Site icon Vistara News

UPSC EXAM-2023: ಯುಪಿಎಸ್‌ಸಿ ಟಾಪರ್ ವಾಸಿಸುತ್ತಿದ್ದುದು ಮನೆಯಲ್ಲಲ್ಲ, ಈ ಜೋಪಡಿಯಲ್ಲಿ!

UPSC EXAM-2023

ಉತ್ತರಪ್ರದೇಶ: ಸಾಧನೆ ಮಾಡಬೇಕು ಎನ್ನುವ ಛಲವಿದ್ದರೆ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಉತ್ತರಪ್ರದೇಶದ (Uttarpradesh) ಬುಲಂದ್‌ಶಹರ್‌ನ (Bulandshahr) ಪವನ್ ಕುಮಾರ್ (Pawan Kumar) ಸಾಬೀತು ಪಡಿಸಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (Union Public Service Commission-UPSC EXAM-2023) ಪರೀಕ್ಷೆಯಲ್ಲಿ 239ನೇ ರ‍್ಯಾಂಕ್‌ ಪಡೆದಿರುವ ಅವರ ತಂದೆ ರೈತರು.

ಸುಮಾರು ಒಂದು ಎಕರೆ ಜಮೀನಿನನಲ್ಲಿ ಕೃಷಿ ಮಾಡುತ್ತಿರುವ ತಂದೆ, ಹಟ್ಟಿಯಂತ ಗುಡಿಸಲಿನಲ್ಲಿ ದನಗಳೊಂದಿಗೆ ವಾಸ ಮಾಡುತ್ತಿರುವ ಪವನ್ ಕುಮಾರ್ ದೇಶದ ಅತ್ಯಂತ ಕಠಿಣವಾದ ಪರೀಕ್ಷೆಯಲ್ಲಿ ರಾಂಕ್ ಗಳಿಸಿ ಬುಲಂದ್‌ಶಹರ್‌ಗೆ ಮಾತ್ರವಲ್ಲ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ.

ಗುಡಿಸಲಿನಲ್ಲಿ ವಾಸ

ಯುಪಿಎಸ್ ಸಿ-2023ರ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದ್ದು, ಪರೀಕ್ಷೆಯಲ್ಲಿ ಒಟ್ಟು 1,016 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ 239ನೇ ರ‍್ಯಾಂಕ್‌ ಪಡೆದ ಪವನ್ ಕುಮಾರ್ ಅವರ ಮನೆಯ ವಿಡಿಯೊವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗಿದೆ.

ʼʼಪವನ್ ಅವರ ಮನೆ ಇದು. ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ 239ನೇ ರ‍್ಯಾಂಕ್‌ ಪಡೆದಿದ್ದಾರೆ. ಶ್ರಮಜೀವಿಗಳು ತಮ್ಮ ಭವಿಷ್ಯವನ್ನು ಬರೆಯುತ್ತಾರೆʼʼ ಎಂದು ಶರಣ್ ಅವರು ಪವನ್ ಕುಮಾರ್ ಬಗ್ಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: UPSC Results 2023: ಯುಪಿಎಸ್‌ಸಿಯಲ್ಲಿ ವಿಜಯಪುರದ ವಿಜೇತಾ ರಾಜ್ಯಕ್ಕೆ ಪ್ರಥಮ, 20ಕ್ಕೂ ಹೆಚ್ಚು ಮಂದಿ ತೇರ್ಗಡೆ

ಪುಟ್ಟ ಹಳ್ಳಿಗೆ ಕೀರ್ತಿ

ಇದೇ ಮೊದಲ ಬಾರಿಗೆ ಬುಲಂದ್‌ಶಹರ್‌ನ ತೆಹಸಿಲ್ ಸಯಾನಾ ಪ್ರದೇಶದಲ್ಲಿರುವ ರಘುನಾಥಪುರದ ಹೆಸರನ್ನು ಅನೇಕ ಮಂದಿ ಕೇಳುತ್ತಿದ್ದಾರೆ. ಇದಕ್ಕೆ ಕಾರಣ ಪವನ್ ಕುಮಾರ್. ಪವನ್ ಅವರ ಈ ಯಶಸ್ಸಿನಿಂದ ಅವರ ಕುಟುಂಬ ಮಾತ್ರವಲ್ಲ ಇಡೀ ಗ್ರಾಮದಲ್ಲಿ ಸಂತಸದ ವಾತಾವರಣವಿದೆ ಎಂದು ಪವನ್ ಸಹೋದರಿ ಗೋಲ್ಡಿ ರಾಣಾ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.


ತಂದೆಯ ಕಷ್ಟ ನೋಡಿ ಬೆಳೆದ ಮಗ

ಕೃಷಿಯಿಂದಲೇ ಕುಟುಂಬವನ್ನು ಸಲಹುತ್ತಿದ್ದ ತಂದೆಯ ಕಷ್ಟವನ್ನು ನೋಡಿ ಬೆಳೆದ ಪವನ್‌, ತನ್ನ ಹೆತ್ತವರನ್ನು ಹೆಮ್ಮೆ ಪಡುವಂತೆ ಮಾಡಲು ನಿರ್ಧರಿಸಿದ. ಯುಪಿಎಸ್ ಸಿಯ ಮೊದಲೆರಡು ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗದೇ ಇದ್ದರೂ ಛಲ ಬಿಡದೆ ಮೂರನೇ ಪ್ರಯತ್ನ ಮಾಡಿದ್ದಾನೆ. ಇದರಲ್ಲಿ ಈಗ ಯಶಸ್ಸು ಸಾಧಿಸಿದ್ದಾನೆ.


ಅಭಿನಂದನೆಯ ಮಹಾಪೂರ

ಇದೀಗ ಪವನ್‌ ಜತೆ ಆತನ ತಂದೆ, ತಾಯಿಯನ್ನು ಅಭಿನಂದಿಸಲು ಇವರ ಗುಡಿಸಲಿದೆ ದೂರದ ಊರುಗಳಿಂದಲೂ ಜನರ ಪ್ರವಾಹವೇ ಹರಿದು ಬರುತ್ತಿದೆ. ಇದನ್ನು ಕಂಡು ಪವನ್ ತಾಯಿ ಸೋಮಾವತಿ ಆನಂದಭಾಷ್ಪ ಹರಿಸುತ್ತಿದ್ದಾರೆ. ಅವರಿಗೆ ತಮ್ಮ ಮಗ ದೇಶದ ಅತ್ಯನ್ನತ ಪರೀಕ್ಷೆಯಲ್ಲಿ ಗೆದ್ದಿದ್ದಾನೆ ಎಂಬುದೇ ತಿಳಿದಿರಲಿಲ್ಲ.

Exit mobile version