ಬೆಂಗಳೂರು: 7ನೇ ವೇತನ ಆಯೋಗದ (7th pay commission) ವರದಿಯ ಜಾರಿಯು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು ಹಾಗೂ ನೂತನ ಪಿಂಚಣಿ ಯೋಜನೆಯನ್ನು (NPS) ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿ ಮಾ.1 ರಂದು ಕರ್ತವ್ಯಕ್ಕೆ ಗೈರಾಗುವ ಮುಷ್ಕರ ನಡೆಸಿದ್ದ (Govt Employees Strike) ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ನೌಕರರ ಹಕ್ಕಿನಲ್ಲಿರುವ ರಜೆ ಅಥವಾ ಪಡೆಯಲು ಅರ್ಹರಿರುವ ರಜೆ ತೆಗೆದುಕೊಳ್ಳಲು ಅವಕಾಶ ನೀಡಿದೆ.
ಈ ಸಂಬಂಧ ಮಾರ್ಚ್ 27 ರಂದೇ ಆದೇಶ ಹೊರಡಿಸಲಾಗಿದೆ. ʻʻಕರ್ನಾಟಕ ರಾಜ್ಯ ಸರ್ಕಾರಿನ ನೌಕರರ ಸಂಘದ ಕರೆಯ ಮೇರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ದಿನಾಂಕ: 01-03-2023 ರಂದು ಮುಷ್ಕರ ಮಾಡಿ, ಕಚೇರಿಗೆ ಗೈರು ಹಾಜರಾದುದನ್ನು, ಆ ದಿನಾಂಕದಂದು ನೌಕರರ ಹಕ್ಕಿನಲ್ಲಿರುವ ರಜೆ ಅಥವಾ ಪಡೆಯಲು ಅರ್ಹರಿರುವ ರಜೆ ಎಂದು ಪರಿಗಣಿಸಲು ಆದೇಶಿಸಿದೆʼʼ ಎಂದು ಆದೇಶದಲ್ಲಿ ಹೇಳಲಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಸಿತ್ತು. ಮನವಿಯನ್ನು ಪುರಸ್ಕರಿಸಿರುವ ಸರ್ಕಾರ ಈ ಸಂಬಂಧ ನಿರೀಕ್ಷೆಯಂತೆ ಆದೇಶ ಹೊರಡಿಸಿದೆ. ಮುಷ್ಕರ ಅಂತ್ಯವಾಗುತ್ತಿದ್ದಂತೆಯೇ, ಮುಷ್ಕರದ ದಿನದಂದು ಕರ್ತವ್ಯಕ್ಕೆ ಗೈರಾದ ಯಾವುದೇ ನೌಕರರು ಹಾಜರಾತಿಯಲ್ಲಿ ಸಹಿ ಮಾಡಬಾರದು. ಯಾವ ರಜೆ ಹಾಕಬೇಕು ಎನ್ನುವುದರ ಬಗ್ಗೆ ಸರ್ಕಾರದಿಂದ ಸದ್ಯವೇ ಆದೇಶ ಬರಲಿದೆ. ಅದರಂತೆ ನಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ನೌಕರರಲ್ಲಿ ಮನವಿ ಮಾಡಿಕೊಂಡಿದ್ದರು.
ಮುಷ್ಕರವನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಕಟಿಸಲು ಮಾ.1ರ ಬುಧವಾರದಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿಯೇ ಷಡಾಕ್ಷರಿ ಅವರು ಈ ವಿಷಯವನ್ನು ಪ್ರಕಟಿಸಿದ್ದರು. ಅಲ್ಲದೆ ಈಗಾಗಲೇ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ವೇತನಸಹಿತ ರಜೆಯನ್ನು ಪ್ರಕಟಿಸುವಂತೆ ಕೋರಿದ್ದೇವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಈ ಸಂಬಂಧ ಮನವಿ ಮಾಡಿಕೊಳ್ಳಲಾಗಿದೆ ಎಂದೂ ಹೇಳಿದ್ದರು.
ಸರ್ಕಾರದ ಆದೇಶ ಹೀಗಿದೆ;
ರಾಜ್ಯ ಸರ್ಕಾರವು ವೇತನವನ್ನು ಶೇ.17 ರಷ್ಟು ಹೆಚ್ಚಿಸಿ, ಅಧಿಕೃತ ಆದೇಶ ಹೊರಡಿಸಿದ್ದರಿಂದ ಹಾಗೂ ಎನ್‌ಪಿಎಸ್ ರದ್ದು ಮಾಡುವ ಕುರಿತು ತೀರ್ಮಾನಿಸಲು ವಿಶೇಷ ಸಮಿತಿ ರಚಿಸಿದ್ದರಿಂದ ಸರ್ಕಾರಿ ನೌಕರರ ಸಂಘವು ಮುಷ್ಕರವನ್ನು ಹಿಂದಕ್ಕೆ ಪಡೆದುಕೊಂಡಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಮುಷ್ಕರದ ಸಂದರ್ಭದಲ್ಲಿ ರಾಜ್ಯದ ಎಲ್ಲ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಿದ್ದು, ಎಲ್ಲ ಸರ್ಕಾರಿ ಸೇವೆಗಳನ್ನು ಬಂದ್ ಮಾಡಲಾಗಿತ್ತು. ರಾಜ್ಯಾದ್ಯಂತ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿತ್ತು. ಮುಷ್ಕರ ಅಂತ್ಯವಾಗುತ್ತಿದ್ದಂತೆಯೇ ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದ್ದರೂ ಕರ್ತವ್ಯದ ಸ್ಥಳದಿಂದ ದೂರವಿದ್ದವರಿಗೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಅಂದು ಕೆಲಸಕ್ಕೆ ಗೈರಾದ ಬಹುತೇಕ ನೌಕರರಿಗೆ ಸರ್ಕಾರದ ಈ ಆದೇಶದಿಂದ ಅನುಕೂಲವಾಗಲಿದೆ.
ಇದನ್ನೂ ಓದಿ : EPFO: ಇಪಿಎಫ್ ಬಡ್ಡಿ ದರ 8.15%ಕ್ಕೆ ಏರಿಕೆ