ನವ ದೆಹಲಿ: ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಜತೆಯಾಗಿ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಇವರಿಬ್ಬರೂ ಇತ್ತೀಚೆಗೆ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿದ್ದರು. ಈ ವೇಳೆ ಜತೆಯಾಗಿ ಭಾರತಾಂಬೆ ಫೋಟೋಕ್ಕೆ ಕೈಮುಗಿಯುತ್ತಿದ್ದಾರೆ ಎಂಬ ಕ್ಯಾಪ್ಷನ್‌ಗಳೊಂದಿಗೆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ, ದ್ರೌಪದಿ ಮುರ್ಮು ಅವರು ಮೋಹನ್ ಭಾಗವತ್ ಅವರೊಂದಿಗೆ ಇರುವುದು ನೋಡಿದರೆ, ನಾವು ಮುಂದೇನೂ ಹೇಳಬೇಕಾಗಿಲ್ಲ. ಅವರೂ ಕೂಡ ರಾಷ್ಟ್ರಪತಿಯಾದರೆ ಇನ್ನೊಂದು ರಬ್ಬರ್ ಸ್ಟಾಂಪ್ ಆಗುತ್ತಾರೆ ಎಂದು ಈ ಫೋಟೋವನ್ನು ಶೇರ್ ಮಾಡಿಕೊಂಡವರು ಟೀಕಿಸಿದ್ದರು.
ಆದರೆ ನಿಜಕ್ಕೂ ದ್ರೌಪದಿ ಮುರ್ಮು, ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದರಾ? ಇವರಿಬ್ಬರೂ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಭಾರತಾಂಬೆ ಫೋಟೋಕ್ಕೆ ಕೈಮುಗಿದಿದ್ದಾರಾ?-ಇಲ್ಲವೇ ಇಲ್ಲ, ಈ ಫೋಟೋ ನಕಲಿ ಎನ್ನುತ್ತಿದೆ ಇಂಡಿಯಾ ಟುಡೆ ಮಾಧ್ಯಮದ ಆ್ಯಂಟಿ ಫೇಕ್‌ನ್ಯೂಸ್ ವಾರ್ ರೂಮ್ (AFWA). ವೈರಲ್ ಫೋಟೋ ನೋಡಲು ಸ್ವಲ್ಪ ಮಟ್ಟಿಗೆ ಅಸಹಜವಾಗಿದ್ದ ಕಾರಣ ಅದನ್ನು ಇಂಡಿಯಾ ಟುಡೆ ಫ್ಯಾಕ್ಟ್ ಚೆಕ್‌ಗೆ ಒಳಪಡಿಸಿತ್ತು. ಅದರಲ್ಲಿ ಇದು ಅಸಲಿ ಫೋಟೋವಲ್ಲ, ಬದಲಿಗೆ ಫೋಟೋಶಾಪ್ ಮೂಲಕ ಕೊಲ್ಯಾಜ್ ಮಾಡಿದ್ದು ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲ, ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಇತ್ತೀಚೆಗೆ ಮೋಹನ್ ಭಾಗವತ್‌ರನ್ನು ಭೇಟಿಯಾದ ಬಗ್ಗೆಯೂ ಎಲ್ಲಿಯೂ ವರದಿಯಿಲ್ಲ ಎಂದು ಹೇಳಲಾಗಿದೆ.
ಈ ಫೋಟೋವನ್ನು ರಷ್ಯಾದ ಸರ್ಚ್ ಎಂಜಿನ್ ಯಾಂಡೆಕ್ಸ್ ಮೂಲಕ ರಿವರ್ಸ್ ಸರ್ಚ್‌ಗೆ ಒಳಪಡಿಸಲಾಗಿತ್ತು. ಆಗ ಈ ಫೋಟೋದ ಅಸಲಿಯತ್ತು ಗೊತ್ತಾಗಿದೆ. ಮಾರ್ಚ್ ತಿಂಗಳಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಮೋಹನ್ ಭಾಗವತ್ ಅವರು ಭಾರತಾಂಬೆಗೆ ನಮಿಸುತ್ತಿದ್ದು, ಅವರ ಹಿಂದೆ ದತ್ತಾತ್ರೇಯ ಹೊಸಬಾಳೆ ಇದ್ದರು. ಅದೇ ಫೋಟೋ ಹಾಕಿ ಎಎನ್‌ಐ ಸುದ್ದಿ ಮಾಧ್ಯಮ ಪ್ರತಿನಿಧಿ ಸಭಾ ಬಗ್ಗೆ ವರದಿ ಪ್ರಕಟಿಸಿತ್ತು. ಆದರೆ ಈಗ ವೈರಲ್ ಫೋಟೋದಲ್ಲಿ ದತ್ತಾತ್ರೇಯ ಹೊಸಬಾಳೆ ಇದ್ದ ಜಾಗದಲ್ಲಿ ದ್ರೌಪದಿ ಮುರ್ಮು ಅವರ ಚಿತ್ರವನ್ನು ಕೂರಿಸಿ, ಎಡಿಟ್ ಮಾಡಲಾಗಿದೆ.
ಇದನ್ನೂ ಓದಿ: Alt News ಸಹಸಂಸ್ಥಾಪಕ ಜುಬೇರ್ ವಿರುದ್ಧ ಸಾಕ್ಷ್ಯ ನಾಶ, ವಿದೇಶಿ ಫಂಡ್ ಸ್ವೀಕಾರದ ಹೊಸ ಆರೋಪ
ಹಾಗೇ, ವೈರಲ್ ಫೋಟೋದಲ್ಲಿ ದ್ರೌಪದಿ ಮುರ್ಮು ಕೈಮುಗಿದು ನಿಂತಿರುವ ಫೋಟೋ ಕೂಡ ಎರಡು ವರ್ಷಗಳ ಹಿಂದಿನದು ಎಂಬುದು ಗೊತ್ತಾಗಿದೆ. ಇತ್ತೀಚೆಗೆ ಅಂದರೆ ದ್ರೌಪದಿ ಮುರ್ಮು ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆಯಾದ ಮೇಲೆ ಬಿಬಿಸಿ ಒಂದು ಸುದ್ದಿ ಪ್ರಕಟಿಸಿತ್ತು. ಅದಕ್ಕೆ ಒಂದು ಫೋಟೋವನ್ನು ಬಳಸಿತ್ತು. ಅದರಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ಬೆನ್ನನ್ನು ಬಾಗಿಸಿ ದ್ರೌಪದಿ ಮುರ್ಮುಗೆ ಕೈಮುಗಿದಿದ್ದಾರೆ. ಅದಕ್ಕೆ ಪ್ರತಿಯಾಗಿ ಮುರ್ಮು ಕೂಡ ಕೈಜೋಡಿಸಿದ್ದನ್ನು ನೋಡಬಹುದು. ಇದೇ ಫೋಟೋವನ್ನು 2020ರ ಡಿಸೆಂಬರ್‌ನಲ್ಲಿ ಹೇಮಂತ್ ಸೊರೆನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.
ಈಗ ಈ ಫೋಟೋದಲ್ಲಿರುವ ದ್ರೌಪದಿ ಮುರ್ಮು ಅವರನ್ನು ಕಟ್ ಮಾಡಿ, ಮೋಹನ್ ಭಾಗವತ್ ಫೋಟೋದಲ್ಲಿ ದತ್ತಾತ್ರೇಯ ಹೊಸಬಾಳೆ ಇರುವ ಜಾಗದಲ್ಲಿ ಪೇಸ್ಟ್ ಮಾಡಲಾಗಿದೆ. ಮತ್ತು ಇಡೀ ಫೋಟೋವನ್ನು ಫ್ಲಿಪ್ ಮಾಡಲಾಗಿದೆ. ನೈಜ ಫೋಟೋದಲ್ಲಿ ದತ್ತಾತ್ರೇಯ ಹೊಸಬಾಳೆ ಅವರ ಹಿಂದೆ ಇರುವ ಸೆಕ್ಯೂರಿಟಿ, ನಕಲಿ ಫೋಟೋದಲ್ಲಿ ದ್ರೌಪದಿ ಮುರ್ಮು ಹಿಂದೆ ಇದ್ದಾರೆ. ಇಲ್ಲಿಯೇ ಗೊತ್ತಾಗುತ್ತದೆ ಇದು ಎಡಿಟೆಡ್ ಫೋಟೋ ಎಂಬುದು. ಅಂದರೆ ಎರಡು ಫೋಟೋಗಳನ್ನು ಸೇರಿಸಿ, ಒಂದು ಫೋಟೋ ಸೃಷ್ಟಿಸಿ ತಪ್ಪು ಮಾಹಿತಿಯನ್ನು ಹರಿಬಿಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ: ವಿಸ್ತಾರ Fact Check: ದ್ರೌಪದಿ ಮುರ್ಮು ಹೆಸರಲ್ಲಿ 17ಕ್ಕೂ ಹೆಚ್ಚು ಟ್ವಿಟರ್ ಅಕೌಂಟ್; ಅಸಲಿ ಖಾತೆ ಯಾವುದು?