Site icon Vistara News

Karanataka Election: ಬಜರಂಗದಳ ನಿಷೇಧಕ್ಕೆ ಮುಂದಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ: ಕೋಟಾ ಶ್ರೀನಿವಾಸ ಪೂಜಾರಿ

ಪ್ರಚಾರ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತು

ರಿಪ್ಪನ್‌ಪೇಟೆ: “ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರು ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ (Karanataka Election) ಪ್ರಕಟಿಸಿರುವ ಕ್ರಮದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗುವುದು” ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಕೊಡೂರು ಗ್ರಾಮದಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಪರ ಚುನಾವಣಾ ಪ್ರಚಾರ ಭಾಷಣದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರ ಈಗಾಗಲೇ ಪಿಎಫ್ಐಯನ್ನು ನಿಷೇಧಿಸಿದ್ದು ಅದನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರು ಬಜರಂಗದಳ ಮತ್ತು ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದಾರೆ. ಪಿಎಫ್ಐ ಸಂಘಟನೆ ರಾಷ್ಟ್ರ ವಿರೋಧಿ ಚಟುವಟಿಕೆ, ಗೋ ಹತ್ಯೆ ಮತ್ತು ಮತಾಂತರ ಹಾಗೂ ಭಯೋತ್ಪಾದನೆಗೆ ಪ್ರಯೋಜನ ನೀಡುವ ಸಂಘಟನೆಯಾಗಿದೆ. ಈಗ ಕಾಂಗ್ರೆಸ್ ಪಕ್ಷ ಪಿಎಫ್ಐ ಮತ್ತು ಬಜರಂಗದಳ ನಿಷೇಧಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಅದನ್ನು ನಿಷೇಧಕ್ಕೆ ಮುಂದಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗುವುದು” ಎಂದು ಹೇಳಿದರು.

ಇದನ್ನೂ ಓದಿ: Karnataka Election : ಬಿಜೆಪಿಯ ಹನುಮಾನ್‌ ಚಾಲೀಸಾ ಪಠಣ ಅಭಿಯಾನಕ್ಕೆ ಕಾರಣ ಸುರ್ಜೇವಾಲಾ!

“ರಾಜ್ಯದಲ್ಲಿ ಹಿಂದುತ್ವದ ಪ್ರತಿಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಬಜರಂಗದಳವನ್ನು ಕಾಂಗ್ರೆಸ್ ಪಕ್ಷದವರು ನಿಷೇಧಕ್ಕೆ ಮುಂದಾಗಿರುವುದು ರಾಜ್ಯದಲ್ಲಿ ಕಾಂಗ್ರೆಸ್ ರಾಜಕಾರಣದ ಅಂತ್ಯಕ್ಕೆ ಮುನ್ನುಡಿಯಾಗಲಿದೆ” ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, “ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 3,250 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪಕ್ಷಕ್ಕೆ ಮತವನ್ನು ನೀಡುವುದರ ಮೂಲಕ ವಿರೋಧ ಪಕ್ಷಗಳಿಗೆ ತಕ್ಕ ಪಾಠವನ್ನು ಕಲಿಸಬೇಕು” ಎಂದು ಹೇಳಿದರು.

ಮಾಜಿ ಶಾಸಕ ಬಿ ಸ್ವಾಮಿ ರಾವ್ ಮಾತನಾಡಿ, “ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಬಲ್‌ ಎಂಜಿನ್ ಸರ್ಕಾರ ದೇಶ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ಅವರ ರಾಜ್ಯ ಸರ್ಕಾರ ಜನ ಸಾಮಾನ್ಯರ ಸರ್ಕಾರವಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡಿದ್ದಾರೆ” ಎಂದರು.

ಇದನ್ನೂ ಓದಿ: Karnataka Election 2023: ‘ಪ್ರಿಯಾಂಕ’ ಇದು ಸ್ತ್ರಿಲಿಂಗವೇ, ಪುಲ್ಲಿಂಗವೇ ತಿಳಿಯುತ್ತಿಲ್ಲ ಎಂದು ವ್ಯಂಗ್ಯ ಮಾಡಿದ ಯತ್ನಾಳ್

ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಗ್ರಾಪಂ ಅಧ್ಯಕ್ಷೆ ಸುನಂದಾ, ಉಪಾಧ್ಯಕ್ಷ ಜಯಪ್ರಕಾಶ್, ಶಕ್ತಿ ಕೇಂದ್ರದ ಅಧ್ಯಕ್ಷ ಪುಟ್ಟಪ್ಪ, ಅಂಬೇಡ್ಕರ್ ನಿಗಮದ ನಿರ್ದೇಶಕ ಎನ್.ಆರ್ ದೇವಾನಂದ್, ಮುಖಂಡರಾದ ಉಮೇಶ್ ಕಂಚುಗಾರ್, ಸುಧೀರ್ ಭಟ್, ವಿಜೇಂದ್ರ ರಾವ್, ಕಲ್ಲೂರು ನಾಗೇಂದ್ರ, ಬಿಜೆಪಿ ಕಾರ್ಯಕರ್ತರು ಇನ್ನಿತರರು ಇದ್ದರು.

Exit mobile version