Site icon Vistara News

ರಾಹು ಗ್ರಹವನ್ನು ಒಲಿಸಿಕೊಳ್ಳುವುದು ಹೇಗೆ ಗೊತ್ತೇ?

ರಾಹು

ಜ್ಯೋತಿಷ ಶಾಸ್ತ್ರದಲ್ಲಿ ರಾಹುಗೆ ಎಲ್ಲಿಲ್ಲದ ಮಹತ್ವವಿದೆ. ನವ ಗ್ರಹಗಳಲ್ಲಿ ಎಂಟನೇ ಗ್ರಹವಾದ ರಾಹು ಯಾವ ಮನೆಯಲ್ಲಿದ್ದಾನೆ ಎಂಬುದು ಜಾತಕದಲ್ಲಿ ಬಹಳ ಮುಖ್ಯ. ರಾಹು ಗ್ರಹವು ಅತ್ಯಂತ ವಿನಾಶಕಾರಿ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ಗ್ರಹವು ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳೆರಡನ್ನೂ ನೀಡುತ್ತದೆ. 

ರಾಹು ಉತ್ತಮ ಸ್ಥಿತಿಯಲ್ಲಿ ಇದ್ದರೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವನು. ಅದೇ ದೋಷದಿಂದ ಕೂಡಿದ್ದರೆ  ಸಾಕಷ್ಟು ಕಷ್ಟ-ನಷ್ಟಗಳನ್ನುಂಟು ಮಾಡುವನು.  ಹೀಗಾಗಿಯೇ ರಾಹುವನ್ನು ಕಾಲ ರುದ್ರನೆಂದೂ ಬಣ್ಣಿಸಲಾಗುತ್ತದೆ. ನಾಲ್ಕು ಕೈಗಳು, ಖಡ್ಗ, ಚರ್ಮ, ಶೂಲ, ವರಮುದ್ರೆಗಳು ಕೈಗಳಲ್ಲಿ ವಿಕೃತವಾದ ಕರಾಳಮುಖ, ಕಪ್ಪು ಸಿಂಹಾಸನದಲ್ಲಿ ಏರಿರುವ ಕಪ್ಪು ಬಟ್ಟೆಯ ಭಯಂಕರ ಗ್ರಹ ರಾಹು. ಕಪ್ಪಾದ ಮೈಬಣ್ಣ, ದೀರ್ಘವಾದ ಕೂಲು ಶರೀರ. ವ್ರಣಾದಿಪೀಡೆ, ಪಾಷಡವಾದಿ, ಬಿಕ್ಕಳಿಕೆಯ ತೊದಲು ಮಾತು, ಸುಳ್ಳುಗಾರಿಕೆ, ಕಪಟ, ಕುಷ್ಠಾದಿರೋಗ, ಪರನಿಂದೆ, ಬುದ್ಧಿಹೀನತೆ, ಇವು ರಾಹುವಿನ ಲಕ್ಷಣ.

ದಕ್ಷನ ಮಗಳಾದ ಸಿಂಹಿಕೆಯ ಮಗ ರಾಹು. ರಾಕ್ಷಸ ಕುಲಕ್ಕೆ ಸೇರಿದವ. ಅಮೃತಪ್ರಾಶನ ಸಂದರ್ಭದಲ್ಲಿ ವಿಷ್ಣು ಇವನ ಶಿರಚ್ಛೇದವನ್ನು ಮಾಡಿದ. ಅಮೃತ ಕುಡಿಯಲು ವೇಷ ಮರೆಸಿಕೊಂಡಿದ್ದ ರಾಹುವಿನ ಬಗ್ಗೆ ವಿಷ್ಣುವಿಗೆ ದೂರು ನೀಡಿದವರು ಸೂರ್ಯ ಚಂದ್ರರು. ಆ ದ್ವೇಷದಿಂದ ಈತ ಗ್ರಹಣಕಾಲದಲ್ಲಿ ಸೂರ್ಯ ಚಂದ್ರರನ್ನು ನುಂಗುತ್ತಾನೆ ಎಂದು ಪುರಾಣ ಕತೆಗಳು ಹೇಳುತ್ತವೆ. ಚಂದ್ರ ಮತ್ತು ಸೂರ್ಯನನ್ನು ಹಿಡಿಯುವುದರಿಂದಲೇ ಈತ ಗ್ರಹವೆನಿಸಿದ್ದಾನೆ.

ರಾಕ್ಷಸನಾದ ರಾಹು ಲೋಕಕ್ಕೆ ಉಪಕಾರ ಮಾಡುವ ದೇವಗ್ರಹವಲ್ಲ. ಹಿಂಸಾಪ್ರಿಯ ಗ್ರಹ. ಸ್ವಭಾವತಃ ಕ್ರೂರಿ. ಬ್ರಹ್ಮದ್ವೇಷಿ. ಆದರೆ ದೇವ ಮತ್ತು ರಾಕ್ಷಸ ಗುಣವನ್ನು ಹೊಂದಿರುವುದರಿಂದ ದ್ವಿಮುಖ ವ್ಯಕ್ತಿತ್ವವನ್ನು ತೋರುವ ಗ್ರಹವಾಗಿ ಗುರುತಿಸಿಕೊಂಡಿದ್ದಾನೆ. ರಾಹುವನ್ನು ಕಪ್ಪುಬಣ್ಣದ ನೆರಳು, ಕತ್ತಲೆ ಎಂಬ ಭಾವದಿಂದಲೇ ಛಾಯಾಗ್ರಹ, ತಮಃ ಎಂದು ಕರೆಯಲಾಗುತ್ತದೆ.

ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ ರಾಹು-ಕೇತುಗಳು ರಾಶಿಚಕ್ರದ ಎರಡು ಬಿಂದುಗಳು. ರಾಶಿಚಕ್ರದ ಮಧ್ಯದಲ್ಲಿ ಗುರುತಿಸಬಹುದಾದ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಎರಡು  ಕಪ್ಪು ಬಿಂದುಗಳು. ಭೂಮಿಗೆ ಉತ್ತರ ಧ್ರುವ ದಕ್ಷಿಣ ದ್ರುವಗಳಿರುವಂತೆ. ಆದ್ದರಿಂದಲೇ ರಾಶಿ ಚಕ್ರ ದಲ್ಲಿ ರಾಹು, ಕೇತುಗಳ ಮಧ್ಯೆ ಸರಿಯಾಗಿ ಆರು ರಾಶಿಯ ಅಂತರವಿರುತ್ತದೆ. ಅಂದರೆ ಕೇತುವಿನಿಂದ ಏಳನೇ ರಾಶಿಯಲ್ಲಿ ರಾಹುವಿರುತ್ತಾನೆ. ಅವನಿಂದ ಏಳನೇ ಕೋಣೆಯಲ್ಲಿ ಕೇತುವಿರುತ್ತಾನೆ.

ಉದಾಹರಣೆಗೆ ರಾಹು ಮೇಷದಲ್ಲಿದ್ದರೆ ಕೇತು ತುಲಾದಲ್ಲಿರುತ್ತಾನೆ. ರಾಹು ವೃಷಭಕ್ಕೆ ಚಲಿಸಿದ ಕ್ಷಣದಲ್ಲಿಯೇ ಕೇತು ವೃಶ್ಚಿಕಕ್ಕೆ ವಾಲಿರುತ್ತಾನೆ. ಗಡಿಯಾರದ ಮುಳ್ಳಿನ ತುದಿ ಹನ್ನೆರಡರಲ್ಲಿದ್ದಾಗ ಅದರ ಹಿಂತುದಿ ಅಲ್ಲಿರಲೇಬೇಕು. ಮುಂಬದಿ ಒಂದಕ್ಕೆ ಸಾಗಿದ ಕ್ಷಣದಲ್ಲಿಯೇ ಹಿಂತುದಿ ಏಳಕ್ಕೆ ವಾಲುತ್ತದೆ. ಹಾಗೆಯೇ ರಾಹುಕೇತುಗಳು ರಾಶಿಚಕ್ರದ ಹನ್ನೆರಡು ಬಿಂದುಗಳನ್ನು ಮಧ್ಯದಿಂದ ಭಾಗಿಸುವ ಮುಳ್ಳಿನ ಇಕ್ಕೆಲದ ಎರಡು ಬಿಂದುಗಳು. ರಾಶಿಚಕ್ರದಲ್ಲಿ ತಿರುಗುತ್ತಾ ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ, ಸೂರ್ಯರು ರಾಹು, ಕೇತುಗಳಿರುವ ಸ್ಥಾನಕ್ಕೆ ಬಂದರೆ ಗ್ರಹಣವಾಗಿದೆಯೆಂದು ತಿಳಿಯಬೇಕು.

ಯಾವ ಮನೆಯಲ್ಲಿ ಏನು ಫಲ?

ರಾಹುವಿನ ಉಚ್ಚ ಸ್ಥಾನ ಮಿಥುನ. ಸ್ವಕ್ಷೇತ್ರ ಕನ್ಯಾ. ನೀಚ ಸ್ಥಾನ ಧನು. ಚಂದ್ರ ಮತ್ತು ಮಂಗಳ ರಾಹುವಿನ ವೈರಿಗಳು. ಬುಧ, ಶುಕ್ರ ಮತ್ತು ಶನಿಗಳು ಮಿತ್ರರು. ಕುಂಡಲಿಯ 3, 6 ಮತ್ತು 12ನೇಯ ಸ್ಥಾನದಲ್ಲಿ ರಾಹು ಇದ್ದರೆ ಇಂಥವರ ಜಾತಕದವರಿಗೆ ಒಳ್ಳೆಯ ಫಲ ನೀಡಲು ಪೂರಕನಾಗಿರುತ್ತಾನೆ. ಅನಿಷ್ಟವನ್ನು ನಿವಾರಿಸಲು ಶಕ್ತನಾಗುತ್ತಾನೆ. ಕುಂಡಲಿಯಲ್ಲಿ 1, 2, 4, 5, 7, 8, 9 ಮತ್ತು 10ನೇಯ ಸ್ಥಾನಗಳಲ್ಲಿ ರಾಹು ಇದ್ದರೆ ಶುಭ ಫಲ ಕೊಡುವುದಿಲ್ಲ.

ರಾಹು ಕುಂಡಲಿಯ ಅನಿಷ್ಟ ಸ್ಥಾನದಲ್ಲಿದ್ದರೆ ಈ ಸಮಯದಲ್ಲಿ ಅನಿಷ್ಟ ಫಲವನ್ನು ಕೊಡುತ್ತದೆ. ರಾಹು ಮೇಷ, ವೃಷಭ, ಕರ್ಕಾಟಕ, ಸಿಂಹ, ತುಲಾ, ವಶ್ಚಿಕ, ಧನು ಮತ್ತು ಮಕರ ರಾಶಿಗಳಲ್ಲಿ ಕೇಂದ್ರದ ಅಧಿಪತಿಯಿಂದಾಗಲೀ ಅಥವಾ ತ್ರಿಕೋಣಾಧಿಪತಿಯಿಂದ ಕೂಡಿದ್ದರೆ ಜಾತಕದವರಿಗೆ ಧನಲಾಭವಿರುತ್ತದೆ. ಸ್ತ್ರೀಯರು ಮೇಷ ಲಗ್ನದಲ್ಲಿ ಜನಿಸಿದರೆ ಲಗ್ನದಲ್ಲಿ ರಾಹು, ಶುಕ್ರನಿದ್ದರೆ ಇವರು ಒಂದಕ್ಕಿಂತಲೂ ಜಾಸ್ತಿ ಮದುವೆಯಾಗುತ್ತಾರೆ.

ತೃತೀಯದಲ್ಲಿ ರಾಹುವು ಮಂಗಳನಿಂದ ಯುಕ್ತನಾಗಿದ್ದರೆ ಇವರ ತಾಯಿಯ ಬಲ ಕಾಲಿಗೆ ತೊಂದರೆ ಬರುತ್ತದೆ. ಲಗ್ನದಲ್ಲಿ ಶನಿ ಏಕಾದಶ ಸ್ಥಾನದಲ್ಲಿ ರಾಹು ಇದ್ದರೆ ಇಂತಹ ಜಾತಕದವರು ಜೀವನ ಪೂರ್ತಿ ಸಂಪತ್ತಿನಿಂದ ಕೂಡಿದವರಾಗುತ್ತಾರೆ. ಲಗ್ನದಲ್ಲಿ ರಾಹು ದ್ವಿತೀಯದಲ್ಲಿ ಶನಿ ಇದ್ದರೆ ಆ ಜಾತಕ ಹೊಂದಿದವರು ತನ್ನ ಆಯುಷ್ಯವನ್ನೆಲ್ಲಾ ಬಡಿದಾಟದಲ್ಲಿಯೇ ಕಳೆಯುತ್ತಾರೆ. ಲಗ್ನದಲ್ಲಿ ರಾಹು, ಮಂಗಳ ಇಲ್ಲವೇ ಗುರುನಿಂದ ಯುಕ್ತರಾಗಿದ್ದರೆ ಇಂಥವರು  ಸರ್ಕಾರದಿಂದ ಶಿಕ್ಷೆಗೊಳಗಾಗುತ್ತಾರೆ. ನವಮದಲ್ಲಿ ಚಂದ್ರನೊಡನೆ ರಾಹು ಯುಕ್ತನಾಗಿದ್ದರೆ ಇವರಿಗೆ ಶುಭ ಫಲ ದೊರೆಯುತ್ತದೆ. ಏಕಾದಶದಲ್ಲಿ ರಾಹು ಯಾವಾಗಲೂ ಒಳ್ಳೆಯ ಫಲ ನೀಡುತ್ತಾನೆ.

ಏನೇನು ಪರಿಣಾಮ?

ರಾಹು ದೆಸೆ ನಡೆಯುವಾಗ ಸಾಕಷ್ಟು ಕಷ್ಟಗಳನ್ನು ವ್ಯಕ್ತಿ ಅನುಭವಿಸಬೇಕಾಗಿ ಬರುತ್ತದೆ. ರಾಹು ವ್ಯಕ್ತಿಯಲ್ಲಿ ದುರಾಸೆ, ಮೋಸದ ಬುದ್ಧಿ, ಮೋಹ ಹುಟ್ಟುವಂತೆ ಮಾಡುತ್ತಾನೆ. ಐಶಾರಾಮಿ ವಸ್ತುಗಳನ್ನು ಪಡೆದುಕೊಳ್ಳಲು ವ್ಯಕ್ತಿ ಕೆಟ್ಟ ಹಾದಿ ಹಿಡಿಯಲು ಪ್ರೇರಣೆ ನೀಡುತ್ತಾನೆ.

ರಾಹು ದೆಸೆಯಿಂದ ಋಣಾತ್ಮಕ ಪರಿಣಾಮಗಳಿಗೆ ಒಳಗಾಗುವ ವ್ಯಕ್ತಿಯು ತನ್ನ ಪ್ರೀತಿಯ ಜೀವನ ಕಳೆದುಕೊಳ್ಳುತ್ತಾನೆ. ಆತನಿಗೆ ಯಾವುದರಿಂದಲೂ ನೆಮ್ಮದಿ ದೊರೆಯುವುದಿಲ್ಲ. ಶಾಂತಿ ಎನ್ನುವುದು ಇರುವುದೇ ಇಲ್ಲ. ಒಡಹುಟ್ಟಿದವರೊಂದಿಗೆ ಜಗಳ, ಅಧಿಕಾರಕ್ಕಾಗಿ ಕೆಟ್ಟಕೆಲಸ ಮಾಡುವುದು,ಇತರ ವ್ಯಕ್ತಿಗಳ ವಿರದ್ಧು ಪಿತೂರಿ ಹೂಡುವುದು, ಇತರರಿಂದ ಲಾಭ ಪಡೆದುಕೊಳ್ಳುವುದು ಹೀಗೆ ಕೆಟ್ಟ ದಾರಿಯಲ್ಲಿಯೇ ಸಾಗುತ್ತಿರುತ್ತಾರೆ.

ಪರಿಹಾರ ಹೇಗೆ?

ರಾಹು ನೀಡುವ ಕಿರುಕುಳ, ಆತನ ದೋಷದಿಂದ ಮುಕ್ತಿ ಪಡೆಯಲು ಹಲವಾರು ದಾರಿಗಳಿವೆ. ಆದರೆ ಎಲ್ಲದಕ್ಕಿಂತ ಸರಳ ಪರಿಹಾರವೆಂದರೆ ಈ ಗ್ರಹವನ್ನುಸ್ತುತಿಸುವ ಸ್ತ್ರೋತ್ರವನ್ನು ಪಠಿಸುವುದು. ರಾಹುವನ್ನು ಸ್ತುತಿಸುವ ಈ ಮುಂದಿನ ಶ್ಲೋಕವನ್ನುದಿನಕ್ಕೆ ಹತ್ತು ಬಾರಿಯೋ, ನೂರು ಬಾರಿಯೋ ಪಠಿಸುವ ಮೂಲಕ ಗ್ರಹದೋಷದಿಂದ ಮುಕ್ತಿಪಡೆಯಬಹುದು ಎನ್ನುತ್ತದೆ ಜ್ಯೋತಿಷ ಶಾಸ್ತ್ರ.

ಯೋ ವಿಷ್ಣುನೈವಾಮೃತಂ ಪೀಯಾಮಾನಂ
ಶಿರಚ್ಛಿತ್ವಾಗ್ರಹಭಾವೇನಯುಕ್ತಃ |
ಯಶ್ಚಂದ್ರಸೂರ್ಯೌ ಗ್ರಸತೇ ಪರ್ವಕಾಲೇ
ರಾಹುಂ ಸದಾ ಶರಣಮಹಂ ಪ್ರಪದ್ಯೇ ||

ಇದರ ಅರ್ಥವೇನೆಂದರೆ ಅಮೃತವನ್ನು ಕುಡಿಯುತ್ತಿರುವ ತಲೆಯನ್ನು ವಿಷ್ಣು ಕತ್ತರಿಸಿದ. (ದೇವತಾ ಸಾನಿಧ್ಯದಿಂದ) ಅದೇ ತಲೆ ಮುಂದೆ ಗ್ರಹವೆನಿಸಿತು. (ದೈತ್ಯಪ್ರವೃತ್ತಿಯಿಂದ) ಈ ರಾಹು ಹುಣ್ಣಿಮೆ ಅಮವಾಸ್ಯೆಗಳಂದು ಚಂದ್ರ ಸೂರ್ಯರನ್ನು ನುಂಗುತ್ತಾನೆ. ಇಂತಹಾ ರಾಹುವನ್ನು ಸರ್ವದಾ ಮೊರೆಹೋಗುತ್ತಾನೆ.

ಇದನ್ನೂ ಓದಿ| ದಶಾ ಕಾಲ ಎಂದರೇನು? ಲೆಕ್ಕಾಚಾರ ಹೇಗೆ?

ಇದಲ್ಲದೆ ವೇದ ವ್ಯಾಸರು ರಚಿಸಿದ ರಾಹು ಶಾಂತಿ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ 108 ಬಾರಿ ಭಕ್ತಿಯಿಂದ ಧ್ಯಾನಿಸಿದರೆ ಅಥವಾ ಆಲಿಸಿದರೆ ಶುಭವಾಗುತ್ತದೆ ಎಂದು ಹೇಳಲಾಗಿದೆ. ಈ ಮಂತ್ರ ಹೀಗಿದೆ;

ಓಂ ಅರ್ಧಕಾಯಂ ಮಹಾವೀರ್ಯಮ್‌ |
ಚಂದ್ರಾದಿತ್ಯ ವಿಮರ್ದನಂ |
ಸಿಂಹಿಕಾಗರ್ಭಸಂಭೂತಂ |
ತಮ್‌ ರಾಹುಮ್‌ ಪ್ರಣಮಾಮ್ಯಹಮ್‌ ||

ಇದರ ಅರ್ಥ, ಅರ್ಧ ದೇಹವನ್ನು ಹೊಂದಿದ್ದರೂ ವೀರನಾದ, ಸೂರ್ಯ ಚಂದ್ರರನ್ನು ಗ್ರಹಣದ ಮೂಲಕ ಪೀಡಿಸುವ ಸಿಂಹಿಕೆಯ ಮಗನಾದ ರಾಹುವಿಗೆ ನಮಸ್ಕರಿಸುತ್ತೇನೆ ಎಂದು. ಸರಳವಾಗಿರುವ ಈ ಮಂತ್ರಗಳನ್ನು ಪಠಿಸುವುದಲ್ಲದೇ ಶಾಂತಿ, ದಾನ ಇತ್ಯಾದಿಗಳ ಮೂಲಕವೂ ರಾಹು ಕಾಟದಿಂದ ಮುಕ್ತರಾಗಬಹುದು.

Exit mobile version