ವಾಸ್ತು ಎಂದರೆ ನಾವು ವಾಸಿಸುವ ಮನೆ ಎಂದರ್ಥ. ಈ ಮನೆಯು 9 ನವಗ್ರಹಗಳ ಅಧಿಪತ್ಯಕ್ಕೆ ಒಳಪಡುವುದರಿಂದ ಯಾವ ಯಾವ ದಿಕ್ಕುಗಳಲ್ಲಿ ಯಾವ ಯಾವ ಕೊಠಡಿಗಳು ಇರಬೇಕು ಯಾವ ಯಾವ ದಿಕ್ಕುಗಳಲ್ಲಿ ಯಾವ ಯಾವ ವಸ್ತುಗಳು ಇರಬೇಕೆಂಬುದನ್ನು ಇದಕ್ಕೆ ಸಂಬಂಧಿಸಿದ ವಾಸ್ತು ಶಾಸ್ತ್ರ (Vastu Tips) ತಿಳಿಸುತ್ತದೆ. ಹೀಗಾಗಿಯೇ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ.
ಮನೆಯು ವಾಸ್ತು ಪ್ರಕಾರ ಇದ್ದದ್ದೇ ಆದರೆ ಮನೆಯಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೂ ವಿಶೇಷ ಮಹತ್ವವನ್ನು ನೀಡಲಾಗಿದೆ. ಪ್ರತಿ ದಿಕ್ಕಿಗೂ ಒಂದೊಂದು ದೇವರ ಅಧಿಪತ್ಯವಿರುತ್ತದೆ. ಆಯಾ ದೇವರಿಗೆ ತಕ್ಕಂತೆ ದಿಕ್ಕುಗಳನ್ನು ಹೇಗೆ ಇಟ್ಟುಕೊಳ್ಳಬೇಕೆಂಬುದನ್ನು ತಿಳಿದಿರಬೇಕಾಗುತ್ತದೆ. ಅದರಂತೆಯೇ ವಸ್ತುಗಳನ್ನು ಇಡುವಾಗಲೂ ಸಹ ದಿಕ್ಕುಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.
ಆಯಾ ವಸ್ತುಗಳನ್ನು ಅದಕ್ಕೆ ಸೂಕ್ತವಾಗುವ ದಿಕ್ಕಿನಲ್ಲಿಟ್ಟರೆ ಮಾತ್ರ ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ವಾಸ್ತು ಪ್ರಕಾರ ಉತ್ತಮ ಫಲ ಸಿಗುವುದಲ್ಲದೆ, ಆರ್ಥಿಕವಾಗಿಯೂ ಲಾಭ ಉಂಟಾಗುತ್ತದೆ. ಜೊತೆಗೆ ವಾಸ್ತು ದೋಷ ನಿವಾರಣೆಯಾಗಿ, ಮನೆಯಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸಿರುತ್ತದೆ.
ಹಾಗಾದರೆ ಮನೆಯ ಉತ್ತರ ದಿಕ್ಕಿನಲ್ಲಿ ಯಾವ್ಯಾವ ವಸ್ತುಗಳನ್ನು ಇಡಬೇಕು. ಹಾಗೆ ಇಡುವುದರಿಂದ ಆಗುವ ಲಾಭವೇನು ಮತ್ತು ಉತ್ತರ ದಿಕ್ಕಿಗಿರುವ ಮಹತ್ವವೇನು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಉತ್ತರ ದಿಕ್ಕಿಗಿರುವ ಮಹತ್ವ
ವಾಸ್ತು ಶಾಸ್ತ್ರದಲ್ಲಿ ಉತ್ತರ ದಿಕ್ಕಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಉತ್ತರ ದಿಕ್ಕನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕಿನಲ್ಲಿರುವ ಹಿಮಾಲಯದಲ್ಲಿ ಶಿವ ಮತ್ತು ಸಂಪತ್ತಿಗೆ ಒಡೆಯನಾಗಿರುವ ಕುಬೇರ ದೇವರ ಆವಾಸ ಸ್ಥಾನವಿದೆ.
ಸಂಪತ್ತಿಗೆ ಒಡೆಯನಾಗಿರುವ ಕುಬೇರ ದೇವರ ಕೃಪೆಯಿಂದಲೇ ವ್ಯಕ್ತಿಯು ಹಣವಂತನಾಗಲು ಸಾಧ್ಯವಾಗುತ್ತದೆ. ಹಾಗಾಗಿ ವಾಸ್ತು ಪ್ರಕಾರ ಉತ್ತರ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕೇಂದು ಹೇಳಿದೆಯೋ ಅದನ್ನೇ ಇಡಬೇಕು. ಇಲ್ಲವಾದಲ್ಲಿ ಮನೆಯಲ್ಲಿ ಕುಬೇರ ದೇವರು ವಾಸ ಮಾಡುವುದಿಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಬೇಕೆಂದರೆ, ಉತ್ತರ ದಿಕ್ಕಿನ ಅಧಿಪತ್ಯವನ್ನು ಹೊಂದಿರುವ ಬುಧ ಗ್ರಹ ಮತ್ತು ಕುಬೇರ ದೇವರ ಕೃಪೆ ಪಡೆಯುವುದು ಮುಖ್ಯವಾಗುತ್ತದೆ.
ಉತ್ತರ ದಿಕ್ಕಿನ ಕಿಟಕಿ ತೆಗೆದಿರಲಿ
ಮನೆಯ ಉತ್ತರ ದಿಕ್ಕಿನಲ್ಲಿ ಸ್ನಾನದ ಮನೆಯಿದ್ದರೆ ಅಂಥ ಮನೆಯಲ್ಲಿ ವಾಸಿಸುವವರು ಪದೇ ಪದೇ ಆರ್ಥಿಕ ನಷ್ಟಕ್ಕೆ ಕಾರಣರಾಗಬೇಕಾಗುತ್ತದೆ. ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಕಿಟಕಿಗಳಿದ್ದರೆ ಅದನ್ನು ತೆರೆದಿಡುವುದು ಉತ್ತಮ. ಉತ್ತರ ದಿಕ್ಕು ತೆರೆದಿದ್ದರೆ ಕುಬೇರ ದೇವರ ಕೃಪೆ ಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೇ ಉತ್ತರ ದಿಕ್ಕಿನಲ್ಲಿ ಭಾರೀ ಗಾತ್ರದ ಪೀಠೋಪಕರಣಗಳನ್ನು ಇಡುವುದು ಕೂಡ ಸೂಕ್ತವಲ್ಲ. ಯಾವಾಗಲೂ ಉತ್ತರ ದಿಕ್ಕಿನಲ್ಲಿ ಹಗುರವಾದ ವಸ್ತುಗಳನ್ನು ಮಾತ್ರ ಇಡಬೇಕು. ಇದರಿಂದ ಕುಬೇರ ದೇವರ ಕೃಪೆ ಪ್ರಾಪ್ತವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಪಾರದ ಶಿವಲಿಂಗವನ್ನು ಉತ್ತರ ದಿಕ್ಕಿನಲ್ಲಿಡಿ!
ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿನ ಜಾಗ ಯಾವಾಗಲೂ ಖಾಲಿಯಾಗಿದ್ದರೆ ಉತ್ತಮ. ಜೊತೆಗೆ ಉತ್ತರ ದಿಕ್ಕು ಸದಾ ಸ್ವಚ್ಛವಾಗಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿನಲ್ಲಿ ಒಂದು ಪಾರದ ಶಿವಲಿಂಗವನ್ನು ಇಡಬೇಕು. ಇದರಿಂದ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಪಾರದ ಧಾತುವು ಕುಬೇರ ದೇವರಿಗೆ ಪ್ರಿಯವಾಗಿರುವ ಧಾತುವಾಗಿದೆ. ಅಷ್ಟೇ ಅಲ್ಲದೇ ಇದು ಬುಧ ಗ್ರಹಕ್ಕೂ ಸಂಬಂಧಿಸಿರುವ ಧಾತುವಾಗಿದೆ. ಈ ಪಾರದ ಶಿವಲಿಂಗವು ಆರೂವರೆ ಇಂಚಿಗಿಂತ ದೊಡ್ಡದಾಗಿರಬಾರದು. ಹಾಗಾಗಿ ಚಿಕ್ಕ ಪಾರದ ಶಿವಲಿಂಗವನ್ನು ಮನೆಯ ಉತ್ತರ ದಿಕ್ಕಿನಲ್ಲಿಟ್ಟರೆ ಮನೆಗೆ ಶುಭವಾಗುತ್ತದೆ.
ಇದನ್ನೂ ಓದಿ : Vastu Tips: ಉತ್ತಮ ಆರೋಗ್ಯಕ್ಕಾಗಿ ವಾಸ್ತು ಪ್ರಕಾರ ಹೀಗಿರಲಿ ಅಡುಗೆ ಮನೆ!