Site icon Vistara News

ದಶಾ ಕಾಲ ಎಂದರೇನು? ಲೆಕ್ಕಾಚಾರ ಹೇಗೆ?

ದಶಾ ಕಾಲ

ದಶಾ ಕಾಲ ಎಂದರೆ ಜ್ಯೋತಿಷ ಶಾಸ್ತ್ರದಲ್ಲಿ ಮುಂದೆ ಸಂಭವಿಸುವುದನ್ನು ತಿಳಿಯಲು ಉಪಯೋಗಿಸುವ ಒಂದು ಕಾಲದ ಮಾಪಕ. ಜ್ಯೋತಿಷದಲ್ಲಿ ವಿಂಶೋತ್ತರಿ ದಶಾ, ಸಮ ಸಪ್ತಕ ದಶಾ, ಅಷ್ಟೋತ್ತರಿ ದಶಾ, ಸ್ಥಿರ ದಶಾ, ದ್ವಾದಶೋತ್ತರ ದಶಾ… ಹೀಗೆ ಹಲವಾರು ದಶಾಕಾಲಗಳನ್ನು ಹೇಳಲಾಗಿದೆ.

ವ್ಯಕ್ತಿಯ ಜನ್ಮನಕ್ಷತ್ರದ ಅಧಿಪತಿಯ ಮೂಲಕ ಯಾರಿಗೆ ಯಾವ ದಶಾ ನಡೆಯುತ್ತಿದೆ ಎಂದು ನಿರ್ಧರಿಸಲಾಗುತ್ತದೆ. ಮೊದಲ ಮಹಾದಶವು ಆ ನಕ್ಷತ್ರದ ಅಧಿಪತಿ ಗ್ರಹವಾಗಿರುತ್ತದೆ. ನಂತರ, ಇತರ ದಶಾಗಳು ಮಹಾದಶಾಗಳ ಅನುಕ್ರಮವನ್ನು ಅನುಸರಿಸುತ್ತವೆ.

ಜನ್ಮ ನಕ್ಷತ್ರವು ಕೃತಿಕಾ, ಉತ್ತರ, ಉತ್ತರಾಷಾಢ ನಕ್ಷತ್ರವಾದಲ್ಲಿ ರವಿ ದಶಾ. ರೋಹಿಣಿ, ಹಸ್ತ, ಶ್ರಾವಣ ನಕ್ಷತ್ರವಾದರೆ ಚಂದ್ರ ದಶಾ. ಮೃಗಶಿರ, ಚಿತ್ತಾ, ಧನಿಷ್ಠ ನಕ್ಷತ್ರವಾದರೆ ಕುಜ ದಶಾ. ಆರಿದ್ರಾ, ಸ್ವಾತಿ ಹಾಗೂ ಶತಃಭಿಷ ನಕ್ಷತ್ರವಾದರೆ ರಾಹು ದಶಾ. ಪುನರ್ವಸು, ವಿಶಾಖ ಹಾಗೂ ಪೂರ್ವಭಾದ್ರ ನಕ್ಷತ್ರವಾಗಿದ್ದರೆ ಗುರು ದಶಾ. ಪುಷ್ಯ, ಅನುರಾಧಾ ಹಾಗೂ ಉತ್ತರಾಭಾದ್ರ ನಕ್ಷತ್ರವಾಗಿದ್ದರೆ ಶನಿ ದಶಾ. ಆಶ್ಲೇಷ, ಜ್ಯೇಷ್ಠ ಹಾಗೂ ರೇವತಿ ನಕ್ಷತ್ರವಾಗಿದ್ದರೆ ಬುಧ ದಶಾ. ಮಘ, ಮೂಲ ಹಾಗೂ ಅಶ್ವಿನಿ ನಕ್ಷತ್ರವಾಗಿದ್ದರೆ ಕೇತು ದಶಾ. ಪುಬ್ಬ, ಪೂರ್ವಾಷಾಢ ಹಾಗೂ ಭರಣಿ ನಕ್ಷತ್ರದಲ್ಲಿ ಜನಿಸಿದರೆ ಶುಕ್ರ ದಶಾ. ಹೀಗೆ ಜನ್ಮ ನಕ್ಷತ್ರಗಳಿಗೆ ಅನುಸಾರವಾಗಿ ದಶಾ ಫಲವಿರುತ್ತದೆ. ದಶಾವನ್ನು ಕನ್ನಡದಲ್ಲಿ ದೆಸೆ ಎಂದು ಸಾಮಾನ್ಯವಾಗಿ ಕರೆಯುತ್ತೇವೆ.

ಯಾವ ದೆಸೆ ಎಷ್ಟು ಸಮಯ?

ಮಹಾದಶಗಳು ನಮ್ಮೆಲ್ಲರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಜೀವನದಲ್ಲಿ ಯಶಸ್ಸು ಅಥವಾ ವೈಫಲ್ಯಗಳನ್ನು ಇದರ ಆಧಾರದ ಮೇಲೆಯೇ ತೀರ್ಮಾನಿಸಲಾಗುತ್ತದೆ. ದಶಾಫಲಗಳಲ್ಲಿ ರವಿ ದಶಾ 6 ವರ್ಷ, ಚಂದ್ರ ದಶಾ 10 ವರ್ಷ, ಕುಜ ದಶಾ 7 ವರ್ಷ, ರಾಹು ದಶಾ 18 ವರ್ಷ, ಗುರು ದಶಾ 16 ವರ್ಷ, ಶನಿ ದಶಾ 19 ವರ್ಷ, ಬುಧ ದಶಾ 17 ವರ್ಷ, ಕೇತು ದಶಾ 7 ವರ್ಷ, ಶುಕ್ರ ದಶಾ 20 ವರ್ಷ ಇರುತ್ತದೆ.

ದಶಾ ಕಾಲದ ಲೆಕ್ಕಾಚಾರ

ವಿಂಶೋತ್ತರಿ ದಶಾದ ಪ್ರಕಾರ ಈ ವರ್ಷಗಳ ಲೆಕ್ಕಾಚಾರ ಹಾಕಲಾಗಿರುತ್ತದೆ. ವಿಂಶೋತ್ತರಿ ಎಂದರೆ 120 ವರ್ಷ. ಜ್ಯೋತಿಷ ಶಾಸ್ತ್ರದ ಪ್ರಕಾರ ಮಾನವನ ಪೂರ್ಣ ಆಯಸ್ಸು 120 ವರ್ಷಗಳಾಗಿವೆ. ಹೀಗೆ 120 ವರ್ಷಗಳಲ್ಲಿ ಒಂದು ದಶಾಕಾಲ ಮುಗಿದು ಮತ್ತೊಂದು ದಶಾ ಆರಂಭವಾಗುವ ಕಾಲವನ್ನು ದಶಾ ಸಂಧಿ ಕಾಲ ಎಂದು ಕರೆಯುತ್ತಾರೆ. ದಶಾ ಸಂಧಿ ಕಾಲದಲ್ಲಿ ಕುಜ-ರಾಹು ದಶಾ ಸಂಧಿ ಅಂದರೆ ಕುಜ ದಶಾ ಕಾಲ ಮುಗಿದು ರಾಹು ದಶಾ ಕಾಲ ಹಿಡಿಯುವ ಸಮಯ, ಇದೇ ರೀತಿಯಾಗಿ ರಾಹು, ಬೃಹಸ್ಪತಿ ದಶಾ ಸಂಧಿ ಹಾಗೂ ಶುಕ್ರಾಧಿಪತ್ಯ ಸಂಧಿ ಕಾಲವನ್ನು ಜ್ಯೋತಿಷ ಶಾಸ್ತ್ರದಲ್ಲಿ ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಕುಜರಾಹು ಸಂಧಿಯು ಹೆಚ್ಚು ಕೆಟ್ಟ ಕಾಲ ಎಂದು ಹೇಳಲಾಗಿದೆ. ಕುಜ ಮತ್ತು ರಾಹು ಒಬ್ಬರಿಗೊಬ್ಬರು ಶತ್ರುಗಳಾಗಿದ್ದು, ಈ ಸಂಧಿ ಕಾಲದಲ್ಲಿ ಹೆಚ್ಚು ಅಶುಭ ಫಲಗಳನ್ನು ನೀಡುತ್ತಾರೆ ಎನ್ನುತ್ತದೆ ಜ್ಯೋತಿಷ ಶಾಸ್ತ್ರ.

ಮಹಾದಶಗಳನ್ನು ಅಂತರ ದಶಾ ಅಥವಾ ಉಪ ಅವಧಿಗಳೆಂದು ಕರೆಯಲ್ಪಡುವ ಒಂಬತ್ತು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಅಂತರದಶಗಳನ್ನು ಒಂಬತ್ತು ಅವಧಿಗಳ ಒಂಬತ್ತು ಭಾಗಗಳಾಗಿ ಪ್ರತ್ಯಂತರ್ ದಶಾ ಎಂದು ವಿಂಗಡಿಸಲಾಗಿದೆ . ಉದಾರಣೆಗೆ ರಾಹು ಮಹಾದಷದಲ್ಲಿ , ಕೇತು ಅಂತಾರಾದಶಾ, ಗುರು ಪ್ರತ್ಯಂತರ್ ದಶಾ ಬರಬಹುದು.

ಇದನ್ನೂ ಓದಿ |ಭವಿಷ್ಯ: ಈ ಐದು ರಾಶಿಯವರು ಕಷ್ಟದಲ್ಲಿ ಖಂಡಿತಾ ಸಹಾಯಕ್ಕೆ ಬರುತ್ತಾರೆ

ಒಂದು ದಶಾ ಕಾಲದಿಂದ ಮತ್ತೊಂದು ದಶಾ ಕಾಲಕ್ಕೆ ಬದಲಾದಾಗ ವ್ಯಕ್ತಿಯ ಜೀವನದಲ್ಲಿಯೂ ನಿಧಾನವಾಗಿ ಹಲವಾರು ಬದಲಾವಣೆಗಳಾಗುತ್ತವೆ. ಒಂದು ಪಕ್ಷ ಆಡಳಿತ ಹೋಗಿ ಮತ್ತೊಂದು ಪಕ್ಷದ ಆಡಳಿತ ಬಂದಾಗ ಕಾರ್ಯಾಂಗದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆಯೋ ಹಾಗೆಯೇ ವ್ಯಕ್ತಿಯ ಜೀವನದಲ್ಲಿಯೂ ಒಂದೊಂದಾಗಿ ಬದಲಾವಣೆಗಳನ್ನು ಗಮನಿಸಬಹುದು. ಹೀಗಾಗಿಯೇ ಜ್ಯೋತಿಷ ಶಾಸ್ತ್ರದಲ್ಲಿ ದಶಾ ಕಾಲಕ್ಕೆ, ಸಂಧಿ ಕಾಲಕ್ಕೆ ಬಹಳ ಮಹತ್ವ ನೀಡಲಾಗುತ್ತದೆ.

Exit mobile version