ನಿಮ್ಮ ಪ್ರಶ್ನೆ : ನಮ್ಮ ಇಲಾಖೆಯಲ್ಲಿ ಕೆಲಸ ಮಾಡುವ ಪತಿ-ಪತ್ನಿ ಇಬ್ಬರೂ ಸರ್ಕಾರಿ ಗ್ರೂಪ್ ‘ಸಿ’ ನೌಕರರಾಗಿದ್ದು, ಪ್ರಸ್ತುತ ಪತಿ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಇಬ್ಬರು ಮಕ್ಕಳಿದ್ದು, ಇಬ್ಬರೂ ಅಪ್ರಾಪ್ತರು. ಈಗ ತಂದೆಯ ಕೆಲಸ ಯಾರಿಗೆ ಸಿಗುತ್ತದೆ? ಪತ್ನಿ ಕೂಡ ಗ್ರೂಪ್ ‘ಸಿ’ ನೌಕರರು ಆಗಿದ್ದಾರೆ. ಪತಿಯ ಉದ್ಯೋಗವನ್ನು ಅವರು ಪಡೆದುಕೊಳ್ಳಲು ಬರುವುದಿಲ್ಲ ಅಲ್ಲವೇ? ಮಕ್ಕಳು ಅಪ್ರಾಪ್ತರಾಗಿರುವುದರಿಂದ ಬೇರೆ ಯಾರಿಗಾದರೂ ಈ ಉದ್ಯೋಗ ನೀಡಬಹುದೇ?.
ಶಶಿಕಾಂತ್ | ಉಡುಪಿ
ತಜ್ಞರು ನೀಡಿದ ಉತ್ತರ: ೧೯೯೬ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕಾತಿ) ನಿಯಮಾವಳಿ ನಿಯಮ ೫ ರಂತೆ ಅಪ್ರಾಪ್ತ ವಯಸ್ಕರಾದ ಮಕ್ಕಳಿದ್ದಲ್ಲಿ ಸರ್ಕಾರಿ ನೌಕರನು ನಿಧನ ಹೊಂದಿದ ದಿನಾಂಕದಿಂದ ಎರಡು ವರ್ಷಗಳೊಳಗೆ ಯಾರಾದರೂ ಮಕ್ಕಳು ೧೮ ವರ್ಷಗಳನ್ನು ಪೂರೈಸಿದರೆ ಅವರಿಗೆ ಉದ್ಯೋಗ ನೀಡಲಾಗುತ್ತದೆ. ಎರಡು ವರ್ಷದೊಳಗೆ ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಬೇಕು. ಮೃತರ ಪತ್ನಿ ಈಗಾಗಲೇ ‘ಸಿ’ ಗ್ರೂಪ್‌ನ ಹುದ್ದೆಯಲ್ಲಿರುವುದರಿಂದ ಈ ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಆದ್ದರಿಂದ ತಂದೆಯ ಉದ್ಯೋಗ ಪಡೆಯಲು ಮಕ್ಕಳು ಮಾತ್ರ ಅರ್ಹರಾಗಿರುತ್ತಾರೆ.
ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ: janasamparka@vistaranews.com
ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದನ್ನೂ ಓದಿ | ನೌಕರ ಮಿತ್ರ | ನನ್ನ ನಂತರ ಮಗನಿಗೆ ಪಿಂಚಣಿ ಸಿಗುತ್ತದೆಯೇ? ಸಿಗುವಂತೆ ಮಾಡಲು ಏನು ಮಾಡಬೇಕು?