Site icon Vistara News

7th Pay Commission : ಬಜೆಟ್‌ನಲ್ಲಿ 7ನೇ ವೇತನ ಆಯೋಗ ಜಾರಿಗೆ ಅನುದಾನ; ನೌಕರರ ಸಂಘದಿಂದ ಸಿಎಂಗೆ ಮನವಿ

Karnataka state employees association

ಬೆಂಗಳೂರು: 7ನೇ ವೇತನ ಆಯೋಗದ ವರದಿಯನ್ನು (7th Pay Commission) ಜಾರಿಗೊಳಿಸಲು ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಬೇಕೆಂದು (Govt Employees News) ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ‌ ರಾಜ್ಯದ ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ನೇತೃತ್ವದ ನಿಯೋಗವು ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದೆ. ಏಳನೇ ವೇತನ ಆಯೋಗದ ವರದಿಯನ್ನು ತ್ವರಿತವಾಗಿ ಪಡೆದು, ಅದನ್ನು ಜಾರಿಗೆ ತರಬೇಕಾಗಿದೆ. ಹೀಗಾಗಿ ಈ ಬಜೆಟ್‌ನಲ್ಲಿಯೇ ಅಗತ್ಯ ಅನುದಾನವನ್ನು ಮೀಸಲಿಡಬೇಕೆಂದು ನಿಯೋಗವು ಕೋರಿದೆ.

ರಾಜ್ಯದ ಬಜೆಟ್‌ ಅನ್ನು ಜುಲೈ 7 ರಂದು ಮಂಡಿಸಲಾಗುತ್ತಿದ್ದು, ಇದರಲ್ಲಿ 7ನೇ ವೇತನ ಆಯೋಗದ ಜಾರಿಗೆ ಅಗತ್ಯ ಅನುದಾನ ನೀಡುವ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಕಳೆದ ಫೆಬ್ರವರಿಯಲ್ಲಿ ಬಜೆಟ್‌ ಮಂಡಿಸಿದ್ದ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಳನೇ ವೇತನ ಆಯೋಗದ ಜಾರಿಗೆ ಬದ್ಧತೆ ವ್ಯಕ್ತಪಡಿಸಿದ್ದರೂ ಅಗತ್ಯ ಅನುದಾನವನ್ನು ಮೀಸಲಿಟ್ಟಿರಲಿಲ್ಲ. ಇದು ನೌಕರರ ಅಸಮಧಾನಕ್ಕೆ ಕಾರಣವಾಗಿತ್ತು.

ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಕೆ.

ಈ ಸಂದರ್ಭದಲ್ಲಿ ಸಂಘದ ನಿಯೋಗವು ಈಗ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದು ಪಡಿಸಿ, ಹಳೇ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೆ ತರಬೇಕೆಂದೂ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ. ಈ ಬಗ್ಗೆಯೂ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ “2006ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ಸಹಾನುಭೂತಿಯ ನಿರ್ಧಾರ ತೆಗೆದುಕೊಳ್ಳಲಾಗುವುದುʼʼ ಎಂದು ಭರವಸೆ ನೀಡಿತ್ತು.

ʻಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆʼ (ಕೆಎಎಸ್‌ಎಸ್‌) (karnataka arogya sanjeevani)ಯನ್ನು ಕೂಡಲೇ ಜಾರಿಗೆ ತರುವಂತೆಯೂ ರಾಜ್ಯ ಸರ್ಕಾರಿ ನೌಕರರ ಸಂಘ‌ ಒತ್ತಾಯಿಸಿದೆ. ಈ ಯೋಜನೆಯ ಪರಿಷ್ಕೃತ ಕಾರ್ಯನೀತಿಯನ್ನು ಈ ಹಿಂದಿನ ಸರ್ಕಾರ ಕಳೆದ ಮಾರ್ಚ್‌ನಲ್ಲಿ ಪ್ರಕಟಿಸಿದೆ. ಆದರೆ ಯೋಜನೆಗೆ ಇನ್ನೂ ಚಾಲನೆ ನೀಡಲಾಗಿಲ್ಲ.

2020- 21 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. ಆದರೆ ಯೋಜನೆ ಲಾಭ ಪಡೆಯಲು ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಕುಟುಂಬದ ಸದಸ್ಯರಿಗೆ ಇನ್ನೂ ಸಾಧ್ಯವಾಗಿರಲಿಲ್ಲ. ಕಳೆದ ವರ್ಚದ ಜೂನ್‌ನಲ್ಲಿಯೇ ಯೋಜನಾ ವರದಿಯು ಸಿದ್ಧಗೊಂಡಿದ್ದು, ಅದರ ಪ್ರಕಾರ ಪ್ರತ್ಯೇಕ ಕೋಶವೊಂದನ್ನು (ಸೆಲ್‌) ರಚಿಸಿ ರಾಜ್ಯ ಸರ್ಕಾರ ಆದೇಶ ಕೂಡ ಹೊರಡಿಸಿತ್ತು. ಇದಾಗಿ ಏಳು ತಿಂಗಳ ನಂತರ ಸರ್ಕಾರ ಸ್ಪಷ್ಟ ಕಾರ್ಯನೀತಿಯನ್ನು ಪ್ರಕಟಿಸಿತ್ತು. ಆದರೂ ಯೋಜನೆಗೆ ಚಾಲನೆ ನೀಡಲಾಗಿಲ್ಲ. ನೂತನ ಸರ್ಕಾರ ಈ ಯೋಜನೆಗೆ ಕೂಡಲೇ ಚಾಲನೆ ನೀಡಬೇಕೆಂದು ಸಂಘ ಆಗ್ರಹಿಸಿದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಇದಲ್ಲದೆ, ಸರ್ಕಾರಿ ನೌಕರರ ಅಂತರಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದಂತೆ 16a ನಿಯಮಗಳಿಗೆ ತಿದ್ದುಪಡಿ ಮಾಡಿ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕೆಂದೂ ಈ ನಿಯೋಗ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.

ಸಂಘದ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಘಷ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನೂತನ ಮುಖ್ಯಮಂತ್ರಿಗಳನ್ನು ಸಂಘದ ವತಿಯಿಂದ ಅಭಿನಂದಿಸಲಾಗಿದೆ.

ಇದನ್ನೂ ಓದಿ: Govt Employees News : ರಾಜ್ಯ ಸರ್ಕಾರಿ ನೌಕರರಿಗೂ ಜಿಪಿಎಫ್‌ ವಂತಿಗೆ ಮಿತಿ; ಐದು ಲಕ್ಷ ರೂ.ಗಳಿಗೆ ನಿಗದಿ

ನಿಯೋಗದಲ್ಲಿ ರಾಜ್ಯ ಸರ್ಕಾರಿನ ನೌಕರರ ಸಂಘದ ಎನ್‌. ಮಾಲತೇಶ್‌, ಎಂ.ವಿ. ರುದ್ರಪ್ಪ, ಎಸ್‌. ಬಸವರಾಜು, ಡಾ.ನೆಲ್ಕುದ್ರಿ ಸದಾನಂದಪ್ಪ, ಮೋಹನ್‌ ಕುಮಾರ್‌, ಶ್ರೀ ಹರ್ಷ, ಹರಿರಾಮಕೃಷ್ಣ, ಚಿಕ್ಕದೇವೇಗೌಡ, ಚೇತನ್‌ಕುಮಾರ್‌ ಮತ್ತಿತರರು ಇದ್ದರು.

Exit mobile version