Site icon Vistara News

Vastu Tips : ಮನೆಯಲ್ಲಿ ಕುಡಿಯುವ ನೀರಿನ ಫಿಲ್ಟರನ್ನು ಈ ದಿಕ್ಕಿನಲ್ಲಿಟ್ಟರೆ ಬಹಳ ಒಳ್ಳೆಯದು!

drinking water Vastu

#image_title

ಮನೆಯಲ್ಲಿ ಸುಖ, ನೆಮ್ಮದಿ, ಸಮೃದ್ಧಿ ನೆಲೆಸಿರಬೇಕೆಂದರೆ ವಾಸ್ತು ಪ್ರಕಾರ (Vastu shastra) ಮನೆಯನ್ನು ನಿರ್ಮಿಸಿರಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯೊಳಗಿನ ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದಂತೆ ನಿಯಮಗಳಿವೆ. ಮನೆಯ ಮುಂಬಾಗಿಲಿನಿಂದ ಹಿಡಿದು, ಮನೆಯ ಕಸ ಗುಡಿಸುವ ಪೊರಕೆಯವರೆಗೆ ಯಾವುದನ್ನು ಎಲ್ಲಿಡಬೇಕು, ಹೇಗೆ ಬಳಸಬೇಕೆಂಬ ಕುರಿತು ಈ ನಿಯಮಗಳಲ್ಲಿ ಹೇಳಲಾಗಿದೆ. ಹೀಗೆಯೇ ಕುಡಿಯುವ ನೀರನ್ನು ಎಲ್ಲಿಡಬೇಕು ಎಂಬುದರ ಕುರಿತೂ ವಾಸ್ತು ಶಾಸ್ತ್ರದಲ್ಲಿ (Vastu Tips) ಹೇಳಲಾಗಿದೆ.

ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತೆ ನೀರನ್ನು ಇರಿಸುವುದು ಬಹಳ ಮುಖ್ಯ. ಅಡುಗೆಮನೆಯಲ್ಲಿ ಅದನ್ನು ಇರಿಸುವ ಸ್ಥಾನವು ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ದಿಕ್ಕಿನಲ್ಲಿ ನೀರನ್ನಿಟ್ಟರೆ ಅಥವಾ ನೀರಿನ ಫಿಲ್ಟರ್‌ ಅನ್ನು ಕೂರಿಸಿದರೆ, ಅದು ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರೆಲ್ಲರ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮಗಳನ್ನು ಬೀರುತ್ತದೆ. ವಾಸ್ತು ಪ್ರಕಾರ ಕುಡಿಯುವ ನೀರನ್ನು ಇರಿಸಲು ಕೆಲವು ಸಲಹೆಗಳು ಇಲ್ಲಿವೆ:

1. ಕುಡಿಯುವ ನೀರಿನ ಯಾವುದೇ ಮೂಲವನ್ನಾದರೂ ಅಂದರೆ ನಲ್ಲಿ (ಟ್ಯಾಪ್‌), ಫಿಲ್ಟರ್‌ಗಳು, ಪ್ಯೂರಿಫೈಯರ್‌ಗಳು ಇತ್ಯಾದಿಗಳನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು. ನೀರಿನ ಸಂಗ್ರಹವೂ ಈ ದಿಕ್ಕಿನಲ್ಲಿರಬೇಕು.

2. ಒಂದು ವೇಳೆ ನಿಮ್ಮ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇವುಗಳನ್ನು ಇರಿಸಲು ಸಾಧ್ಯವಾಗದೇ ಇದ್ದಲ್ಲಿ ಪೂರ್ವ ಮೂಲೆಯಲ್ಲಿ ಅಥವಾ ಉತ್ತರ ದಿಕ್ಕಿನಲ್ಲಿ ಇಡಬಹುದು. ಆದರೆ ಯಾವುದೇ ಕಾರಣಕ್ಕೂ ಬೆಂಕಿಯ ಮೂಲೆಯಲ್ಲಿ ಇಡಬಾರದು.

3. ನೀರಿನ ನಲ್ಲಿಗಳನ್ನು ಯಾವುದೇ ಕಾರಣಕ್ಕೂ ಎರಡು ಗೋಡೆಗಳು ಸೇರುವ ಮೂಲೆಯಲ್ಲಿ ಇರಿಸಬಾರದು.

4.ಅಡುಗೆಮನೆಯಲ್ಲಿ ಕುಡಿಯುವ ನೀರಿನ ಟ್ಯಾಪ್ ಸೋರುತ್ತಿರಬಾರದು. ಇದು ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದು ಕೇವಲ ಕುಡಿಯುವ ನೀರಿನ ಟ್ಯಾಪ್‌ಗೆ ಅನ್ವಯವಾಗುವುದಲ್ಲ, ಮನೆಯ ಯಾವುದೇ ಭಾಗದಲ್ಲಿ ನೀರು ಪೋಲಾಗುತ್ತಿರಬಾರದು. ನೀರಿನೊಂದಿಗೆ ಸಂಪತ್ತೂ ಪೋಲಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

5. ಬೆಂಕಿ ಮತ್ತು ನೀರು ಒಂದಕ್ಕೊಂದು ಹೊಂದಿಕೆಯಾಗದ ಕಾರಣ ಕುಡಿಯುವ ನೀರು ಇಡುವ ಸ್ಥಳ ಮತ್ತು ಅಡುಗೆ ಒಲೆ ಅಕ್ಕಪಕ್ಕ ಇರದಂತೆ ನೋಡಿಕೊಳ್ಳಿ.

ಮನೆ ಕಟ್ಟಲು ಸೈಟ್‌ ಯಾವ ರೀತಿ ಇರಬೇಕು? ಈ ವಿಡಿಯೋ ನೋಡಿ ತಿಳಿಯಿರಿ.

6. ನಿಮ್ಮ ಮನೆಯ ಯಾವುದೇ ಭಾಗದಲ್ಲಿ ನೀರಿನ ಬಾಟಲಿಯನ್ನು ಇಡಬಹುದು. ಆದರೆ ನೀವು ನೀರಿನ ಬಾಟಲಿಯನ್ನು ಇಡುವಾಗ ಆ ಕೋಣೆಯ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಬಹಳ ಒಳ್ಳೆಯದು.

7. ನೀವು ಯಾವುದೇ ಬಣ್ಣದ ನೀರಿನ ಬಾಟಲಿಯನ್ನಾದರೂ ಬಳಸಬಹುದು. ಆದರೆ ಬಾಟಲಿಯ ಬಣ್ಣ ಕೆಂಪು ಮಾತ್ರ ಆಗಿರಬಾರದು. ಏಕೆಂದರೆ ಕೆಂಪು ಬಣ್ಣ ಅಗ್ನಿಯನ್ನು ಪ್ರತಿನಿಧಿಸುವುದರಿಂದ ಕೆಂಪು ಬಣ್ಣದ ಬಾಟಲಿ ಬಳಸಬಾರದು ಎಂದು ವಾಸ್ತು ನಿಯಮ ಹೇಳುತ್ತದೆ.

8. ಪಾರದರ್ಶಕವಾಗಿರುವ ನೀರಿನ ಬಾಟಲಿಯನ್ನು, ಫಿಲ್ಟರ್‌ ಅನ್ನು ಬಳಸುವುದು ಒಳ್ಳೆಯದು. ಒಂದು ವೇಳೆ ಸಾಧ್ಯವಾಗದೇ ಇದ್ದಲ್ಲಿ ನೀಲಿ ಬಣ್ಣದ ಬಾಟಲಿಯನ್ನು ಬಳಸಬಹುದು. ನೀವು ತುಂಬಾ ಧಾರ್ಮಿಕ ವ್ಯಕ್ತಿಯಾಗಿದ್ದರೆ, ನೇರಳೆ ಬಣ್ಣದ ನೀರಿನ ಬಾಟಲಿಯನ್ನು ಬಳಸಬಹುದು.

ಜ್ಯೋತಿಷ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್‌ ಮಾಡಿ.

9. ಮಲಗುವ ಕೋಣೆಯಲ್ಲಿ ನೀರಿನ ಬಾಟಲಿಯನ್ನು ಇಟ್ಟು ಕೊಳ್ಳಲು ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ತೊಂದರೆ ಇಲ್ಲ. ಆದರೆ ನೀವು ಮಲಗುವಾಗ ತಲೆಯ ಹತ್ತಿರ ಬಾಟಲಿಯನ್ನು ಅಥವಾ ನೀರಿನ ತಂಬಿಗೆಯನ್ನು ( ನೀರಿನ ಜಗ್‌) ಇಟ್ಟುಕೊಳ್ಳಬಾರದು. ಈ ರೀತಿ ಇಟ್ಟುಕೊಂಡರೆ ನಿದ್ರೆಗೆ ಭಂಗ ಬರಬಹುದು.

10. ನೀರನ್ನು ಸಂಗ್ರಹಿಸಿಡಲು ಪ್ಲಾಸ್ಟಿಕ್‌ ಬಾಟಲಿಗಳಿಗಿಂತ, ಮಣ್ಣಿನ ಅಥವಾ ತಾಮ್ರದ ಪಾತ್ರೆಗಳು , ಬಾಟಲಿಗಳು, ಬಹಳ ಸೂಕ್ತ. ವಾಸ್ತು ಶಾಸ್ತ್ರ ಪ್ರಕಾರ, ಮನೆಯಲ್ಲಿ ನೀರು ತುಂಬಿದ ಮಡಕೆಯನ್ನು ಇಡುವುದರಿಂದ ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಮತ್ತು ನಿಮಗೆ ಎಂದಿಗೂ ಸಂಪತ್ತಿಗೆ ಕೊರತೆ ಇರುವುದಿಲ್ಲ.

ಇದನ್ನೂ ಓದಿ : Vastu Tips For Dining Hall: ಮನೆಯ ಡೈನಿಂಗ್‌ ಹಾಲ್‌ನಲ್ಲಿ ಈ ಆಕಾರದ ಟೇಬಲ್‌ ಇರಲೇಬಾರದು!

Exit mobile version