Site icon Vistara News

ಇನ್ನು ಸ್ನಾತಕೋತ್ತರ ಕೋರ್ಸ್‌ಗಳಿಗೂ ಪ್ರವೇಶ ಪರೀಕ್ಷೆ ನಡೆಸಲಿದೆ ಯುಜಿಸಿ

ಯುಜಿಸಿ

ನವದೆಹಲಿ: ಪದವಿ ಪೂರ್ವ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ನಡೆಸುವಂತೆ ಸ್ನಾತಕೋತ್ತರ ಕೋರ್ಸ್‌ಗಳಿಗೂ ಪ್ರವೇಶ ಪರೀಕ್ಷೆ ನಡೆಸಲು ವಿಶ್ವ ವಿದ್ಯಾನಿಲಯಗಳ ಧನಸಹಾಯ ಆಯೋಗ ( ಯುಜಿಸಿ ) ನಿರ್ಧರಿಸಿದೆ.

ಮೊದಲಿಗೆ 42 ಕೇಂದ್ರೀಯ ವಿಶ್ವ ವಿದ್ಯಾನಿಲಯಗಳಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ ಇದು ಜಾರಿಗೆ ಬರಲಿದೆ ಎಂದು ಯುಜಿಸಿ ತಿಳಿಸಿದೆ.

“ಸ್ನಾತಕೋತ್ತರ ಕೋರ್ಸ್‌ ಗಳ ಪ್ರವೇಶಕ್ಕೆ ಜುಲೈ ಮೂರನೇ ವಾರದಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಜೂನ್‌ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆʼʼ ಎಂದು ಯುಜಿಸಿಯ ಅಧ್ಯಕ್ಷ ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಈ ಪರೀಕ್ಷೆಯನ್ನು ಎನ್‌ಟಿಎ ನಡೆಸಲಿದೆ. ಈ ಒಂದೇ ಪರೀಕ್ಷೆಯನ್ನು ಬರೆಯುವ ಮೂಲಕ ತಮ್ಮ ಆಯ್ಕೆಯ ವಿವಿಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಪ್ರವೇಶ ಪರೀಕ್ಷೆಯು ಕಂಪ್ಯೂಟ್‌ ಆಧಾರಿತವಾಗಿರಲಿದ್ದು, ಎರಡು ಶಿಫ್ಟ್‌ ನಲ್ಲಿ ನಡೆಯಲಿದೆ. ಬಹು ಭಾಷೆಯಲ್ಲಿ ಈ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಪರೀಕ್ಷೆಯ ಪಠ್ಯಕ್ರಮದ ಕುರಿತು ಇನ್ನೂ ಎನ್‌ಟಿಎ ಮಾಹಿತಿ ನೀಡಿಲ್ಲ.

ಅರ್ಜಿ ಸಲ್ಲಿಸಲು ವೆಬ್‌ ಲಿಂಕ್:‌ https://cuet.nta.nic.in/

ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪದವಿ ಪೂರ್ವ ಕೋರ್ಸ್‌ಗಳ ಪ್ರವೇಶಕ್ಕೆ ದ್ವಿತೀಯ ಪಿಯುಸಿಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ಇದಕ್ಕಾಗಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿಯೇ ಪ್ರವೇಶ ನೀಡಲಾಗುತ್ತದೆ ಎಂದು ಯುಜಿಸಿ ಪ್ರಕಟಿಸಿದ ಬೆನ್ನಲ್ಲೇ ಸ್ನಾತಕೋತ್ತರ ಕೋರ್ಸ್‌ಗಳಿಗೂ ಪ್ರವೇಶ ಪರೀಕ್ಷೆ ನಡೆಸುವ ತೀರ್ಮಾನ ಹೊರಬಿದ್ದಿದೆ.

ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ಇಲ್ಲಿದೆ

ಉನ್ನತ ಶಿಕ್ಷಣದಲ್ಲಿಯೂ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಅಳವಡಿಸುವ ಭಾಗವಾಗಿ ಈ ಪ್ರವೇಶ ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ದೇಶದ ಎಲ್ಲ ವಿಶ್ವವಿದ್ಯಾಲಯಗಳ ಎಲ್ಲ ಕೋರ್ಸ್‌ಗಳ ಪ್ರವೇಶಕ್ಕೂ ಪ್ರವೇಶ ಪರೀಕ್ಷೆ ನಡೆಸುವ ಕುರಿತು ಈಗಾಗಲೇ ಯುಜಿಸಿಯು ಸುಳಿವು ನೀಡಿದೆ.

ಇದನ್ನೂ ಓದಿ | ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?

ಈಗಾಗಲೇ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿನ ಪದವಿ ಪೂರ್ವ ಕೋರ್ಸ್‌ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಇದುವರೆಗೆ 10.46 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನವಾಗಿದೆ.

Exit mobile version