Site icon Vistara News

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

Teacher Transfer

ಬೆಂಗಳೂರು: ಕಳೆದ ಇಪ್ಪತ್ತು, ಇಪ್ಪತ್ತೈದು ವರ್ಷಗಳಿಂದ ಶಾಲೆಗಳಲ್ಲಿ ಬೋಧಿಸುತ್ತಿರುವ 75 ಸಾವಿರಕ್ಕೂ ಹೆಚ್ಚು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರ ಸದ್ಯವೇ ಗುಡ್‌ ನ್ಯೂಸ್‌ ನೀಡಲಿದೆಯೇ? ಹೌದು, ಎನ್ನುತ್ತಿವೆ ಸರ್ಕಾರದ ಮೂಲಗಳು.

ಸೇವಾ ನಿರತ ಪದವೀಧರ ಶಿಕ್ಷಕರನ್ನು ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ, ಶೇ.40 ರಷ್ಟು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕೆಂಬ ಪ್ರಸ್ತಾಪಕ್ಕೆ ಕೊನೆಗೂ ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿದೆ. ಇನ್ನೆರಡು ದಿನಗಳಲ್ಲಿ ಈ ಪ್ರಸ್ತಾಪವನ್ನು ಶಿಕ್ಷಣ ಇಲಾಖೆಗೆ ಕಳುಹಿಸುವ ಸಾಧ್ಯತೆಗಳಿದ್ದು, ಶಿಕ್ಷಣ ಇಲಾಖೆಯು ಅಂತಿಮವಾಗಿ ಈ ಪ್ರಸ್ತಾಪವನ್ನು ಸಚಿವ ಸಂಪುಟದ ಅನುಮೋದನೆಗಾಗಿ ಕಳುಹಿಸಿಕೊಡಲಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇವಾ ನಿರತ ಪದವೀಧರ ಶಿಕ್ಷಕರ ಪರವಾಗಿ ಇದಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿತ್ತು. ಇತ್ತೀಚೆಗೆ ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಿಸಿದ ಸಂದರ್ಭದಲ್ಲಿಯೂ ಸೇವಾ ನಿರತ ಪದವೀಧರ ಶಿಕ್ಷಕರ ನೇಮಕದ ಕುರಿತು ತೀರ್ಮಾನ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು.

ಸುಮಾರು 75 ಸಾವಿರಕ್ಕೂ ಹೆಚ್ಚು ಪದವೀಧರ ಶಿಕ್ಷಕರು ಆರರಿಂದ ಎಂಟನೇ ತರಗತಿಯವರೆಗೆ ಬೋಧಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸೇವಾ ಜೇಷ್ಠತೆಯೊಂದಿಗೆ ಇವರನ್ನು ನೇಮಕಕ್ಕೆ ಪರಿಗಣಿಸಿ ಸೂಕ್ತ ಆರ್ಥಿಕ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿಕೊಂಡೇ ಬರಲಾಗಿದೆ.

ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರಿಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ| 2,500 ಪ್ರೌಢಶಾಲಾ ಶಿಕ್ಷಕರ ನೇಮಕ | ಸದ್ಯವೇ ಅಧಿಸೂಚನೆ; ಡಿಸೆಂಬರ್‌ನಲ್ಲಿ ಪರೀಕ್ಷೆ

Exit mobile version