Site icon Vistara News

ಇಂದು ತಿಪಟೂರಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ; ಶಿಕ್ಷಕರ ಸಂಘದಿಂದ ಸಕಲ ಸಿದ್ಧತೆ

ಶೈಕ್ಷಣಿಕ ಕಾರ್ಯಾಗಾರ

ಬೆಂಗಳೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ತುಮಕೂರು ಜಿಲ್ಲೆ ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ನವೆಂಬರ್‌ 30 ರಂದು ನಡೆಯಲಿದೆ. ಸಂಘದ ಅಧ್ಯಕ್ಷ ಶಂಭುಲಿಂಗನ ಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತೃತ್ವದ ತಂಡ ಈ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಕಾರ್ಯಾಗಾರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗೌರವಾನ್ವಿತ 61 ಶಿಕ್ಷಕ ಹಾಗೂ ಶಿಕ್ಷಕಿಯರಿಗೆ “ಅಕ್ಷರ ಸಿರಿʼʼ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಭಿನಂದನಾ ಸಮಾರಂಭ ಹಾಗೂ ಸಂಘದ ಸರ್ವ ಸದಸ್ಯರ ಸಭೆಯೂ ನಡೆಯಲಿದೆ.

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿಕ್ಷಕರನ್ನು ಸನ್ಮಾಸಿಸುವ ಕಾರ್ಯಕ್ರಮದ ಸಾನಿಧ್ಯವನ್ನು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಸ್ವಾಮೀಜಿ ಹಾಗೂ ಕೆರಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಾಗಾರವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ ನಾಗೇಶ್ ಉದ್ಘಾಟಿಸಲಿದ್ದಾರೆ.

ವ್ಯವಸ್ಥೆ ಪರಿಶೀಲಿಸುತ್ತಿರುವ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮತ್ತಿತರರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್‌ ಕುಮಾರ್‌ಸಿಂಗ್, ಆಯುಕ್ತರಾದ ಡಾ.ಆರ್.ವಿಶಾಲ್, ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕಿ ಕಾವೇರಿ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ್, ತುಮಕೂರು ಜಿಲ್ಲೆಯ ಉಪನಿರ್ದೇಶಕ ನಂಜಯ್ಯ, ಸ್ಥಳೀಯ ನಗರಸಭೆಯ ಅಧ್ಯಕ್ಷ ರಾಮ್ ಮೋಹನ್, ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ನ ಕಾರ್ಯದರ್ಶಿ ಬಸವರಾಜು ಗುರಿಕಾರ, ಸಂಘದ ನಿಕಟಪೂರ್ವ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಕಾರ‍್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಮುಖ 26 ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಶಿಕ್ಷಕರ ಸಂಘವು ಸಿದ್ಧತೆ ಮಾಡಿಕೊಂಡಿದೆ. ಕಾರ್ಯಾಗಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.

ಊಟಕ್ಕೆ ತಿಪಟೂರಿನ ಮೆಂತೆ ಬಾತು
ರಾಜ್ಯ ಮಟ್ಟದ ಕಾರ್ಯಾಗಾರಕ್ಕೆ ಆಗಮಿಸುವ ಶಿಕ್ಷಕರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮಾಡಿದೆ. ತಿಪಟೂರಿನ ಪ್ರಸಿದ್ಧ ಮೆಂತೆಬಾತು ಮೆನು ಕಾರ್ಡ್‌ನಲ್ಲಿ ಅಗ್ರ ಸ್ಥಾನ ಪಡೆದಿದೆ. ಇದಲ್ಲದೆ ಕಾಯಿ ಒಬ್ಬಟ್ಟು (ಹೋಳಿಗೆ), ರಾಗಿ ಮುದ್ದೆ, ಹುರುಳಿಕಾಳು, ಸಾಂಬಾರು, ಹಪ್ಪಳ, ಕೋಸಂಬರಿ, ಸಬ್ಬಕ್ಕಿ ಪಾಯಸ, ಅನ್ನ, ರಸಂ, ಚಟ್ನಿ, ಹಪ್ಪಳ, ಮಜ್ಜಿಗೆ ಬಾಳೆಹಣ್ಣು ಇರಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾ ಅದ್ಯಕ್ಷ ಪರಶಿವ ಮೂರ್ತಿ, ತಾಲ್ಲೂಕು ಅಧ್ಯಕ್ಷ ಜಯರಾಂ ಜಿ.ಆರ್, ಪ್ರಧಾನ ಕಾರ್ಯದರ್ಶಿ ಪಟ್ಟಾಭಿರಾಮು ಗುಬ್ಬಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ , ಸಹಕಾರ್ಯದರ್ಶಿ ನಾಗರಾಜು, ಸೋಮಶೇಖರ್‌, ತಿಮ್ಮೆಗೌಡ, ಗೌರವಾಧ್ಯಕ್ಷ ಓಂಕಾರ ಮೂರ್ತಿ, ಚಿಕ್ಕಣ್ಣ, ಬಸವರಾಜು, ಕೆಂಪೇಗೌಡ ಮತ್ತಿತರರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ | ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

Exit mobile version