ನವ ದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರ ಅವಧಿ ಇಂದು ಮುಕ್ತಾಯವಾಗಿದ್ದು, ಸಂಜೆ 7ಗಂಟೆಗೆ ವಿದಾಯದ ಭಾಷಣ ಮಾಡಲಿದ್ದಾರೆ. ಹುದ್ದೆಯಿಂದ ನಿರ್ಗಮಿಸಲಿರುವ ರಾಮನಾಥ ಕೋವಿಂದ್‌ಗಾಗಿ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಔತಣಕೂಟ ಏರ್ಪಡಿಸಿದ್ದರು. ಅದರಲ್ಲಿ ಬಹುತೇಕ ಎಲ್ಲ ಸಂಸದರು, ಗಣ್ಯರು ಪಾಲ್ಗೊಂಡಿದ್ದರು. ಆದರೆ ಔತಣಕೂಟ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಮತ್ತು ಆಪ್‌ನ ಕೆಲವು ಮುಖಂಡರು ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ವರ್ತನೆಯನ್ನು ಟೀಕಿಸುತ್ತಿದ್ದಾರೆ.
ರಾಮನಾಥ ಕೋವಿಂದ್ ಕೈಮುಗಿಯುತ್ತ ಪ್ರಧಾನಿ ಮೋದಿ ಸಮೀಪ ಬರುತ್ತಾರೆ. ಆದರೆ ನರೇಂದ್ರ ಮೋದಿ, ಕೋವಿಂದ್ ಕಡೆಗೆ ನೋಡದೆ ಎದುರಿಗೆ ಫೋಟೋ ತೆಗೆಯುತ್ತಿರುವವರ ಕ್ಯಾಮರಾವನ್ನೇ ದಿಟ್ಟಿಸುತ್ತ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕರ್ನಾಟಕ ಕಾಂಗ್ರೆಸ್ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡು, ʼದಲಿತ ರಾಷ್ಟ್ರಪತಿ ಎಂದು ಬೆನ್ನು ತಟ್ಟಿಕೊಂಡ ಬಿಜೆಪಿ, ದಲಿತರಿಗೆ ನೀಡುವ ಬೆಲೆ ಇದು. ಪ್ರಧಾನಮಂತ್ರಿಗಳು ಕ್ಯಾಮರಾಕ್ಕೆ ನೀಡುವ ಬೆಲೆಯನ್ನು ಈ ದೇಶದ ನಿರ್ಗಮಿತ, ದಲಿತ ರಾಷ್ಟ್ರಪತಿಗೆ ನೀಡದೆ ಇರುವುದು ದುರದೃಷ್ಟ. ರಾಮನಾಥ ಕೋವಿಂದ್ ದಲಿತ ಎಂಬ ಕಾರಣಕ್ಕೆ ಅವರನ್ನು ರಾಮಮಂದಿರ ಭೂಮಿಪೂಜೆಗೂ ಬಿಟ್ಟುಕೊಳ್ಳದೆ ಇರುವವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಕ್ಯಾಪ್ಷನ್ ಬರೆದುಕೊಂಡಿತ್ತು.
ಇದರೊಂದಿಗೆ ಆಪ್ ನಾಯಕ ಸಂಜಯ್ ಸಿಂಗ್ ಕೂಡ ಆ ವಿಡಿಯೋ ಶೇರ್ ಮಾಡಿಕೊಂಡು ʼರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸುತ್ತಿರುವ ರಾಮನಾಥ ಕೋವಿಂದ್‌ರಿಗೆ ಪ್ರಧಾನಿ ಮೋದಿ ಅವಮಾನ ಮಾಡಿದ್ದಾರೆ. ಅವರು ಕೈ ಮುಗಿದರೂ ಮೋದಿ ಪ್ರತಿಕ್ರಿಯೆ ನೀಡಲಿಲ್ಲʼ ಎಂದು ಹೇಳಿದ್ದಾರೆ. ಹಾಗೇ, ಆ ವಿಡಿಯೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಆದರೆ ಈ ವಿಡಿಯೋ ಹಿಂದಿನ ಸತ್ಯಾಂಶವೇನು? ಪ್ರಧಾನಿ ಮೋದಿ ನಿಜಕ್ಕೂ ರಾಷ್ಟ್ರಪತಿ ರಾಮನಾಥ ಕೋವಿಂದ್ ನಮಸ್ಕಾರಕ್ಕೆ ಸ್ಪಂದಿಸಲಿಲ್ಲವಾ?. ಕಾಂಗ್ರೆಸ್ ಹಂಚಿಕೊಂಡಿರುವ ಈ ನಾಲ್ಕು ಸೆಕೆಂಡ್‌ಗಳ ವಿಡಿಯೋಕ್ಕೆ ಪ್ರತಿಯಾಗಿ ಬಿಜೆಪಿ ಹಂಚಿಕೊಂಡಿರುವ ಇದೇ ವಿಡಿಯೋದ ದೀರ್ಘ ಆವೃತ್ತಿಯನ್ನ ನೋಡಿದರೆ ಸತ್ಯವೇನು ಎಂಬುದು ಸ್ಪಷ್ಟವಾಗುತ್ತದೆ. ʼಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರೆಲ್ಲ ಸಾಲಾಗಿ ನಿಂತಿದ್ದಾರೆ. ರಾಮನಾಥ ಕೋವಿಂದ್ ಕೈಮುಗಿಯುತ್ತ ಮುಂದಡಿ ಇಡುತ್ತ ಬರುತ್ತಾರೆ. ಅದಕ್ಕೆ ಪ್ರತಿಯಾಗಿ ಅಲ್ಲಿದ್ದವರೆಲ್ಲರೂ ವಂದಿಸುತ್ತಾರೆ. ನರೇಂದ್ರ ಮೋದಿ ಕೂಡ ಎರಡೂ ಕೈ ಜೋಡಿಸುವುದನ್ನು ನೋಡಬಹುದು. ಹೀಗೆ ಒಂದು ಬಾರಿ ಕೋವಿಂದ್‌ಗೆ ಪ್ರತಿವಂದಿಸಿದ ನರೇಂದ್ರ ಮೋದಿ, ತಿರುಗಿ ಕ್ಯಾಮರಾಗಳಿಗೆ ಪೋಸ್ ಕೊಡುತ್ತಾರೆ. ಅಷ್ಟರಲ್ಲಿ ಮೋದಿಯವರ ಹಿಂಬದಿಯಲ್ಲಿದ್ದ ಪಿಯೂಷ್ ಗೋಯಲ್ ಅವರು ಕೋವಿಂದ್‌ಗೆ ಕೈಜೋಡಿಸುತ್ತಾರೆ ಮತ್ತು ಕೋವಿಂದ್ ಹಾಗೂ ಗೋಯಲ್ ಇಬ್ಬರೂ ಏನೋ ಮಾತಾಡಿಕೊಳ್ಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ಗೆ ಯಾವುದೇ ಅವಮಾನ ಮಾಡಿಲ್ಲ. ಗೌರವ ಕಳೆದಿಲ್ಲ. ಪ್ರತಿಪಕ್ಷಗಳು ಆರೋಪಿಸುತ್ತಿರುವಂತೆ ಏನೂ ಆಗಿಲ್ಲ ಎಂಬುದು ಬಿಜೆಪಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲೇ ಸ್ಪಷ್ಟವಾಗುತ್ತಿದೆ. ಇಲ್ಲಿದೆ ನೋಡಿ ಬಿಜೆಪಿ ನಾಯಕ ಅಮಿತ್ ಮಾಳ್ವಿಯಾ ಶೇರ್ ಮಾಡಿಕೊಂಡಿರುವ ಈ ವಿಡಿಯೋ..
ಇದನ್ನೂ ಓದಿ: Video: ರಾಮನಾಥ ಕೋವಿಂದ್ ಅಧಿಕಾರ ಅವಧಿ ಜು.24ಕ್ಕೆ ಅಂತ್ಯ; ಸಂಸತ್ತಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ