Site icon Vistara News

Year Ender 2023: ಸಿಬಿಎಸ್‌ಸಿ ಈ ವರ್ಷ ಮಾಡಿರುವ ಪ್ರಮುಖ ಬದಲಾವಣೆಗಳೇನು?

The Central Board of Secondary Education CBSE Year Ender 202

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (The Central Board of Secondary Education – CBSE) ಈ ಸಾಲಿನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತನ್ನ ಶಿಕ್ಷಣ ನೀತಿಯಲ್ಲಿ ಜಾರಿಗೆ ತಂದಿದೆ. ಇವುಗಳಲ್ಲಿ ಹಲವು ಬದಲಾವಣೆಗಳು 2024ರ ಪರೀಕ್ಷೆಯಿಂದಲೇ ಜಾರಿಗೆ ಬರುವಂತಿರುದ್ದು, ಕಳೆಯುತ್ತಿರುವ 2023ರ ಸಾಲಿನಲ್ಲಿ (Year Ender 2023) ಮಂಡಳಿಯು ಈವರೆಗೆ ಮಾಡಿರುವ ಬದಲಾವಣೆಗಳೇನು ಎಂಬುದರ ಪಟ್ಟಿಯಿದು.

ಇವೆಲ್ಲ ಇಲ್ಲ

ಇನ್ನು ಮೇಲೆ 10 ಮತ್ತು 12ನೇ ತರಗತಿಯ ಅಂತಿಮ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಸರಾಸರಿ, ಶೇಕಡಾವಾರು, ಡಿಸ್ಟಿಂಕ್ಷನ್‌ ಮುಂತಾದ ಯಾವುದನ್ನೂ ಮಂಡಳಿ ಪ್ರಕಟಿಸುವುದಿಲ್ಲ. 2024ನೇ ಸಾಲಿಗೆ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಂದ ಈ ನಿಯಮಗಳು ಅನ್ವಯಿಸುತ್ತವೆ. ಶೇಕಡಾವಾರು ಲೆಕ್ಕಾಚಾರದ ನಿಯಮಗಳೇನು ಎಂಬ ಬಗ್ಗೆ ಹಲವಾರು ಪರೀಕ್ಷಾರ್ಥಿಗಳು ವಿವರಣೆ ಕೇಳಿದ್ದ ಹಿನ್ನೆಲೆಯಲ್ಲಿ, ಮಂಡಳಿ ಈ ನಿಯಮವನ್ನು ಜಾರಿಗೆ ತಂದಿದೆ.

ಮಾದರಿ ಪ್ರಶ್ನೆಪತ್ರಿಕೆಗಳು

ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ 60 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ 77 ಮಾದರಿ ಪ್ರಶ್ನೆಪತ್ರಿಕೆಗಳನ್ನು ಮಂಡಳಿ ಬಿಡುಗಡೆ ಮಾಡಿದೆ. ಇವುಗಳ ಮೌಲ್ಯಮಾಪನದ ಮಾದರಿಗಳನ್ನೂ ಜೊತೆಗೆ ನೀಡಲಾಗಿದೆ. ಇವೆಲ್ಲವೂ ಮಂಡಳಿಯ ಅಧಿಕೃತ ವೆಬ್‌ಸೈಟ್‌ cbse.nic.in.ನಲ್ಲಿ ಲಭ್ಯವಿದೆ. ಅಕೌಂಟೆನ್ಸಿ ಬುಕ್‌ಲೆಟ್‌ ಇಲ್ಲ: 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉಳಿದೆಲ್ಲಾ ಪರೀಕ್ಷೆಗಳಿಗೆ ನೀಡಲಾಗುವಂತೆಯೇ ಸಾಮಾನ್ಯ ಗೆರೆಯ ಉತ್ತರಪತ್ರಿಕೆಗಳನ್ನು ಅಕೌಂಟೆನ್ಸಿ ವಿಷಯಕ್ಕೂ ನೀಡಲಾಗುತ್ತದೆ. ಈವರೆಗೆ ನೀಡಲಾಗುತ್ತಿದ್ದ ಟೇಬಲ್‌ಗಳಿರುವ ಪ್ರತ್ಯೇಕ ಉತ್ತರಪತ್ರಿಕೆಗಳನ್ನು 2024ರ ಪರೀಕ್ಷೆಗಳಿಂದ ನೀಡಲಾಗುವುದಿಲ್ಲ ಎಂದು ಮಂಡಳಿ ಹೇಳಿದೆ.

ಪ್ರತ್ಯೇಕ ಪರೀಕ್ಷೆ

ಕ್ರೀಡೆಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸುತ್ತಿರುವ ಮತ್ತು ಅಂತಾರಾಷ್ಟ್ರೀಯ ಒಲಂಪಿಯಾಡ್‌ನಲ್ಲಿ ಭಾಗವಹಿಸುವ ಮಕ್ಕಳಿಗೆ ಅಗತ್ಯವಿದ್ದಲ್ಲಿ ಪ್ರತ್ಯೇಕವಾದ ಪರೀಕ್ಷೆಗಳನ್ನು ಬೇರೆ ದಿನಾಂಕಗಳಲ್ಲಿ ನಡೆಸಿಕೊಡಲಾಗುವುದು. ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆ ಇರುವ ಮಕ್ಕಳಿಗೆ ವಿದ್ಯಾಭ್ಯಾಸವನ್ನೂ ತೂಗಿಸಿಕೊಂಡು ಹೋಗಲು ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಈ ತೀರ್ಮಾನವನ್ನು ಮಂಡಳಿ ಕೈಗೊಂಡಿದೆ. ನೋಂದಾಯಿತ ಕ್ರೀಡೆ ಮತ್ತು ಒಲಂಪಿಯಾಡ್‌ನಲ್ಲಿ ಭಾಗವಹಿಸುವವರು ಇದಕ್ಕೆ ಅರ್ಹರು.

ವರ್ಷಕ್ಕೆರಡು ಪರೀಕ್ಷೆ

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಸಾರ, ಹೊಸ ಪಠ್ಯಗಳ ಪ್ರಕಾರ ವರ್ಷಕ್ಕೆರಡು ಬಾರಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇವುಗಳಲ್ಲಿ ತಮ್ಮ ಅತ್ತ್ಯುತ್ತಮ ಅಂಕಗಳನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳಬಹುದು. 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ವ್ಯಾಸಂಗ ಮಾಡಬೇಕಾಗುತ್ತದೆ. ಅವುಗಳಲ್ಲಿ ಒಂದು ಕಡ್ಡಾಯವಾಗಿ ಭಾರತೀಯ ಭಾಷೆ ಆಗಿರಬೇಕು.

ಇದನ್ನೂ ಓದಿ: Educational Tour: ಶಾಲಾ ಮಕ್ಕಳಿಗೆ ಸಿಹಿ ಸುದ್ದಿ; ದೇಶಾದ್ಯಂತ ಶೈಕ್ಷಣಿಕ ಪ್ರವಾಸಕ್ಕೆ ಅನುಮತಿ

Exit mobile version