Site icon Vistara News

ನೌಕರ ಮಿತ್ರ | ಸಿ ವಿ ಪಿ ಹಣವನ್ನು ಸರ್ಕಾರಕ್ಕೆ ಒಂದೇ ಕಂತಿನಲ್ಲಿ ಮರು ಪಾವತಿಸಬಹುದೇ?

ನೌಕರ ಮಿತ್ರ

ನಿಮ್ಮ ಪ್ರಶ್ನೆ : ನಾನು ಸರ್ಕಾರಿ ಸೇವೆಯಿಂದ ಪೊಲೀಸ್ ಇಲಾಖೆಯಲ್ಲಿ ಶಾಖಾಧೀಕ್ಷಕನಾಗಿ ೩೧-೦೮-೨೦೧೦ ರಂದು ವಯೋ ನಿವೃತ್ತಿ ಆಗಿದ್ದೇನೆ. ನನ್ನ ಮೇಲೆ ಇಲಾಖಾ ವಿಚಾರಣೆ ಇತ್ತು. ಕಾರಣ ಪಿಂಚಣಿಯನ್ನು ಮಾತ್ರ ನಿವೃತ್ತಿಯ ದಿನಾಂಕದಿಂದ ಮಂಜೂರು ಮಾಡಲಾಗಿದೆ. ಆದರೆ, ಡಿ.ಸಿ.ಆರ್.ಜಿ. ಹಾಗೂ ಸಿ.ವಿ.ಪಿ. ಹಣ ತಡೆ ಹಿಡಿದುಕೊಂಡು ಇಲಾಖೆ ವಿಚಾರಣೆ ಅಂತಿಮ ಆದ ಮೇಲೆ ಹಣದ ರೂಪದಲ್ಲಿ ದಂಡ ವಿಧಿಸಿದ್ದಾರೆ.

ಅದನ್ನು ನಾನು ಒಂದೇ ಕಂತಿನಲ್ಲಿ ಸರ್ಕಾರಕ್ಕೆ ಹಣ ಪಾವತಿಸಿದ್ದೇನೆ. ಮಹಾಲೇಖಾಪಾಲರು ತಡೆ ಹಿಡಿದ ಸಿ.ವಿ.ಪಿ. ಹಾಗೂ ಡಿ.ಸಿ.ಆರ್.ಜಿ. ೨೫-೦೨-೨೦೧೫ ರಂದು ಬಿಡುಗಡೆ ಮಾಡಿ ಪಾವತಿಸಲಾಗಿದೆ. ಪ್ರತಿ ತಿಂಗಳ ಪಿಂಚಣಿ ಪಾವತಿಯಲ್ಲಿ ಸಿ.ವಿ.ಪಿ. ಕಂತಿನ ಹಣ ಕಡಿತಗೊಳಿಸುತ್ತಿದ್ದಾರೆ. ಈ ಸಿ.ವಿ.ಪಿ. ಹಣವು ೨೩-೦೨-೨೦೩೦ ರವರೆಗೆ ಕಡಿತ ಗೊಳಿಸಲಾಗುವುದು. ನಾನು ವಯೋನಿವೃತ್ತಿ ಆಗಿ ೧೨ ವರ್ಷ ಹಾಗೂ ನನ್ನ ವಯಸ್ಸು ೭೧ ವರ್ಷ ಆಗಿದೆ. ನಾನು ನನ್ನ ಸ್ಚ-ಇಚ್ಛೆಯಿಂದ ಬಾಕಿ ಉಳಿದ ಸಿ.ವಿ.ಪಿ. ಹಣವನ್ನು ಸರ್ಕಾರಕ್ಕೆ ಒಂದೇ ಕಂತಿನಲ್ಲಿ ಮರು ಪಾವತಿಸಲು ಸಿದ್ದನಿದ್ದೇನೆ. ಇದರ ಬಗ್ಗೆ ಸಲಹೆ ಹಾಗೂ ಸೂಚನೆಗಳು ತಿಳಿಸಲು ನಮ್ರ ವಿನಂತಿ.
ಕೆ. ದಿವಾಕರ ಮೂರ್ತಿ | ಬೆಂಗಳೂರು

ತಜ್ಞರು ನೀಡಿದ ಉತ್ತರ: ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ ೩೭೬(೨) ರಂತೆ ೧/೩ ಭಾಗದಷ್ಟು ನಿವೃತ್ತಿ ವೇತನವನ್ನು ಪರಿವರ್ತನೆ ಮಾಡಿಕೊಳ್ಳಲು ತನಗೆ ಇಚ್ಛೆ ಇದೆಯೇ, ಇಲ್ಲವೇ ಎಂಬುದನ್ನು ಸರ್ಕಾರಿ ನೌಕರ ಘೊಷಿಸಬೇಕು. ಘೋಷಣೆ ಇಲ್ಲದಿದ್ದ ಪ್ರಕರಣಗಳಲ್ಲಿ ಮಹಾಲೇಖಪಾಲರು ನಿಯಮಾನುಸಾರ ಗರಿಷ್ಠ ಪರಿವರ್ತನೆ ಮಾಡಿಕೊಳ್ಳಲು ಭಾವಿಸಿ, ಸಿ.ವಿ.ಪಿ.ಯನ್ನು ಮಂಜೂರು ಮಾಡುತ್ತಾರೆ.

ಈ ಮೊಬಲಗನ್ನು ೧೫ ವರ್ಷಗಳ ಅವಧಿಯವರೆಗೆ ಪಿಂಚಣಿಯಿಂದ ಪಡೆದುಕೊಳ್ಳಲಾಗುತ್ತದೆ. ಈ ೧೫ ವರ್ಷಗಳೊಳಗೆ ನಿವೃತ್ತಿದಾರನು ನಿಧನವಾದರೆ ಕುಟುಂಬ ಪಿಂಚಣಿಯಿಂದ ಕಡಿತಗೊಳಿಸಲಾಗುವುದಿಲ್ಲ. ಆದರೆ ಸರ್ಕಾರಿ ನಿವೃತ್ತಿದಾರನು ಸಿ.ವಿ.ಪಿ. ಮೊಬಲಗನ್ನು ಈ ಅವಧಿಗೆ ಮುಂಚೆಯೇ ಸರ್ಕಾರಕ್ಕೆ ಹಿಂತಿರುಗಿಸಲು ನಿಯಮಾವಳಿಯಲ್ಲಿ ಅವಕಾಶವಿರುವುದಿಲ್ಲ.

ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್‌ ವಿಳಾಸ: janasamparka@vistaranews.com

ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದನ್ನೂ ಓದಿ | Naukra Mitra | ಕಾಲಮಿತಿ ವೇತನ ಬಡ್ತಿಯನ್ನು 2ನೇ ಬಾರಿಗೆ ಪಡೆಯಬಹುದೇ?

Exit mobile version