ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗವು (7th Pay Commission) ತನ್ನ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ನೌಕರರಿಂದ ಮಾಹಿತಿ ಹಾಗೂ ಸಲಹೆಗಳನ್ನು ಪಡೆಯಲು ಪ್ರಶ್ನಾವಳಿಗಳನ್ನು ಪ್ರಕಟಿಸಿದೆ.
ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು, ಇಲಾಖಾ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ವಿಶ್ವವಿದ್ಯಾನಿಲಯಗಳ ಬೋಧಕ ಸಿಬ್ಬಂದಿ ವರ್ಗ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಪ್ರಶ್ನಾವಳಿಯನ್ನು ರೂಪಿಸಿ ಬಿಡುಗಡೆ ಮಾಡಲಾಗಿದೆ.
ಆಸಕ್ತರು ಈ ಪ್ರಶ್ನಾವಳಿಗಳಿಗೆ ಉತ್ತರಗಳನ್ನು, ತಮ್ಮ ಅನಿಸಿಕೆ ಹಾಗೂ ಮುಕ್ತ ಸಲಹೆಗಳನ್ನು ನೀಡಬಹುದಾಗಿದೆ. ಫೆಬ್ರವರಿ 10ರ ಒಳಗೆ ಇದನ್ನು ಆಯೋಗಕ್ಕೆ ಸಲ್ಲಿಸಬೇಕೆಂದು ಕೋರಲಾಗಿದೆ. ಆಯೋಗದ ವಿಳಾಸವು ಇಂತಿದೆ; ಕಾರ್ಯದರ್ಶಿ, 7ನೇ ರಾಜ್ಯ ವೇತನ ಆಯೋಗ, 3ನೇ ಮಹಡಿ, ಔಷಧ ನಿಯಂತ್ರಣ ಇಲಾಖೆಯ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು- 560001.
ಕಚೇರಿ ಕಾರ್ಯಾರಂಭ
ಬೆಂಗಳೂರಿನ ಔಷಧ ನಿಯಂತ್ರಕರ ಹಳೆಯ ಕಚೇರಿ ಕಟ್ಟಡದಲ್ಲಿನ 3ನೇ ಮಹಡಿಯಲ್ಲಿ ಆಯೋಗದ ಕಚೇರಿಯು ಆರಂಭವಾಗಿದೆ. ಮೂರನೇ ಮಹಡಿಯಲ್ಲಿನ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಲಭ್ಯವಿರುವ 2500 ಚ.ಅಡಿ ಜಾಗವನ್ನು ಆಯೋಗದ ಕಚೇರಿಗೆ ಬಳಸಿಕೊಂಡಿದೆ. ಇಲ್ಲಿಯ ಕಾರಿಡಾರ್ ಅನ್ನೂ ಬಳಸಿಕೊಳ್ಳಲು ಅನುಮತಿ ಪಡೆಯಲಾಗಿದೆ.
ಆಯೋಗವು ಅಧ್ಯಕ್ಷರು, ಇಬ್ಬರು ಸದಸ್ಯರು ಮತ್ತು ಕಾರ್ಯದರ್ಶಿಯನ್ನು ಒಳಗೊಂಡಿದ್ದು, ಇವರುಗಳಿಗೆ ಒಂದು ಸಭಾಂಗಣ ಕೊಠಡಿ, ಪ್ರೇಕ್ಷಕರ ಕೊಠಡಿ ಮತ್ತು ಆರು ಕೊಠಡಿಗಳನ್ನು ಸದ್ಯ ರೂಪಿಸಲಾಗಿದೆ. ಆಯೋಗಕ್ಕೆ ಕಾರ್ಯನಿರ್ವಹಿಸಲು ಅಗತ್ಯವಾಗಿರುವ 44 ಹುದ್ದೆಗಳನ್ನು ಸೃಜಿಸಲಾಗಿದೆ. ಆಯೋಗದ ಕಾರ್ಯಗಳು ಸುಗಮವಾಗಿ ನಡೆಯುವಂತಾಗಲು ಮತ್ತು ಕಾರ್ಯ ನಿರ್ವಹಣೆಯಲ್ಲಿ ಅಂತರ್ ವಿನಿಮಯತೆಯ ದೃಷ್ಟಿಯಿಂದ ಅಪರ/ಜಂಟಿ/ಉಪ ಕಾರ್ಯದರ್ಶಿ/ ವಿಶೇಷಾಧಿಕಾರಿ ಹುದ್ದೆಗಳನ್ನು ಸೃಜಿಸಲಾಗಿದೆ.
ಪ್ರಶ್ನಾವಳಿಗೆ ಸಂಬಂಧಿಸಿದ ಅಧಿಸೂಚನೆ ಇಲ್ಲಿದೆ.
ಈ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಲಾಭ ಪಡೆಯಲಿದ್ದಾರೆ. ಆಯೋಗಕ್ಕೆ ಶಿಫಾರಸು ನೀಡಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಆದರೆ ಮುಂದಿನ ಬಜೆಟ್‌ನ ಒಳಗೇ ಆಯೋಗವು ಮಧ್ಯಂತರ ವರದಿ ನೀಡಬೇಕೆಂದು ಒತ್ತಡ ಹೇರಲಾಗುತ್ತಿದೆ.
ಸಮಾನ ವೇತನದ ಕುರಿತೂ ಮಾಹಿತಿ ನೀಡಿ
ಆಯೋಗವನ್ನು ನಿರ್ದಿಷ್ಟವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಸಿಬ್ಬಂದಿಗಳ ನಡುವಿನ ಹುದ್ದೆಗಳ ಸಮಾನತೆಯನ್ನು ನಿರ್ಧರಿಸುವ ಮೂಲಕ ಕೇಂದ್ರೀಯ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಸರ್ಕಾರ ಕೋರಿದೆ. ಈ ಬಗ್ಗೆಯೂ ಆಯೋಗಕ್ಕೆ ಆಸಕ್ತರು ಮಾಹಿತಿ ನೀಡಬಹುದಾಗಿದೆ.
ನಿವೃತ್ತಿ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಸೌಲಭ್ಯ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆಯೂ ಅವಶ್ಯವಿರುವ ಬದಲಾವಣೆಗಳ ಕುರಿತು ಸಹ ಶಿಫಾರಸ್ಸು ಮಾಡುವಂತೆ ಆಯೋಗಕ್ಕೆ ಸರ್ಕಾರ ಸೂಚಿಸಿದೆ. ಹೀಗಾಗಿ ಈ ವಿಷಯಗಳ ಕುರಿತು ನೌಕರರು, ಸಾರ್ವಜನಿಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು ಈ ಪ್ರಶ್ನಾವಳಿಗೆ ಉತ್ತರಿಸುವ ಮೂಲಕ ಹಂಚಿಕೊಳ್ಳಬಹುದಾಗಿದೆ.
ಇದನ್ನೂ ಓದಿ | CLT Exam | ಸರ್ಕಾರಿ ನೌಕರರ ಕಂಪ್ಯೂಟರ್ ಟೆಸ್ಟ್; ಗಡುವು ಮಾ.31ರ ವರೆಗೆ ವಿಸ್ತರಣೆ