ನಮ್ಮಲ್ಲಿ ಧಾರ್ಮಿಕ ಆಚರಣೆಗಳ ಜತೆಜತೆಗೆ ಹಲವಾರು ನಂಬಿಕೆಗಳು ಸಹ ರೂಢಿಯಲ್ಲಿವೆ. ಅದರಲ್ಲೂ ಶಕುನ ಶಾಸ್ತ್ರವನ್ನು (Shakun Shastra) ಹೆಚ್ಚು ಜನರು ನಂಬುತ್ತಾರೆ ಮತ್ತು ಪಾಲಿಸುತ್ತಾರೆ. ಮೈ ಮೇಲೆ ಹಲ್ಲಿ ಬಿದ್ದರೆ, ಕಾಲು ಎಡವಿದರೆ, ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದರೆ ಹೀಗೆ ಈ ಬಗೆಯ ಅನೇಕ ಘಟನೆಗಳನ್ನು ಅಪಶಕುನವೆಂದು ಭಾವಿಸಲಾಗುತ್ತದೆ.
ಈ ಎಲ್ಲ ಘಟನೆಗಳು ಭವಿಷ್ಯದಲ್ಲಿ ನಡೆಯುವ ಕೆಟ್ಟದ್ದರ ಸೂಚನೆ ಕೊಡುವ ಸಂಕೇತವಾಗಿರುತ್ತವೆ ಎಂಬ ನಂಬಿಕೆಯೂ ಇದೆ. ಹಾಗಾದರೆ ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅಶುಭವೇ..? ಇನ್ನು ಬೆಕ್ಕಿಗೆ ಸಂಬಂಧಿಸಿದ ಈ ಶಕುನಕ್ಕೂ ಜ್ಯೋತಿಷ ಶಾಸ್ತ್ರಕ್ಕೂ ಇರುವ ನಂಟೇನು ಎಂಬುದನ್ನು ತಿಳಿಯೋಣ.
ಜ್ಯೋತಿಷ ಶಾಸ್ತ್ರದ ಪ್ರಕಾರ ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅಶುಭವಲ್ಲ. ಆದರೆ ಬೆಕ್ಕು ಬಲದಿಂದ ಎಡಗಡೆಗೆ ಹೋದರೆ ಮಾತ್ರ ಅಪಶಕುನವೆಂದು ಶಾಸ್ತ್ರ ಹೇಳುತ್ತದೆ. ಅಂಥ ಸಮಯದಲ್ಲಿ ಕೆಲ ಸಮಯ ಅಲ್ಲೇ ನಿಂತು, ನಂತರ ಮುಂದುವರಿಯಬೇಕೆಂದು ಹೇಳಲಾಗಿದೆ. ಇಲ್ಲವೇ ಬೇರೆಯವರು ರಸ್ತೆಯಲ್ಲಿ ಮುಂದೆ ಹೋದ ಮೇಲೆ ಹೋಗುವ ಪದ್ಧತಿ ಕೆಲವೆಡೆ ಇದೆ.
ಇದಕ್ಕೆ ಜ್ಯೋತಿಷ ಶಾಸ್ತ್ರದ ಪ್ರಕಾರ ಹೇಳಬೇಕೆಂದರೆ ರಾಹುಗ್ರಹವನ್ನು ಅಶುಭ ಗ್ರಹವೆಂದು ಪರಿಗಣಿಸಲಾಗಿದೆ. ರಾಹು ಗ್ರಹದ ಪ್ರಭಾವದಿಂದ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ರಾಹು ಗ್ರಹದ ವಾಹನವಾಗಿರುವ ಬೆಕ್ಕು ಒಳ್ಳೆಯ ಕೆಲಸಕ್ಕೆಂದು ಹೋಗುವಾಗ ಅಡ್ಡ ಬಂದರೆ ಅಶುಭವಾಗುತ್ತದೆ. ಇದರಿಂದ ಕೆಲಸ ಫಲಪ್ರದವಾಗುವುದಿಲ್ಲವೆಂಬ ನಂಬಿಕೆ ಇದೆ.
ಜೊತೆಗೆ ದುರ್ಘಟನೆಗಳು ಸಂಭವಿಸುವ ಸಾಧ್ಯತೆಯೂ ಇದೆ ಎಂದು ನಂಬುವುದರಿಂದ ಬೆಕ್ಕು ಅಡ್ಡ ಬಂದಾಗ ಸ್ವಲ್ಪ ಹೊತ್ತು ಅಲ್ಲೇ ನಿಂತು, ನಂತರ ಹೋಗುವ ರೂಢಿ ಇಂದಿಗೂ ಇದೆ. ಈ ನಂಬಿಕೆ ಏಕೆ ಚಾಲ್ತಿಯಲ್ಲಿದೆ ಎಂಬ ಬಗ್ಗೆಯೂ ಜ್ಯೋತಿಷ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆಕ್ಕುಗಳಿಗೆ ಆರನೇ ಇಂದ್ರಿಯ ಅತ್ಯಂತ ಚುರುಕಾಗಿರುತ್ತದೆ. ಹಾಗಾಗಿ ಅವುಗಳಿಗೆ ಮುಂದೆ ನಡೆಯುವ ಘಟನೆಗಳು ಬೇಗ ತಿಳಿಯುತ್ತವೆ. ಅವು ಭವಿಷದಲ್ಲಿ ಆಗುವ ಕೆಟ್ಟದ್ದರ ಸೂಚನೆ ನೀಡುತ್ತವೆ. ಹಾಗಾಗಿ ಸ್ವಲ್ಪ ಸಮಯ ನಿಂತು ನಂತರ ಮುಂದುವರಿಯುವ ಪದ್ಧತಿ ಬೆಳೆದುಬಂದಿದೆ.
ತಂತ್ರಶಾಸ್ತ್ರದಲ್ಲಿ ಬೆಕ್ಕಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಬೆಕ್ಕಿನಿಂದಲೂ ಭವಿಷ್ಯದ ವಿಚಾರಗಳನ್ನು ತಿಳಿಯಬಹುದೆಂದು ಹೇಳುತ್ತಾರೆ. ಬೆಕ್ಕು ಮನೆಗೆ ಬಂದು ಅತ್ತರೆ, ಯಾವುದೋ ಕೆಟ್ಟ ಘಟನೆ ನಡೆಯುವ ಸೂಚನೆಯಾಗಿರುತ್ತದೆ. ಪರಸ್ಪರ ಬೆಕ್ಕುಗಳು ಜಗಳವಾಡುತ್ತಿದ್ದರೆ ಧನಹಾನಿ ಮತ್ತು ಜಗಳವಾಗುವ ಸೂಚನೆ ಎಂಬ ನಂಬಿಕೆ ಇದೆ.
ಧನಾಗಮನದ ಬಗ್ಗೆಯೂ ಸೂಚನೆ ನೀಡುತ್ತದೆ ಬೆಕ್ಕು!
ದೀಪಾವಳಿಯ ದಿನ ಬೆಕ್ಕು ಮನೆಗೆ ಬಂದು ಸೇರಿದರೆ ಹಣ ಬಂದಂತೆ ಎಂಬ ನಂಬಿಕೆ ಇದೆ. ಇದರಿಂದ ಮನೆಗೆ ಲಕ್ಷ್ಮೀ ಬಂದಂತೆ ಮತ್ತು ಹಣಕ್ಕೆಮುಂದೆ ಯಾವುದೇ ಕೊರತೆಯಾಗುವುದಿಲ್ಲ, ಇದು ಶುಭ ಶಕುನವೆಂದು ಹಲವು ಕಡೆ ನಂಬುತ್ತಾರೆ. ಬೆಕ್ಕು ಮನೆಯಲ್ಲಿಯೇ ಮರಿಗೆ ಜನ್ಮ ನೀಡಿದರೂ ಶುಭವೆಂದೇ ಪರಿಗಣಿಸುತ್ತಾರೆ.
ರಾಹು ಗ್ರಹ ದೋಷದಿಂದ ರಕ್ಷಣೆ
ಈ ಹಿಂದೆ ಹೇಳಿದ ಹಾಗೆ ಜ್ಯೋತಿಷ ಶಾಸ್ತ್ರದಲ್ಲಿ ಬೆಕ್ಕನ್ನು ರಾಹು ಗ್ರಹದ ವಾಹನ ಎಂದು ಹೇಳುತ್ತಾರೆ. ರಾಹು ಗ್ರಹವನ್ನು ಅಶುಭ ಗ್ರಹವೆಂದು ಹೇಳುವುದರಿಂದ ವ್ಯಕ್ತಿಯ ಜಾತಕದಲ್ಲಿ ಈ ಗ್ರಹ ಶುಭವಾಗಿಲ್ಲದಿದ್ದರೆ ಅಥವಾ ನೀಚ ಸ್ಥಿತಿಯಲ್ಲಿದ್ದರೆ ಅಂಥವರಿಗೆ ರಾಹು ಗ್ರಹದ ಅಶುಭ ಪರಿಣಾಮಗಳು ಉಂಟಾಗುತ್ತವೆ. ಆ ಅಶುಭ ಪರಿಣಾಮಗಳಿಂದ ಪಾರಾಗಲು ಮನೆಯಲ್ಲಿ ಬೆಕ್ಕನ್ನು ಪಾಲನೆ ಮಾಡಬೇಕೆಂದು ಹೇಳಲಾಗಿದೆ.
ಗಮನಿಸಿ: ಇದು ನಂಬಿಕೆ ಮಾತ್ರ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಈಗಿನ ಆಧುನಿಕ ಕಾಲದಲ್ಲಿ, ಅಡ್ಡ ಬರುವ ಬೆಕ್ಕಿಗೆ ಯಾರೂ ಅಷ್ಟು ಮಹತ್ವ ನೀಡುವುದೂ ಇಲ್ಲ!
ಇದನ್ನೂ ಓದಿ | Prerane | ಮೊದಲು ಏಟು ತಿಂದವರೇ ಮುಂದೆ ಪೂಜಿಸಲ್ಪಡುತ್ತಾರೆ!