ನಿಮ್ಮ ಪ್ರಶ್ನೆ : ನನ್ನ ತಂದೆಯವರು ಹಾಸನ ಜಿಲ್ಲೆಯ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಾರ್ಚ್ 2022ರಲ್ಲಿ ಅನಾರೋಗ್ಯ ದಿಂದ ನಿಧನ ಹೊಂದಿದ್ದಾರೆ. ತದನಂತರ ನನ್ನ ತಾಯಿಯವರು ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಮೊದಲೇ 2022ರ ಸೆಪ್ಟೆಂಬರ್‌ನಲ್ಲಿ ಅವರೂ ಕೂಡ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಒಬ್ಬಳೇ ಮಗಳಾದ ನನಗೆ ಅನುಕಂಪದ ಮೇರೆಗೆ ನೇಮಕ ಮಾಡಿಕೊಳ್ಳಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದೇನೆ. ನನಗೆ ಅನುಕಂಪದ ಮೇಲೆ ನೌಕರಿ ಲಭ್ಯವಾಗುತ್ತದೆಯೇ?
ಭವಾನಿ ಎಸ್. | ಹಾಸನ
ತಜ್ಞರು ನೀಡಿದ ಉತ್ತರ: ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996ರ ನಿಯಮ 3(2) ರಂತೆ ಅವಿವಾಹಿತ ಮಗಳು ಅನುಕಂಪದ ಮೇರೆಗೆ ನೇಮಕಾತಿಯನ್ನು ಪಡೆಯಲು ಅರ್ಹಳು. ನಿಮ್ಮ ತಂದೆಯವರ ಹುದ್ದೆಯನ್ನು ನಿಮ್ಮ ತಾಯಿಯವರು ಪಡೆಯುವ ಮೊದಲೇ ನಿಧನರಾಗಿರುವುದರಿಂದ ಈ ನಿಯಮಾವಳಿಯಂತೆ ನಿಮ್ಮ ಅರ್ಜಿಯನ್ನು ಪರಿಗಣಿಸಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಯವರು ನೇಮಕ ಮಾಡಿಕೊಳ್ಳುತ್ತಾರೆ. ನೀವು ಕೂಡಲೇ ಅರ್ಜಿ ಸಲ್ಲಿಸಿ, ಧೈರ್ಯವಾಗಿರಿ.
ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ: janasamparka@vistaranews.com
ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದನ್ನೂ ಓದಿ | ನೌಕರ ಮಿತ್ರ | ಸರ್ಕಾರಿ ನೌಕರರು ಜಮೀನು ಖರೀದಿಸಬಹುದೇ?