ನಾವು ನಿತ್ಯ ಮಾಡುವ ಕೆಲಸಗಳಿಗೆ ಸಂಬಂಧಪಟ್ಟಂತೆ ನಮ್ಮ ಶಾಸ್ತ್ರಗಳಲ್ಲಿ (Astro Tips) ನಿಯಮಗಳಿವೆ. ತಲೆ ಸ್ನಾನ ಮಾಡಲು, ಕೂದಲು ಹಾಗೂ ಉಗುರು ಕತ್ತರಿಸಿಕೊಳ್ಳಲು ಸಹ ಶಾಸ್ತ್ರದಲ್ಲಿ ಹೀಗೇ ಮಾಡಬೇಕೆಂದು ಹೇಳಲಾಗಿದೆ. ಆ ನಿಯಮಗಳ ಪಾಲನೆಯಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದಲ್ಲದೆ, ಆರೋಗ್ಯ ಮತ್ತು ಆಯಸ್ಸು ವೃದ್ಧಿಸುತ್ತದೆ ಎಂದು ಶಾಸ್ತ್ರ ಸಾರಿದೆ. ಶಾಸ್ತ್ರ ಮತ್ತು ಸಂಪ್ರದಾಯಗಳಿಗೆ ಅದರದ್ದೇ ಮಹತ್ವ ಮತ್ತು ಕಾರಣಗಳಿರುತ್ತವೆ. ಅವುಗಳ ಪಾಲನೆಯಿಂದ ಜೀವನದಲ್ಲಿ ಶುಭವೇ ಆಗುತ್ತದೆ.
ಉಗುರು ಕತ್ತರಿಸುವುದು ತಾನೇ ಯಾವಾಗ ಬೇಕಾದರೂ ಕತ್ತರಿಸಿಕೊಳ್ಳಬಹುದು ಎಂದು ಹೇಳುವಂತಿಲ್ಲ. ಏಕೆಂದರೆ ಉಗುರು, ಕೂದಲನ್ನು ಕತ್ತರಿಸಿಕೊಳ್ಳುವುದಕ್ಕೆ ಶಾಸ್ತ್ರದಲ್ಲಿ ಬಹಳ ಮಹತ್ವ ನೀಡಲಾಗಿದ್ದು, ಯಾವಾಗ ಉಗುರು ಕತ್ತರಿಸಿಕೊಳ್ಳಬೇಕು. ಯಾವಾಗ ಕತ್ತರಿಸಿಕೊಂಡರೆ ಶುಭ,ಅಶುಭವಾಗುತ್ತದೆ ಎಂಬುದನ್ನು ತಿಳಿಸಲಾಗಿದೆ.
ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಸೂರ್ಯಾಸ್ತದ ಸಮಯದಲ್ಲಿ ಮತ್ತು ರಾತ್ರಿ ಹೊತ್ತು ಯಾವುದೇ ಕಾರಣಕ್ಕೂ ಉಗುರು ಕತ್ತರಿಸಿಕೊಳ್ಳಬಾರದು. ಜೊತೆಗೆ ಹುಟ್ಟಿದ ವಾರದಂದು ಸಹ ಉಗುರು ಮತ್ತು ಕೂದಲನ್ನು ಕತ್ತರಿಸಿಕೊಳ್ಳುವುದು ನಿಷಿದ್ಧವಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀ ವಾಸ ಮಾಡುವುದಿಲ್ಲ. ಈ ರೀತಿಯ ಅಭ್ಯಾಸದಿಂದ ದಾರಿದ್ರ್ಯವನ್ನು ಆಹ್ವಾನಿಸಿದಂತಾಗುತ್ತದೆ. ಹಾಗೆಯೇ ವಾರದ ಬೇರೆ ಬೇರೆ ದಿನಗಳಲ್ಲಿ ಉಗುರು ಕತ್ತರಿಸಿಕೊಳ್ಳುವುದರಿಂದ ಬೇರೆ ಬೇರೆ ಫಲ ಪ್ರಾಪ್ತಿಯಾಗುತ್ತದೆ. ಅವು ಯಾವುವು ಎಂಬುದನ್ನು ತಿಳಿಯೋಣ.
ಸೋಮವಾರ: ಶಿವನ ಆರಾಧನೆಗೆ ಪ್ರಶಸ್ತವಾದ ಸೋಮವಾರವು, ಚಂದ್ರ ಗ್ರಹ ಮತ್ತು ಮನಸ್ಸಿಗೆ ಸಂಬಂಧಿಸಿದ ವಾರವೂ ಸಹ ಆಗಿರುತ್ತದೆ. ಹಾಗಾಗಿ ಸೋಮವಾರ ಉಗುರು ಕತ್ತರಿಸಿಕೊಳ್ಳುವುದರಿಂದ ತಮೋಗುಣ ನಾಶವಾಗಿ, ಸಾತ್ವಿಕ ಗುಣ ಹೆಚ್ಚುತ್ತದೆ. ಹಾಗಾಗಿ ಸೋಮವಾರ ಉಗುರು ಕತ್ತರಿಸಿಕೊಳ್ಳಬಹುದಾಗಿದೆ.
ಮಂಗಳವಾರ: ಮಂಗಳವಾರದಂದು ದೇವಿಯನ್ನು ಪೂಜಿಸುವುದರ ಜೊತೆಗೆ ಆಂಜನೇಯನ ಆರಾಧನೆಯನ್ನು ಮಾಡಲಾಗುತ್ತದೆ. ಹಾಗಾಗಿ ಉಗುರು ಕತ್ತರಿಸಿಕೊಳ್ಳಲು ಮಂಗಳವಾರ ಸೂಕ್ತವಲ್ಲ.
ಬುಧವಾರ: ಉಗುರು ಕತ್ತರಿಸಿಕೊಳ್ಳಲು ಬುಧವಾರ ಸೂಕ್ತವಾದ ದಿನವಾಗಿದೆ. ಈ ದಿನ ಉಗುರು ಕತ್ತರಿಸಿಕೊಳ್ಳುವುದರಿಂದ ಧನ ಲಾಭವಾಗುತ್ತದೆ. ಜೊತೆಗೆ ವೃತ್ತಿಯಲ್ಲಿ ಶುಭವಾಗುತ್ತದೆ. ಬುಧವಾರ ಜನಿಸಿದವರು ಮಾತ್ರ ಆ ದಿನ ಉಗುರು ಕತ್ತರಿಸಿಕೊಳ್ಳುವಂತಿಲ್ಲ. ಮತ್ತೆಲ್ಲರಿಗೂ ಬುಧವಾರ ಶುಭವನ್ನು ಉಂಟುಮಾಡುತ್ತದೆ.
ಗುರುವಾರ: ಗುರು ಬೃಹಸ್ಪತಿ ಮತ್ತು ಗುರುರಾಯರ ಆರಾಧನೆಗೆ ಗುರುವಾರ ಪ್ರಶಸ್ತವಾಗಿದೆ. ಈ ದಿನ ಉಗುರು ಕತ್ತರಿಸಿಕೊಳ್ಳುವುದರಿಂದ ವ್ಯಕ್ತಿಯಲ್ಲಿ ಸತ್ವ ಗುಣ ಹೆಚ್ಚುತ್ತದೆ.
ಶುಕ್ರವಾರ: ಶುಕ್ರ ಗ್ರಹಕ್ಕೆ ಸಮರ್ಪಿತವಾದ ವಾರ ಶುಕ್ರವಾರ. ಸಂಬಂಧ, ಐಷಾರಾಮಿ ವಸ್ತುಗಳ ಕಾರಕನಾಗಿರುವ ಶುಕ್ರ ಗ್ರಹದ ವಾರದಂದು ಉಗುರು ಕತ್ತರಿಸಿಕೊಳ್ಳುವುದು ಶುಭವೆಂದೇ ಹೇಳಲಾಗುತ್ತದೆ. ಜೊತೆಗೆ ಈ ದಿನ ಉಗುರು ಕತ್ತರಿಸಿಕೊಳ್ಳುವುದರಿಂದ ಜೀವನದಲ್ಲಿ ಸಂಬಂಧಗಳು ಗಟ್ಟಿಯಾಗುತ್ತವೆ.
ಶನಿವಾರ: ಶನಿವಾರ ಉಗುರು ಕತ್ತರಿಸಿಕೊಳ್ಳಬಾರದು. ಇದರಿಂದ ಜಾತಕದಲ್ಲಿರುವ ಶನಿ ಸ್ಥಿತಿ ನೀಚವಾಗುತ್ತದೆ. ಜೊತೆಗೆ ಹಲವಾರು ರೀತಿಯ ಮಾನಸಿಕ ಮತ್ತು ಶಾರೀರಕ ತೊಂದರೆಗಳು ಉಂಟಾಗುತ್ತವೆ. ಧನಹಾನಿಯಾಗುವ ಸಂಭವ ಸಹ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಶನಿವಾರ ಉಗುರು ಕತ್ತರಿಸಿಕೊಳ್ಳಬಾರದು.
ಭಾನುವಾರ: ಭಾನುವಾರ ಉಗುರು ಕತ್ತರಿಸಿಕೊಳ್ಳಬಾರದೆಂದು ಶಾಸ್ತ್ರ ಹೇಳುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಭಾನುವಾರ ವಿರಾಮವಿರುತ್ತದೆ. ಹಾಗಾಗಿ ಉಗುರು ಮತ್ತು ಕೂದಲು ಕತ್ತರಿಸಿಕೊಳ್ಳಲು ಭಾನುವಾರವೇ ಸೂಕ್ತ ಎಂದು ತಿಳಿದಿರುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಈ ಕೆಲಸಕ್ಕೆ ಭಾನುವಾರ ಒಳ್ಳೆಯದಲ್ಲ ಇದರಿಂದ ಆತ್ಮವಿಶ್ವಾಸ ಕುಂಠಿತವಾಗುತ್ತದೆ ಮತ್ತು ಆಯಸ್ಸು ಕ್ಷೀಣಿಸುತ್ತದೆ.
ಇದನ್ನೂ ಓದಿ: Astrology Remedies : ನಿಮಗೆ ಸಿಟ್ಟು ಜಾಸ್ತಿಯೇ? ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯದ ಈ ಸಲಹೆಗಳನ್ನು ಪಾಲಿಸಿ