Site icon Vistara News

UPSC EXAM-2023: ಲಕ್ಷಾಂತರ ರೂಪಾಯಿ ಸಂಬಳವಿದ್ದ ಉದ್ಯೋಗವನ್ನೇ ತೊರೆದಿದ್ದ ಯುಪಿಎಸ್‌ಸಿ ಟಾಪರ್ ಆದಿತ್ಯ ಶ್ರೀವಾಸ್ತವ

UPSC EXAM-2023

ಬೆಂಗಳೂರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (Union Public Service Commission) ಮಂಗಳವಾರ ಪ್ರಕಟಿಸಿರುವ ಸಿವಿಲ್ ಸರ್ವೀಸಸ್ ಪರೀಕ್ಷೆ-2023ರಲ್ಲಿ (UPSC EXAM-2023) ಆದಿತ್ಯ ಶ್ರೀವಾಸ್ತವ (Aditya Srivastava) ಅವರು ಉನ್ನತ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ಆದರೆ ಇದಕ್ಕಾಗಿ ಅವರು 2.5 ಲಕ್ಷ ರೂ. ಮಾಸಿಕ ವೇತನದ ಉದ್ಯೋಗವನ್ನು ತೊರೆದಿದ್ದರು.

ಮೂಲತಃ ಲಕ್ನೋದವರಾದ (Lucknow) ಆದಿತ್ಯ ಶ್ರೀವಾಸ್ತವ ಅವರು ಸಿಎಂಎಸ್ ಲಕ್ನೋ ಅಲಿಗಂಜ್‌ನಲ್ಲಿ (Aliganj) ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 12ನೇ ಕ್ಲಾಸ್‌ನಲ್ಲಿ ಅವರು ಶೇ. 95 ಅಂಕಗಳೊಂದಿಗೆ ತರಗತಿಯಲ್ಲಿ ಅಗ್ರಸ್ಥಾನ ಗಳಿಸಿದ್ದರು. ಬಳಿಕ ಅವರು ಐಐಟಿ ಕಾನ್ಪುರದಲ್ಲಿ ತಮ್ಮ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪೂರ್ಣಗೊಳಿಸಿದರು. ಯುಪಿಎಸ್‌ಸಿ- 2023ರ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಅವರು ಐಪಿಎಸ್ ಆಗಿದ್ದು, ಪ್ರಸ್ತುತ ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: UPSC EXAM-2023: ಯುಪಿಎಸ್‌ಸಿ ಟಾಪರ್ ವಾಸಿಸುತ್ತಿದ್ದುದು ಮನೆಯಲ್ಲಲ್ಲ, ಈ ಜೋಪಡಿಯಲ್ಲಿ!

ಭಾರತದಲ್ಲೇ ಉಳಿಯುವ ಆಸೆ

ಶ್ರೀವಾಸ್ತವ ಅವರು ಯುಪಿಎಸ್ ಸಿ- 2023ರ ಪರೀಕ್ಷೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅನ್ನು ತಮ್ಮ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಸಂದರ್ಶನವೊಂದರಲ್ಲಿ ಅವರು ತಮ್ಮ ವಯಸ್ಸಾದ ಪೋಷಕರನ್ನು ನೋಡಿಕೊಳ್ಳಲು ಯಾವಾಗಲೂ ಭಾರತದಲ್ಲಿ ಉಳಿಯಲು ಮತ್ತು ಭಾರತದಲ್ಲಿ ಕೆಲಸ ಮಾಡಲು ಬಯಸಿರುವುದಾಗಿ ಹೇಳಿದ್ದರು.


2.5 ಲಕ್ಷ ರೂ. ಆದಾಯ ಸಿಗುತ್ತಿತ್ತು

ಯುಪಿಎಸ್ ನಲ್ಲಿ ಟಾಪರ್ ಆಗಿರುವ ಆದಿತ್ಯ ಶ್ರೀವಾಸ್ತವ ಅವರು ಬೆಂಗಳೂರಿನ ಗೋಲ್ಡ್‌ಮನ್ ಸ್ಯಾಕ್ಸ್‌ನಲ್ಲಿ 15 ತಿಂಗಳು ಕೆಲಸ ಮಾಡಿದ್ದಾರೆ ಮತ್ತು ತಿಂಗಳಿಗೆ 2.5 ಲಕ್ಷ ರೂ. ಆದಾಯ ಗಳಿಸಿದ್ದರು. ಆದರೆ ಯುಪಿಎಸ್ ಸಿ ಪರೀಕ್ಷೆ ಬರೆಯುವುದಕ್ಕಾಗಿ ಅವರು ಅದನ್ನು ತೊರೆದಿದ್ದರು. ತಿಂಗಳಿಗೆ 2.5 ಲಕ್ಷ ರೂ. ಆದಾಯವಿದ್ದರೂ ಯಾಕೆ ತಾವು ಈ ಉದ್ಯೋಗವನ್ನು ತೊರೆದೆ ಎನ್ನುವ ಕುರಿತು ಅವರು ಸಂದರ್ಶನವೊಂದರಲ್ಲಿ ಹೇಳಿದ್ದು ಹೀಗೆ…

ಕೆಲಸ ತೊರೆಯಲು ಕಾರಣ ?

ʼʼಎರಡು ಕಾರಣಕ್ಕಾಗಿ ನಾನು ಗೋಲ್ಡ್‌ಮನ್ ಸ್ಯಾಕ್ಸ್‌ನ ಉದ್ಯೋಗವನ್ನು ತೊರೆದೆ. ಮೊದಲನೆಯದಾಗಿ, ನಾನು ಬಂದಿರುವ ಪ್ರದೇಶ ಇದಕ್ಕೆ ಮುಖ್ಯ ಕಾರಣ. ಕಲೆಕ್ಟರ್ ಆಗಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು. ನಾಗರಿಕ ಸೇವೆಗಳ ಬಗ್ಗೆಕೆಲವು ಜ್ಞಾನವಿತ್ತು. ಆದರೆ ಅದರ ಬಗ್ಗೆ ನಾನು ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದ್ದು ಕೆಲಸದ ದಿನಗಳಲ್ಲಿ. ಸ್ವಯಂಸೇವಕನಾಗಿದ್ದ ನಾನು ಕೇವಲ ಮಕ್ಕಳಿಗೆ ಆಹಾರ ನೀಡಿದರೆ ಸಾಕಾಗುವುದಿಲ್ಲ ಎಂದು ಅರಿತುಕೊಂಡೆʼʼ ಎಂದರು.

ʼʼಎರಡನೇದಾಗಿ ಸಾಮಾಜಿಕ ಪ್ರತಿಷ್ಠೆಯು ಕಾರಣ. ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ನಾನು ಮೇಲಕ್ಕೆ ಏರಬಹುದು ಮತ್ತು ಯುನೈಟೆಡ್ ಸ್ಟೇಟ್ಸ್‌ ಗೂ ಹೋಗಬಹುದು. ಆದರೆ ಇದರಿಂದ ಸಮಾಜದಲ್ಲಿ ನನಗೆ ಪ್ರತಿಷ್ಠೆ ದೊರೆಯಲು ಸಾಧ್ಯವಿಲ್ಲ. ಯಾಕೆಂದರೆ ಗೋಲ್ಡ್‌ಮನ್ ಸ್ಯಾಕ್ಸ್‌ನಲ್ಲಿ ಕೆಲಸ ಮಾಡಿದವರು ಯಾರಿಗೂ ನೆನಪಿಲ್ಲ. ಆದರೆ ಟಿ.ಎನ್. ಶೇಷನ್ ಯಾರೆಂದು ಎಲ್ಲರಿಗೂ ಗೊತ್ತಿದೆʼʼ ಎಂದು ಹೇಳಿದರು.


ಆಗ್ರ ಸ್ಥಾನ

ಆದಿತ್ಯ ಶ್ರೀವಾಸ್ತವ ಅವರು 2022–23ರ ಯುಪಿಎಸ್ ಸಿ ಸಿಎಸ್ ಇ ಅಂತಿಮ ಪರೀಕ್ಷೆಗಳಲ್ಲಿ ಅಗ್ರಸ್ಥಾನವನ್ನು ಗಳಿಸಿದ್ದಾರೆ. ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಯಲ್ಲಿ ಅಖಿಲ ಭಾರತ 1ನೇ ಸ್ಥಾನವನ್ನು ಸಾಧಿಸಿರುವ ಇವರ ಬಳಿಕ ಅನಿಮೇಶ್ ಪ್ರಧಾನ್ ದ್ವಿತೀಯ, ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನ ಪಡೆದಿದ್ದಾರೆ.

Exit mobile version