ಶನ-2023
ವೇಳಾಪಟ್ಟಿ ಅಗತ್ಯ
ಯಾವುದೇ ಕೆಲಸ ಮಾಡಬೇಕಾದರೆ ಮುಂಚೆಯೇ ಯೋಜನೆ ಹಾಕಿಟ್ಟುಕೊಳ್ಳುವುದು ಒಳ್ಳೆಯದು. ಹಾಗೆ ಮಾಡುವುದರಿಂದ ಒಂದು ಶಿಸ್ತು ನಮ್ಮಲ್ಲಿ ಬೆಳೆಯುತ್ತದೆ. ಹಾಗಾಗಿ ನೀವು ನಿಮ್ಮ ದೈನಂದಿನ ಕೆಲಸಗಳ ವೇಳಾಪಟ್ಟಿಯನ್ನು ರಚಿಸಿಟ್ಟುಕೊಳ್ಳಿ. ಯಾವ ಸಮಯದಲ್ಲಿ ಯಾವುದು ಸೂಕ್ತ, ಅದಕ್ಕೆ ಎಷ್ಟು ಸಮಯ ಬೇಕು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ವೇಳಾಪಟ್ಟಿ ಮಾಡಿಟ್ಟುಕೊಳ್ಳಿ. ವೇಳಾಪಟ್ಟಿ ಮಾಡುವಾಗ ಹೆಚ್ಚು ಸಮಯ ಓದಬೇಕು ಎಂದು ವಿಪರೀತವಾಗಿ ಯೋಚಿಸುವುದು ಬೇಡ. ವಾಸ್ತವವಾಗಿ ಯೋಚನೆ ಮಾಡಿ ಸಮಯ ಕೊಟ್ಟುಕೊಳ್ಳಿ. ಅದನ್ನು ಆಗಾಗ ನೆನಪಿಸುತ್ತಿರುವಂತೆ ಮಾಡಬೇಕೆಂದರೆ ಆ ವೇಳಾಪಟ್ಟಿಯನ್ನು ನಿಮ್ಮ ಕಣ್ಣಿಗೆ ಕಾಣುವಂತೆ ಗೋಡೆಯ ಮೇಲೆ ಅಂಟಿಸಿಟ್ಟುಕೊಳ್ಳಿ. ಮತ್ತು ಅದರಂತೆ ನಡೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
ಸಂದೇಹಗಳಿಗೆ ಪರಿಹಾರವಿರಲಿ
ಓದುವಾಗ ಸಂದೇಹ ಬರುವುದು ಸಹಜವೇ. ಅದನ್ನು ಕೇಳಿ ಬಗೆಹರಿಸಿಕೊಳ್ಳುವುದಕ್ಕೆ ಹಿಂಜರಿಕೆ ಬೇಡ. ನಿಮ್ಮ ಪ್ರಾಧ್ಯಾಪಕರು ಅಥವಾ ಸ್ನೇಹಿತರ ಬಳಿ ಸಂದೇಹವನ್ನು ಕೇಳಿ ಬಗೆಹರಿಸಿಕೊಳ್ಳಿ. ಒಂದು ವೇಳೆ ನಿಮಗೆ ವಿದೇಶಿ ಸ್ನೇಹಿತರ ಜತೆ ಸ್ನೇಹ ಕಷ್ಟವಾಗುತ್ತಿದೆ ಎನಿಸಿದರೆ ಭಾರತ ಮೂಲದವರನ್ನೇ ಹುಡುಕಿಕೊಂಡು ಸ್ನೇಹ ಬೆಳೆಸಿಕೊಳ್ಳಿ. ನಿಮ್ಮದೊಂದು ಗುಂಪನ್ನು ರಚಿಸಿಕೊಳ್ಳಿ. ಅದರಿಂದ ತಾಯ್ನಾಡಿನಿಂದ ದೂರವಿರುವ ನೋವೂ ಕೊಂಚ ಮಟ್ಟಿಗೆ ದೂರವಾಗುತ್ತದೆ. ಹಾಗೆಯೇ ಭಾರತೀಯ ಸ್ನೇಹಿತರೊಂದಿಗೆ ನೀವು ಹಿಂಜರಿಕೆಯಿಲ್ಲದೆ ಇರಬಹುದು.
ಪ್ರಶ್ನೆ ಪತ್ರಿಕೆಗಳ ಅಭ್ಯಾಸ
ನಿಮ್ಮ ಇಷ್ಟು ವರ್ಷಗಳ ಶಿಕ್ಷಣಕ್ಕೂ (education news) ಈಗಿನ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಪರೀಕ್ಷೆಯಲ್ಲೂ ಆ ವ್ಯತ್ಯಾಸ ಇದ್ದಿರಬಹುದು. ಹಾಗಾಗಿ ನಿಮ್ಮ ಕಾಲೇಜಿನ ಈ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ಅದಕ್ಕೆ ಉತ್ತರಿಸುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದಾಗಿ ನಿಮಗೆ ಪರೀಕ್ಷೆ ಹೇಗಿರುತ್ತದೆ ಎನ್ನುವ ಅಂದಾಜು ಸಿಗುತ್ತದೆ ಹಾಗೆಯೇ ಅದರ ಬಗೆಗಿನ ಭಯವೂ ಕಡಿಮೆಯಾಗುತ್ತದೆ.
ಒತ್ತಡ ನಿರ್ವಹಣೆ
ವಿದ್ಯಾಭ್ಯಾಸದ ಸಮಯದಲ್ಲಿ ಒತ್ತಡ ಸಹಜ. ಅದರಲ್ಲೂ ಕುಟುಂಬದಿಂದ ದೂರಾಗಿ, ಸಾವಿರಾರು ಕಿ.ಮೀ ದೂರದಲ್ಲಿ ಒಬ್ಬಂಟಿಯಾಗಿದ್ದಾಗ ಹೆಚ್ಚಿನ ಒತ್ತಡಗಳೇ ನಿಮ್ಮ ಮೇಲಿರುತ್ತದೆ. ಆದರೆ ಭಯ ಬೇಡ. ನಿಮ್ಮ ಒತ್ತಡಗಳು ಶಿಕ್ಷಣಕ್ಕೆ ತೊಂದರೆ ಕೊಡದಂತೆ ನಿರ್ವಹಿಸಿಕೊಳ್ಳುವುದನ್ನು ನೀವು ಕಲಿಯಬೇಕು. ಅದಕ್ಕಾಗಿ ಆಗಾಗ ವಿರಾಮಗಳು, ಸ್ನೇಹಿತರ ಜತೆ ಮಾತುಕತೆ ಮಾಡುತ್ತಿರಿ. ಹೆಚ್ಚಿನ ರಜೆ ಸಿಕ್ಕಾಗ ಆ ದೇಶದ ವಿಶೇಷ ಸ್ಥಳಗಳಿಗೆ ಪ್ರವಾಸ ಹೋಗಿ ಮನಸ್ಸಿಗೆ ನೆಮ್ಮದಿಯಾಗುವಂತೆ ಮಾಡಿಕೊಳ್ಳಿ. ಧ್ಯಾನ, ಯೋಗದಂತಹ ಅಭ್ಯಾಸಗಳು ಕೂಡ ನಿಮ್ಮನ್ನು ಒತ್ತಡದಿಂದ ದೂರವಿರಲು ಸಹಾಯ ಮಾಡುತ್ತವೆ.
ಕಾಲೇಜಿನಿಂದ ಸಹಾಯ
ಕಾಲೇಜು ಅಥವಾ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಸಹಾಯಕ್ಕೆ ಬರುವಂತಹ ಅನೇಕ ಸಂಪನ್ಮೂಲಗಳನ್ನು (ಪುಸ್ತಕಗಳು, ದಾಖಲೆಗಳು) ಹೊಂದಿರುತ್ತವೆ. ಅವುಗಳನ್ನು ನೀವು ಕೇಳಿ ಪಡೆದುಕೊಳ್ಳಬಹುದು. ಅದಲ್ಲದೆ ಕೆಲವು ಕಾಲೇಜುಗಳಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆಂದೇ ಸಲಹೆಗಾರರೂ ಇರುತ್ತಾರೆ. ಅವರೊಂದಿಗೆ ನೀವು ಮಾತನಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಅಥವಾ ಸಲಹೆಗಳನ್ನು ಪಡೆದುಕೊಳ್ಳಬಹುದು.
ಅತಿಯಾಗಿ ಓದಿದಾಕ್ಷಣ ನೀವು ಅತಿ ಹೆಚ್ಚು ಅಂಕ ಪಡೆದುಕೊಳ್ಳುತ್ತೀರಿ ಎನ್ನುವುದು ಸುಳ್ಳು ಎಂದು ನೆನಪಿನಲ್ಲಿಟ್ಟುಕೊಳ್ಳಿ. ಹಾಗೆ ಮಾಡುವುದರಿಂದ ನಿಮಗೆ ಒತ್ತಡ ಹೆಚ್ಚಾಗುತ್ತದೆಯಷ್ಟೇ. ಓದುವಾಗಲೂ ಬುದ್ಧಿವಂತಿಕೆಯಿಂದ ಓದಬೇಕಾಗುತ್ತದೆ. ಮನಸ್ಸನ್ನು ಶಾಂತವಾಗಿಟ್ಟುಕೊಂಡು ಓದುವುದರಿಂದ ಹೆಚ್ಚಿನ ಜ್ಞಾನಾರ್ಜನೆಯಾಗುತ್ತದೆ.