ಜ್ಯೋತಿಷ ಶಾಸ್ತ್ರದಲ್ಲಿ ಬುಧ ಗ್ರಹ ನಾಲ್ಕನೇಯದ್ದು. ಈ ಬುಧ (Budha in Astrology) ಲಗ್ನದಲ್ಲಿದ್ದರೆ ಪ್ರಬಲ. ಬುಧ ಗ್ರಹ ಅನೇಕ ಶುಭಫಲಗಳನ್ನು ಪ್ರಾಪ್ತಿಸುತ್ತದೆ. ವಿವಿಧ ಸ್ಥಾನಗಳಲ್ಲಿ ವಿವಿಧ ಫಲಗಳನ್ನು ನೀಡುತ್ತಾನೆ. ಕುಜನ ಭಾವಫಲದ ಬಗ್ಗೆ ಮಾಹಿತಿ ಇಲ್ಲಿದೆ:
ಬುಧನು ಲಗ್ನದಲ್ಲಿದ್ದರೆ ಬಲಿಷ್ಠನಾಗಿರುತ್ತಾನೆ. ಈ ಜಾತಕದವರು ದೀರ್ಘಾಯುವಾಗಿರುತ್ತಾರೆ. ಇವರಿಗೆ ಉತ್ತಮ ಮಾತುಗಾರಿಕೆ ಲಭಿಸಿರುತ್ತದೆ. ಇವರು ಮಧುರಭಾಷಿ ಆಗಿರುತ್ತಾರೆ. ಸಕಲಶಾಸ್ತ್ರಗಳ ಬಗ್ಗೆ ಜ್ಞಾನವನ್ನು ಹೊಂದಿರುತ್ತಾರೆ.
ದ್ವಿತೀಯದಲ್ಲಿ ಬುಧನಿದ್ದರೆ, ಅವರು ತಮ್ಮ ಬುದ್ಧಿ ಬಲದಿಂದ ಧನ ಸಂಪಾದನೆ ಮಾಡುವ ಸಾಮರ್ಥ್ಯದವರಾಗಿರುತ್ತಾರೆ. ಇವರು ನ್ಯಾಯಯುತ ವಚನ ನುಡಿಯುವರಾಗಿರುತ್ತಾರೆ. ಇವರ ಭಾಷೆ ಸೊಗಸಾಗಿದ್ದು, ಇವರು ಕವಿಯಾಗಿರುತ್ತಾರೆ. ಸಾಮಾನ್ಯವಾಗಿ ಇವರು ಮೃಷ್ಟಾನ್ನ ಭೋಜನ ಪ್ರಿಯರಾಗಿರುತ್ತಾರೆ.
ಬುಧನು ತೃತೀಯದಲ್ಲಿರುವ ಜಾತಕದವರು ಪರಾಕ್ರಮಿ ಹಾಗೂ ಪರಿಶ್ರಮಿಯಾಗಿರುತ್ತಾರೆ. ಆದರೆ ಇವರಿಗೆ ಧೀರ್ಘಾಯುಷ್ಯವಿರುವುದಿಲ್ಲ. ಉತ್ತಮ ಸಹೋದರರು ಇವರಿಗಿರುತ್ತಾರೆ. ಇವರು ಹೆಚ್ಚು ಪರಿಶ್ರಮಿಯಾದರೂ ದೀನ ಮತ್ತು ಧನವಂಚಿತರಾಗುತ್ತಾರೆ.
ಬುಧನು ಚತುರ್ಥದಲ್ಲಿದ್ದರೆ ಶುಭ ಫಲಗಳು ಪ್ರಾಪ್ತಿಯಾಗುತ್ತದೆ. ಈ ಜಾತಕದವರು ವಿದ್ವಾಂಸರು ಹಾಗೂ ಚತುರೋಕ್ತಿಯಾಗಿರುತ್ತಾರೆ. ಈ ಜಾತಕದವರು ಮಿತ್ರ, ಭೂಮಿ, ಧನ-ಧಾನ್ಯ ಸಂಪನ್ನರಾಗಿ ಸುಖಿಯಾಗಿರುತ್ತಾರೆ.
ಪಂಚಮ ಭಾವದಲ್ಲಿ ಬುಧನಿದ್ದರೆ ಅವರು ಪಂಡಿತರು ಹಾಗೂ ಪರಾಕ್ರಮಿ ಆಗಿರುತ್ತಾರೆ. ಅವರು ಮಂತ್ರ ವಿದ್ಯಾಪಾರಂಗತರಾಗಿರುತ್ತಾರೆ. ಸುಖಮಯ ಜೀವನ ಸಾಗಿಸುವಲ್ಲಿ ಇವರು ಯಶಸ್ವಿಯಾಗಿರುತ್ತಾರೆ.
ಬುಧನು ಷಷ್ಠಮ ಭಾವಗತನಾಗಿದ್ದರೆ ಅವರು ನೇರ ನುಡಿಗಳ ಸ್ವಭಾವದವರಾಗಿರುತ್ತಾರೆ. ಅತಿ ಬೇಗ ಕ್ರೋಧಕ್ಕೊಳಗಾಗುವ ಸ್ವಭಾವ ಇವರದ್ದಾಗಿರುತ್ತದೆ. ಇಲ್ಲಸಲ್ಲದ ವಾದ ವಿವಾದಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ. ಇವರು ತಮ್ಮ ಶತೃಗಳನ್ನು ಪರಾಭವಗೊಳಿಸುತ್ತಾರೆ. ಈ ಜಾತಕದವರು ಸಾಮಾನ್ಯವಾಗಿ ಆಲಸಿಯು ಮತ್ತು ನಿಷ್ಠುರವಾಗಿ ಮಾತನಾಡುವವರಾಗಿರುತ್ತಾರೆ.
ಸಪ್ತಮಭಾವದಲ್ಲಿ ಬುಧನಿದ್ದರೆ, ಉತ್ತಮ ವಸ್ತ್ರಗಳನ್ನು ಧರಿಸುವ ಯೋಗವಿರುತ್ತದೆ. ಈ ಜಾತಕದವರು ಮಹಿಮಾವಂತರು ಹಾಗೂ ಐಶ್ವರ್ಯವಂತರಾಗಿರುತ್ತಾರೆ.
ಅಷ್ಟಮದ ಬುಧನು ಚಿರಾಯುಷ್ಯ ಪ್ರಾಪ್ತಿಸುತ್ತಾನೆ. ಈ ಜಾತಕದವರು ಕುಲಬಾಂಧವರಿಗೆ ಅಶ್ರಯದಾತರಾಗಿರುತ್ತಾರೆ. ಅಲ್ಲದೆ, ದಂಡಾಧಿಪತಿಯಾಗಿ ಕಾರ್ಯನಿರ್ವಹಿಸುವ ಅವಕಾಶವಿರುತ್ತದೆ ಹಾಗೂ ಇವರು ವಿಖ್ಯಾತರಾಗಿರುತ್ತಾರೆ.
ನವಮ ಭಾವದಲ್ಲಿರುವ ಬುಧನು ಸುಖ ನೆಮ್ಮದಿಗಳನ್ನು ನೀಡುತ್ತಾನೆ. ಇವರು ಧನ ಮತ್ತು ವಿದ್ಯಾವಂತರಾಗಿರುತ್ತಾರೆ. ಧಾರ್ಮಿಕ ಪ್ರವೃತ್ತಿಯವನ್ನು ಹೊಂದಿರುವವರು ಹಾಗೂ ಆಚಾರವಂತರಾಗಿರುತ್ತಾರೆ. ಇವರು ವಾಕ್ಪಟತ್ವ ಮತ್ತು ವಾಚಾಳಿಯಾಗಿರುತ್ತಾರೆ.
ದಶಮದಲ್ಲಿ ಬುಧನಿದ್ದರೆ, ಕೈಕೊಂಡ ಕಾರ್ಯಗಳನ್ನು ಸಾಧಿಸುವ ಛಲವಿರುತ್ತದೆ. ಇವರು ವಿದ್ಯೆ, ಬುದ್ಧಿ, ಬಲ ಸಂಪನ್ನರಾಗಿರುತ್ತಾರೆ. ಸದಾ ಕಾಲ ಸುಖಮಯ ಜೀವನ ಸಾಗಿಸುತ್ತಾರೆ. ಸನ್ಮಾರ್ಗದಲ್ಲಿ ನಡೆಯುವ ಇವರು ಸತ್ಕರ್ಮನಿರತನಾಗಿರುತ್ತಾರೆ ಹಾಗೂ ಸತ್ಯವಂತರಾಗಿರುತ್ತಾರೆ.
ಏಕಾದಶದಲ್ಲಿ ಬುಧನಿದ್ದರೆ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ. ಈ ಜಾತಕದವರು ಸತ್ಯದ ಪರ ನಿಲ್ಲುವವರಾಗಿರುತ್ತಾರೆ. ಇವರು ಧನ ಸಂಪನ್ನರಾಗುತ್ತಾರೆ. ತಮ್ಮ ಕಾರ್ಯಗಳಿಗೆ ಸೇವಕರು ಇರಲಿದ್ದು, ಸದಾ ಸುಖಿಯಾಗಿರುತ್ತಾರೆ.
ದ್ವಾದಶದಲ್ಲಿ ಬುಧನಿದ್ದರೆ ಫಲಗಳು ಅಶುಭವಾಗಿರುತ್ತದೆ. ಇವರು ಸಾಮಾನ್ಯವಾಗಿ ದುಃಖಿಯಾಗಿರುತ್ತಾರೆ. ವಿದ್ಯಾಹೀನರಾಗಿ, ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಆಲಸ್ಯ ಮತ್ತು ಕ್ರೂರತ್ವ ಇವರ ಸ್ವಭಾವವಾಗಿರುತ್ತದೆ.
ಇದನ್ನೂ ಓದಿ: Kuja in Astrology: ಕುಜನು ಯಾವ ಸ್ಥಾನದಲ್ಲಿದ್ದರೆ ಪ್ರಬಲ? ಭಾವಫಲಗಳೇನು?