-ಅರವಿಂದ ಸಿಗದಾಳ್, ಮೇಲುಕೊಪ್ಪ
ಇದು ಪ್ರತೀ ಅಡಿಕೆ ಬೆಳೆಗಾರನೂ ಗಂಭೀರವಾಗಿ ಚಿಂತಿಸಬೇಕಾದ ವಿಚಾರ. ಡಾ. ವೀರೇಂದ್ರ ಹೆಗ್ಗಡೆಯವರು ಸಂಸದ್‌ನಲ್ಲಿ ಕೇಳಿ ಪಡೆದ ಅಧಿಕೃತ ಮಾಹಿತಿ ಪ್ರಕಾರ ಮೂರು ತಿಂಗಳಲ್ಲಿ 184 ಪ್ರಕರಣಗಳಲ್ಲಿ ವಿದೇಶಿ ಅಡಿಕೆ ಕಳ್ಳ ದಾರಿಯಲ್ಲಿ ದೇಶದ ಒಳಗೆ ಬಂದು ಉದುರಿದೆ! ಮೂರು ತಿಂಗಳ ಹಿಂದಕ್ಕೆ ಹೋಗಿ ಕಳೆದ ಮೂರು ವರ್ಷಗಳ ಈ ವಿದೇಶಿ ಕಳ್ಳ ಸಾಗಾಣಿಕೆಯ ಸಂಖ್ಯೆ ಮತ್ತು ತೂಕದ ಪ್ರಮಾಣ ಗಮನಿಸಿದರೆ ಅದು ಸ್ಟಾಕ್ ಮಾರ್ಕೇಟ್‌ನ ಏರು ಗತಿಯ ಗ್ರಾಫ್ ನಂತೆಯೇ ಇದೆ! ಅಂದರೆ ದಿನದಿಂದ ದಿನಕ್ಕೆ ವಿದೇಶಿ ಕಳಪೆ ಗುಣ ಮಟ್ಟದ ಕಳ್ಳ ಅಡಿಕೆ ದೇಶದ (Areca Nut Price) ಒಳಗೆ ಬರುತ್ತಲೇ ಇದೆ. ದೇಶೀಯ ಅಡಿಕೆ ಜತೆ ಈ ಅಡಿಕೆಯನ್ನು ಮಿಶ್ರಣ ಮಾಡಿ ಮಾರುವ ಪ್ರಕ್ರಿಯೆ ಎಡಬಿಡದೆ ನೆಡೆಯುತ್ತಿದೆ.
184 ಪ್ರಕರಣಗಳು ಎನ್ನುವುದು ಸೆರೆ ಸಿಕ್ಕ ದಾಖಲಾದ ಪ್ರಕರಣಗಳು. ದಾಖಲಾಗದ ಪ್ರಕರಣಗಳು ಇದರ ಹತ್ತರಷ್ಟಿವೆಯೋ? ನೂರರಷ್ಟಿವೆಯೋ! ವಿದೇಶಿ ಅಕ್ರಮ ಅಡಿಕೆ ಆಮದಿನ ವಿಚಾರದಲ್ಲಿ ಸ್ಪಷ್ಟವಾದ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿಲ್ಲ ಎನ್ನುವುದು ಪ್ರಕರಣಗಳು ಹೆಚ್ಚುತ್ತಿರುವ ಮಾಹಿತಿಯಿಂದ ಸ್ಪಷ್ಟ. ವಿದೇಶಿ ಅಧಿಕೃತ ನೇರ ಆಮದು ಸಾಧ್ಯವೇ ಇಲ್ಲ. ಯಾಕೆಂದರೆ, ಆಮದು ದರ ₹.351 + 100% (₹.752 ಪ್ರತಿ ಕೆಜಿ) ಆಮದು ಸುಂಕ ಇರುವುದರಿಂದ ಯಾರೂ ವಿದೇಶಿ ಅಡಿಕೆಯನ್ನು ಅಷ್ಟು ದುಬಾರಿಯಲ್ಲಿ ಕೊಟ್ಟು ಖರೀಧಿಸುತ್ತಾರೆ? ಪರಿಣಾಮ ಅಕ್ರಮ ವಿದೇಶಿ ಅಡಿಕೆ ಆಮದು ಕಳ್ಳರು ಹುಟ್ಟಿಕೊಂಡಿರುವುದು. ಅವರ ಮೇಲೆ ಯಾವುದೇ ಕಠಿಣ ಕಾನೂನು ಕ್ರಮ ಇಲ್ಲದಿರುವುದು ಮತ್ತು ಆ ಅಡಿಕೆ ಬರುತ್ತಿರುವ ಕಳ್ಳ ದಾರಿ ಗೆ ನಿಯಂತ್ರಣದ ಚಕ್ ಪೋಸ್ಟ್ ಇಲ್ಲದಿರುವುದು.
ಅಕ್ರಮ ವಿದೇಶಿ ಅಡಿಕೆ ಆಮದು ಕಳ್ಳರ ಮೇಲೆ FIR, ವಿಚಾರಣೆ, ಜೈಲೂಟ, ಪ್ರಾಸಿಕ್ಯುಷನ್ ತನಿಖೆ ಅನುಮತಿ, ತನಿಖೆ ಆದೇಶ, ಜಾಮೀನು, ವಿಚಾರಣೆಗೆ ನೋಟೀಸು, ಪ್ರಕರಣ ಸಿವಿಲ್ ಕೋರ್ಟ್‌ನಿಂದ ಹೈ ಕೋರ್ಟಿಗೆ-ಸುಪ್ರೀಮ್ ಕೋರ್ಟ್‌ಗೆ, ಕಠಿಣ ಜೈಲು ಶಿಕ್ಷೆ…….. ಉಹೂಂ ಒಂದೇ ಒಂದು ಪ್ರಕರಣದ ಸುದ್ದಿ ಪತ್ರಿಕೆಗಳಲ್ಲಿ ಬಂದಿಲ್ಲ, ಟಿವಿಯಲ್ಲಿ ‘ದರ್ಶನ’ ವಾಗಿಲ್ಲ. ಎಷ್ಟು ‘ಶೆಡ್‌ಗಳಲ್ಲಿ’ ಈ ವಿದೇಶಿ ಅಕ್ರಮ ಅಡಿಕೆಯನ್ನು ಸಂಗ್ರಹಿಸಿಟ್ಟಿದ್ದರ ಮೇಲೆ ದಾಳಿ ಆದ ಸುದ್ದಿಗಳಿಲ್ಲ! ಎಲ್ಲದರ ಪರಿಣಾಮ ಕಳಪೆ ಗುಣಮಟ್ಟದ ಅಡಿಕೆ ಮಂಗಳೂರಿನಲ್ಲಿ ಬೇಕಾಬಿಟ್ಟಿಯಾಗಿ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ. ಅದನ್ನು ತಂದು ದೇಶೀಯ ರೈತರ ಅಡಿಕೆ ಜೊತೆ ಹದವಾಗಿ ಮಿಶ್ರಣ ಮಾಡಿ ಅಡಿಕೆ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗಿ, ಅಲ್ಲೇ ಸೈಲಂಟ್ ಆಗುವ ಉಡುಪಿ, ಮಂಗಳೂರು, ಶಿವಮೊಗ್ಗ, ಬೆಂಗಳೂರು ಕಾಲೇಜ್‌ಗಳಲ್ಲಿನ ವಿದೇಶಿ ಡ್ರಗ್ಸ್ ದಂದೆಯಂತೆ, ಈ ವಿದೇಶಿ ಕಳಪೆ ಅಡಿಕೆ ಸುಲಭವಾಗಿ ದೊರೆಯುವಂತಾಗಿದೆ ಎನ್ನುವುದು ಸ್ಪಷ್ಟ. ವಿದೇಶಿ ಡ್ರಗ್ಸ್ ಮತ್ತು ವಿದೇಶಿ ಕಳ್ಳ ಅಡಿಕೆ ಅಮದು ನಿಲ್ಲಿಸಲು ಕೇಂದ್ರ ತನ್ನ ಭೀಮ ಶಕ್ತಿಯನ್ನು ಪ್ರಯೋಗಿಸಬೇಕಿದೆ. ಇಲ್ಲದೇ ಇದ್ದರೆ, ಅಡಿಕೆ ದರ ಇನ್ನಷ್ಟು ನೆಲ ಕಚ್ಚುವುದು ನಿಶ್ಚಿತ. ಮಲೆನಾಡು, ಕರಾವಳಿಯ ಎಲ್ಲ ಸಂಸದರು ಅಡಿಕೆ ಬೆಳೆಗಾರರ ಪರವಾಗಿ ಒಂದು ದಿಟ್ಟ ಕ್ರಮದ ಹೆಜ್ಜೆಗೆ ಮುಂದಾಗಬಹುದಾ?
ಇದನ್ನೂ ಓದಿ: Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!