Site icon Vistara News

International Forests Day: ಕಾಡುಗಳ ನಾಶದಿಂದ ವಿಶ್ವ ಸಾಗುತ್ತಿದೆ ಅಳಿವಿನ ಅಂಚಿಗೆ!

International Forests Day

ಕಾಡುಗಳೇಕೆ ಬೇಕು (International Forests Day) ಎಂದು ಕೇಳಿದರೆ ಒಂದನೇ ತರಗತಿಯ ಮಗುವೂ ಶಾಲೆಯಲ್ಲಿ ತನಗೆ ಕಲಿಸಿದ ಉತ್ತರವನ್ನು ಹೇಳೀತು. ಹಾಗಾದರೆ ಎಲ್ಲರೂ ಬಾಲ್ಯದಿಂದಲೇ ಕಾಡುಗಳ ಪ್ರಾಮುಖ್ಯತೆಯ ಬಗ್ಗೆ ಅರಿತವರಲ್ಲವೇ? ಕಲಿತಿದ್ದು ಹೌದಾದರೂ ಆಚರಣೆಯಲ್ಲಿ ಇಲ್ಲದಿರುವುದೇ ತೊಡಕಾಗಿದೆ. ಹಾಗಾಗಿಯೇ ಎಲ್ಲರೂ ತಿಳಿದಿರುವ ವಿಷಯದ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಒದಗಿದೆ. ಇದೇ ಹಿನ್ನೆಲೆಯಲ್ಲಿ, ಮಾರ್ಚ್‌ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಅರಣ್ಯ ದಿನದ ಮಹತ್ವವನ್ನು ತಿಳಿದುಕೊಳ್ಳಬೇಕಿದೆ.
ಅರಣ್ಯಗಳು, ಬೆಟ್ಟಗಳು, ಕುರುಚಲು ಕಾಡುಗಳು ಮುಂತಾದ ಎಲ್ಲ ರೀತಿಯ ಕಾನನಗಳ ಮಹತ್ವವನ್ನು ತಿಳಿದುಕೊಳ್ಳುವುದನ್ನು ಪ್ರೋತ್ಸಾಹಿಸುವುದು ಅಂತಾರಾಷ್ಟ್ರೀಯ ಅರಣ್ಯ ದಿನದ ಮುಖ್ಯ ಉದ್ದೇಶ. ಭೂಮಿಯ ಆರೋಗ್ಯ ಕಾಪಾಡುವಲ್ಲಿ, ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಅರಣ್ಯಗಳ ಪಾತ್ರ ಎಷ್ಟು ಮಹತ್ತರವಾದದ್ದು, ವನಗಳನ್ನು ನಿರ್ನಾಮ ಮಾಡುತ್ತಿರುವುದರಿಂದ ವಿಶ್ವವೇ ಹೇಗೆ ಅಳಿವಿನಂಚಿಗೆ ಸಾಗುತ್ತಿದೆ ಎಂಬಂಥ ಹಲವು ವಿಷಯಗಳ ಬಗ್ಗೆ ಜಾಗೃತಿ ಮಾಡಿಸುವುದು ಈ ದಿನದ ಧ್ಯೇಯ. ಹಾಗಾಗಿ ಕಾಡುಗಳು ನಮಗೇಕೆ ಬೇಕು ಎನ್ನುವುದಕ್ಕೆ ಒಂದಿಷ್ಟು ಮುಖ್ಯ ಕಾರಣಗಳಿವು:

ಎಲ್ಲರಿಗೂ ಮನೆ

ಭೂಮಿಯ ಮೇಲಿರುವ ಶೇ. 80ರಷ್ಟು ಚರಾಚರ ಪ್ರಪಂಚಕ್ಕೆ ಮನೆಯೆನಿಸಿರುವುದು- ಕಾಡುಗಳು. ಅದರಲ್ಲೂ ಅರ್ಧಕ್ಕಿಂತ ಹೆಚ್ಚು ಜೀವಿಗಳು ಬದುಕುತ್ತಿರುವುದು ನಿಬಿಡವಾದ ಮಳೆಕಾಡುಗಳಲ್ಲಿ. 60 ಸಾವಿರಕ್ಕೂ ಹೆಚ್ಚಿನ ಪ್ರಭೇದದ ಮರಗಳನ್ನು ಇವು ಹೊಂದಿವೆ. 1.6 ಶತಕೋಟಿಗೂ ಹೆಚ್ಚಿನ ಜನ ತಮ್ಮ ಬದುಕಿಗಾಗಿ ಅರಣ್ಯಗಳನ್ನೇ ಆಶ್ರಯಿಸಿದ್ದಾರೆ. ನೀರು, ಆಹಾರ, ಆಶ್ರಯ, ಔಷಧ, ಇಂಧನ, ಉತ್ಪನ್ನಗಳೆಲ್ಲ ಇದರಲ್ಲಿ ಸೇರಿವೆ. ಪ್ರಾಣವಾಯುವಿಗಾಗಿ ಎಲ್ಲರೂ ಆಶ್ರಯಿಸಿರುವುದು ಮರಗಳನ್ನೇ ಎನ್ನುವುದನ್ನು ಲೆಕ್ಕಕ್ಕೆ ಸೇರಿಸಿದರೆ ಅಂಕಿ-ಅಂಶಗಳು ಬೇರೆಯೇ ಆಗುತ್ತವೆ! ಇಷ್ಟಾಗಿಯೂ, ವರ್ಷಂಪ್ರತಿ 13 ದಶಲಕ್ಷ ಹೆಕ್ಟೇರ್‌ ಅರಣ್ಯ ನಾಶವಾಗುತ್ತಿದೆ. ಅಂದಾಜಿಗೆ ಹೇಳುವುದಾರೆ, ಇಂಗ್ಲೆಂಡ್‌ನ ಭೂಭಾಗದಷ್ಟು ಅರಣ್ಯ ಪ್ರತಿವರ್ಷ ನಶಿಸುತ್ತಿದೆ.

ಹವಾಮಾನ

ʻಕಾಲ ಕೆಟ್ಟೋಗಿದೆʼ ಎಂದು ಗೊಣಗುವ ನಮಗೆ ಅದನ್ನು ಹಾಳು ಮಾಡಿಕೊಂಡಿರುವುದು ಯಾರೆಂಬ ತಿಳಿವಳಿಕೆ ಇಲ್ಲದಿದ್ದರೆ ಹೇಗೆ? ಬರ, ಅತಿವೃಷ್ಟಿ, ಪ್ರವಾಹ, ಚಂಡಮಾರುತಗಳು, ಭೂಕುಸಿತ ಮುಂತಾದ ನೈಸರ್ಗಿಕ ಪ್ರಕೋಪಗಳಿಗೆ ಮುಖ್ಯ ಕಾರಣ ಅರಣ್ಯಗಳು ಎದ್ವಾತದ್ವಾ ನಾಶವಾಗುತ್ತಿರುವುದು. ಮರಗಳ ಬೇರು ಭೂಮಿಯಾಳಕ್ಕೆ ಇಳಿಯುತ್ತಿದ್ದಂತೆ ಭೂಕುಸಿತವಾಗದಂತೆ ತಡೆಯುತ್ತದೆ; ಮಳೆ ನೀರನ್ನು ಹೀರಿಕೊಂಡು ಜಲಕ್ಷಾಮ ಕಾಡದಂತೆ ನೋಡಿಕೊಳ್ಳುತ್ತದೆ. ವಾತಾವರಣದಲ್ಲಿ ತೇವವನ್ನು ಕಾಪಿಟ್ಟುಕೊಂಡು ಬಿಸಿಯೇರದಂತೆ ತಡೆಯುತ್ತದೆ. ಅರಣ್ಯಗಳ ಆರೋಗ್ಯ ಚೆನ್ನಾಗಿದ್ದಂತೆ, ಇಡೀ ಪರಿಸರ ವ್ಯವಸ್ಥೆ ಹಾಗೂ ಭೂಮಿಯ ಆರೋಗ್ಯವೂ ಚೆನ್ನಾಗಿರುತ್ತದೆ.

ನಿಸರ್ಗವೆಂಬ ವೈದ್ಯ

ಇವು ಭೂಮಿಯ ಆರೋಗ್ಯ ಕಾಪಾಡುವುದಕ್ಕೆ ಮಾತ್ರವಲ್ಲ, ನಮಗೆ ಮದ್ದರೆಯುವುದಕ್ಕೂ ಬೇಕು. ಅರಣ್ಯಗಳೆಂದರೆ ಔಷಧೀಯ ಸಸ್ಯಗಳಿಗೆ ಆಶ್ರಯತಾಣಗಳು. ಮಳೆ ಕಾಡುಗಳ ವಿಷಯದಲ್ಲಿ ಹೇಳುವುದಾದರೆ, ಈವರೆಗೆ ವೈಜ್ಞಾನಿಕವಾಗಿ ಕೇವಲ ಶೇ.1ರಷ್ಟು ಸಸ್ಯಗಳ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆದಿದೆ. ಉಳಿದಂತೆ ನಿತ್ಯಹರಿದ್ವರ್ಣ ಕಾಡುಗಳ ಔಷಧೀಯ ಸಾಧ್ಯತೆಗಳ ಬಗ್ಗೆ ಸಂಶೋಧನೆಯ ಸಾಧ್ಯತೆ ಅಪಾರವಾಗಿದೆ. ಆಗಿರುವ ಅಲ್ಪ ಶೋಧನೆಯನ್ನೇ ಆಧರಿಸಿ, ಶೇ.25ರಷ್ಟು ಔಷಧ ಕಂಪನಿಗಳು ತಮ್ಮ ಉತ್ಪನ್ನಗಳು ಸಿದ್ಧ ಮಾಡುತ್ತಿವೆ.

ಖರ್ಚಿಲ್ಲದ ಹವಾನಿಯಂತ್ರಣ

ಭೂಮಿಯ ಮೇಲಿನ ಕಾಡುಗಳ ಪ್ರಮಾಣ ಕಡಿಮೆಯಾಗುತ್ತಿರುವಂತೆ ಭೂಮಿಯ ತಾಪಮಾನ ಏರುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಅವೆಲ್ಲ ನಮಗೆ ತಾಗುವುದಿಲ್ಲ ಎಂದೇ ಈಗಲೂ ನಾವು ಭಾವಿಸುತ್ತೇವೆ. ಇನ್ನೂ ಸರಳವಾಗಿ ಹೇಳುವುದಿದ್ದರೆ, ನಗರ ಪ್ರದೇಶದಲ್ಲಿ ಇರುವವರಿಗೆ ಕಾಂಕ್ರೀಟ್‌ ಕಾಡಿನಿಂದ ನಿಜವಾದ ಕಾಡಿಗೆ ಬಂದರೆ ತಾಪವಾನದಲ್ಲಿ ಆಗುವ ವ್ಯತ್ಯಾಸ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ನಗರಗಳಲ್ಲೂ ವಿಸ್ತಾರವಾದ ಬಡಾವಣೆಗಳು, ರಸ್ತೆಯಂಚಿನಲ್ಲಿ ಸಾಕಷ್ಟು ಮರಗಳು, ಬಹಳಷ್ಟು ಹಸಿರು ಪಾರ್ಕುಗಳಿರುವ ಭಾಗಗಳಲ್ಲಿನ ಉಷ್ಣತೆಯು ಇಕ್ಕಟ್ಟಾದ ಹಸಿರಿಲ್ಲದ ವಸತಿ ಪ್ರದೇಶಗಳಿಗಿಂತ ಕಡಿಮೆಯೇ ಅನುಭವಕ್ಕೆ ಬರುತ್ತದೆ. ಹಸಿರಾಗಿರುವ ಪ್ರದೇಶಗಳಲ್ಲಿ ಕೃತಕ ಹವಾನಿಯಂತ್ರಣಗಳ ವೆಚ್ಚವನ್ನು ಶೇ. 50ರಿಂದ 80ರವರೆಗೆ ತಗ್ಗಿಸಬಹುದು.

ಬದುಕು ಸ್ವಸ್ಥ

ಹೆಚ್ಚು ಗಿಡಮರಗಳಿದ್ದ ಪ್ರದೇಶಗಳಲ್ಲಿ ಒಮ್ಮೆ ಕಿವಿಗೊಟ್ಟರೆ- ಬದುಕಿನ ಸಂಗೀತವೇ ಭಿನ್ನ ಅಲ್ಲಿ. ಹಾಗಿರುವಾಗ ಮಾನವನ ಹಸ್ತಕ್ಷೇಪವಿಲ್ಲದ ಅರಣ್ಯಗಳಲ್ಲಿರುವ ಜೀವಂತಿಕೆ ವರ್ಣನೆಗೆ ನಿಲುಕದ್ದು. ಆ ಸ್ಥಳಗಳಿಗೆ ಒಮ್ಮೆ ಹೋದರೆ ಮೈ ಸೋಕುವ ತಂಗಾಳಿ, ಕಣ್ಣಿಗೆ ಅಚ್ಚ ಹಸಿರು, ಎದೆಗೆ ಸ್ವಚ್ಛ ಉಸಿರು, ಕಿವಿಗೆ ಕಲರವ- ಅಂತೂ ಬದುಕಿನ ಸ್ವಾಸ್ಥ್ಯವನ್ನೇ ಇವು ಬದಲಿಸಿಬಿಡುತ್ತವೆ. ಇಂಥ ಸ್ವಾಸ್ಥ್ಯ ತಾಣಗಳನ್ನು ನಾಶ ಪಡಿಸಿಬಿಟ್ಟರೆ ಸಣ್ಣ ಕೀಟಗಳಿಂದ ಹಿಡಿದು ದೊಡ್ಡ ಪ್ರಾಣಿಗಳವರೆಗೆ ಎಲ್ಲದರ ಬದುಕಿನ ಲಯವೂ ಹಾಳಾಗಿಹೋಗುತ್ತದೆ. ಹಾಗಾಗಿ ಬದುಕು ಸುಂದರ, ಸ್ವಸ್ಥ, ಸುರಕ್ಷಿತ ಎನಿಸುವುದಕ್ಕೆ ಕಾನುನುಗಳೇ ಬೇಕು.

ಇದನ್ನೂ ಓದಿ: World Sparrow Day: ಇಂದು ಗುಬ್ಬಚ್ಚಿಗಳ ದಿನ; ಈ ಪುಟ್ಟ ಹಕ್ಕಿಗಳನ್ನು ಉಳಿಸೋಣ

Exit mobile version