Site icon Vistara News

ವಿಸ್ತಾರ Fact Check: ಆರ್ಥಿಕತೆ ಬೆಳವಣಿಗೆಯಲ್ಲಿ 3ನೇ ಸ್ಥಾನದಿಂದ 164ಕ್ಕೆ ಕುಸಿಯಿತಾ ಭಾರತ?

Fact Check

ನವ ದೆಹಲಿ: ಆರ್ಥಿಕ ಪ್ರಗತಿಯಲ್ಲಿ ಭಾರತ 2011ರಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿತ್ತು. ಅಂದರೆ ಅತಿದೊಡ್ಡ ಆರ್ಥಿಕತೆ ಹೊಂದಿರುವ ಮೂರನೇ ದೇಶವಾಗಿತ್ತು..ಆದರೆ ಈಗ 2021ರಲ್ಲಿ ಭಾರತ 164ನೇ ಸ್ಥಾನಕ್ಕೆ ಕುಸಿದಿದೆ ಎಂಬ ಪೋಸ್ಟ್‌ವೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಫೋಟೋ ಕೂಡ ಇದೆ. ಬೇರೆಯವರು ಬಿಡಿ, ಫೋಸ್ಟ್‌ನ್ನು ಬಿಜೆಪಿ ನಾಯಕ ಸುಬ್ರಹ್ಮಣಿಯನ್‌ ಸ್ವಾಮಿ ಕೂಡ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಇದು ಸತ್ಯವಾ?. 2011ರಲ್ಲಿ, ಅತಿದೊಡ್ಡ ಆರ್ಥಿಕತೆ ಹೊಂದಿರುವ ಮೂರನೇ ದೇಶವಾಗಿದ್ದ ಭಾರತ 2021ರಲ್ಲಿ, 193 ದೇಶಗಳ ಪಟ್ಟಿಯಲ್ಲಿ 164ನೇ ಸ್ಥಾನಕ್ಕೆ ಕುಸಿಯಿತಾ? ಇಲ್ಲ ಎನ್ನುತ್ತಿದೆ ಫ್ಯಾಕ್ಟ್‌ಚೆಕ್‌(ಸತ್ಯಶೋಧನೆ) ವರದಿ.

ತಪ್ಪು ಮಾಹಿತಿ ಹೊಂದಿರುವ ಪೋಸ್ಟ್‌:

2011ರಲ್ಲಿ ವಿಶ್ವ ಬ್ಯಾಂಕ್‌ ಭಾರತದ ಆರ್ಥಿಕತೆ ಅಭಿವೃದ್ಧಿಯನ್ನು ಪಿಪಿಪಿ (ಕೊಳ್ಳುವ ಶಕ್ತಿಯ ಸಾಮ್ಯತೆ) ನಿಯಮದಡಿ ಲೆಕ್ಕಹಾಕಿ ವರದಿ ಬಿಡುಗಡೆ ಮಾಡಿತ್ತು. ಅದರ ಅನ್ವಯ, ಭಾರತ 3ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿ ಉಲ್ಲೇಖವಾಗಿತ್ತು. ಆದರೆ 2020 ಮತ್ತು 2021ರಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಭಾರತದ ಆರ್ಥಿಕತೆ ಪ್ರಗತಿಯನ್ನು ಮಾರುಕಟ್ಟೆ ಬೆಲೆಯ ನೈಜ ಜಿಡಿಪಿಯನ್ನು ಆಧರಿಸಿ ಬಿಡುಗಡೆ ಮಾಡಿದೆ. ಅದರ ಅನ್ವಯ ಭಾರತದ ಜಿಡಿಪಿ ಬೆಳವಣಿಗೆ 2020ರಲ್ಲಿ ಶೇ.10.08 ಮತ್ತು 2021ರಲ್ಲಿ ಶೇ.8.8ರಷ್ಟಿದೆ. ಈ ಡಾಟಾ ಬಿಡುಗಡೆ ಮಾಡಿದ ಐಎಂಎಫ್‌, ಅದಕ್ಕೆ ಸಂಬಂಧಪಟ್ಟು ಯಾವುದೇ ಶ್ರೇಯಾಂಕವನ್ನೂ ಕೊಟ್ಟಿಲ್ಲ. ಆದರೆ ಈ ಬಗ್ಗೆ ಅಂಕಿ-ಅಂಶಗಳ ಸಹಿತ ವರದಿ ಮಾಡಿದ Statistics Times ಎಂಬ ವೆಬ್‌ಸೈಟ್‌, ತನ್ನ ಅಂಕಿ-ಅಂಶಗಳ ಪಟ್ಟಿಯಲ್ಲಿ ಭಾರತವನ್ನು 2020ರಲ್ಲಿ 164ನೇ ರ‍್ಯಾಂಕ್‌ನಲ್ಲಿ ಮತ್ತು 2021ರ ಸಾಲಿನಲ್ಲಿ 8ನೇ ರ‍್ಯಾಂಕ್‌ನಲ್ಲಿ ಇಟ್ಟಿದೆ. ಈ 164 ಆಗಲೀ, 8 ಎಂಬ ಸಂಖ್ಯೆಯಾಗಲೀ Statistics Times ವೆಬ್‌ಸೈಟ್‌ ಕೊಟ್ಟಿದ್ದೇ ಹೊರತು ಭಾರತೀಯ ಹಣಕಾಸು ಸಂಸ್ಥೆ ಹೇಳಿದ್ದಲ್ಲ. ಆದರೆ ಈಗ ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ ಇದೇ 164ನ್ನು ಇಟ್ಟುಕೊಂಡು ತಪ್ಪಾದ ಮಾಹಿತಿ ನೀಡಲಾಗುತ್ತಿದೆ.

ಹೋಲಿಕೆ ಮಾಡುವುದೇ ಸರಿಯಲ್ಲ ಎಂದ ಪಿಐಬಿ
ಪಿಐಬಿ (Press Information Bureau) ಕೂಡ ಈ ಬಗ್ಗೆ ಫ್ಯಾಕ್ಟ್‌ಚೆಕ್‌ ನಡೆಸಿದೆ. 2011ರಲ್ಲಿ ಪಿಪಿಪಿ ನಿಯಮದಡಿ ಮಾಡಿರುವ ಲೆಕ್ಕಾಚಾರಕ್ಕೂ, ಈಗ ಮಾರ್ಕೆಟ್‌ ಪ್ರೈಸ್‌ನಲ್ಲಿ ನೈಜ ಜಿಡಿಪಿ ಆಧಾರದಲ್ಲಿ ಮಾಡಿರುವ ಲೆಕ್ಕಾಚಾರಕ್ಕೂ ಹೋಲಿಕೆಯೇ ಸರಿಯಲ್ಲ. ಸಂಪೂರ್ಣ ತಪ್ಪಾದ ಹೋಲಿಕೆಯಾಗುತ್ತದೆ. 2011ರಂತೆ ಈಗಲೂ ಭಾರತದ ಆರ್ಥಿಕತೆಯನ್ನು ಪಿಪಿಪಿ (ಕೊಳ್ಳುವ ಶಕ್ತಿಯ ಸಾಮ್ಯತೆ) ಮಾದರಿಯಲ್ಲೇ ಲೆಕ್ಕ ಹಾಕಿದರೆ, ಪ್ರಸ್ತುತ ಕೂಡ ಭಾರತ ವಿಶ್ವದಲ್ಲಿ ಅತಿದೊಡ್ಡ ಆರ್ಥಿಕತೆ ಹೊಂದಿರುವ ಮೂರನೇ ದೇಶವಾಗಿಯೇ ಉಳಿದಿದೆ. ಅಂದರೆ ಅದರ ಸ್ಥಾನ ಪಲ್ಲಟವಾಗಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ವಿಸ್ತಾರ Fact Check: ಮೋಹನ್‌ ಭಾಗವತ್‌ ಜತೆ ದ್ರೌಪದಿ ಮುರ್ಮು?; ಫೋಟೊ ಹಿಂದಿನ ಸತ್ಯವೇನು?

Exit mobile version