Site icon Vistara News

Saturn In Astrology | ಜಾತಕದಲ್ಲಿ ಶನಿ ಲಗ್ನದಲ್ಲಿದ್ದರೆ ರಾಜನಂತೆ ಮೆರೆಯಬಹುದು! ಉಳಿದ ಮನೆಗಳಲ್ಲಿದ್ದರೆ ಏನು ಫಲ?

ಪ್ರಮೋದ್‌ ಹೆಗಡೆ
ಜ್ಯೋತಿಷ ಶಾಸ್ತ್ರದಲ್ಲಿ ಶನಿ ಆರನೇ ಸ್ಥಾನದಲ್ಲಿರುವ ಗ್ರಹ. ಶನಿ ಗ್ರಹ ಎಂದಕೂಡಲೇ ಅಶುಭ ಫಲಗಳನ್ನೇ ಆತ ನೀಡುತ್ತಾನೆ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ ಶನಿ ಗ್ರಹ ಅನೇಕ ಶುಭಫಲಗಳನ್ನು (Saturn In Astrology) ನೀಡುತ್ತಾನೆ. ವಿವಿಧ ಸ್ಥಾನಗಳಲ್ಲಿ ಇದ್ದಾಗ ವಿವಿಧ ಫಲಗಳನ್ನು ಕರ್ಮಾನುಸಾರ ಆತ ನೀಡುತ್ತಾನೆ. ಶನಿ ಗ್ರಹ ಯಾವ ಮನೆಯಲ್ಲಿದ್ದರೆ ಯಾವೆಲ್ಲಾ ಫಲ ನೀಡುತ್ತಾನೆ ಎಂಬ ಮಾಹಿತಿ ಇಲ್ಲಿದೆ;

ಭಾವಾಶ್ರಿತ ರಾಶಿಫಲ

ಶನಿಯು ಉಚ್ಚ(ತುಲಾ) ಅಥವಾ ಸ್ವರಾಶಿ (ಮಕರ, ಕುಂಭ) ಗತ ಲಗ್ನದಲ್ಲಿದ್ದರೆ ಈ ಜಾತಕದವರು ರಾಜನಂತೆ ಐಶ್ವರ್ಯ ಹೊಂದಿರುತ್ತಾರೆ. ದೇಶ ಅಥವಾ ಗ್ರಾಮಾಧಿಪತ್ಯವನ್ನು ಪಡೆದಿರುತ್ತಾರೆ. ಅನ್ಯ ಲಗ್ನಗಳಲ್ಲಿ ಶನಿ ಇದ್ದರೆ ಅಶುಭಫಲಗಳನ್ನು ಹೊಂದುತ್ತಾರೆ. ಬಾಲ್ಯದಿಂದಲೇ ದಾರಿದ್ರ್ಯ ಅನುಭವಿಸಿ, ದುಃಖಪೀಡಿತಿರಾಗುತ್ತಾರೆ. ಅಲ್ಲದೆ, ಆಲಸಿಯಾಗಿರುತ್ತಾರೆ.

ದ್ವಿತಿಯದಲ್ಲಿ ಶನಿಯು ಅನ್ಯಾಯ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾನೆ. ಈ ಜಾತಕದವರು ಸಾಮಾನ್ಯವಾಗಿ ಕುರೂಪಿಯು, ನಿರ್ಧನರಾಗಿರುತ್ತಾರೆ.

ಶನಿಯು ತೃತಿಯ ಭಾವದಲ್ಲಿದ್ದರೆ ಮಿಶ್ರಿತ ಫಲಗಳು ಪ್ರಾಪ್ತಿಯಾಗುತ್ತದೆ. ಈ ಜಾತಕದವರು ಅತ್ಯಂತ ಮೇಧಾವಿ ಹಾಗೂ ಔದಾರ್ಯವಂತರಾಗಿರುತ್ತಾರೆ. ಆದರೆ, ಆಲಸಿ ಮತ್ತು ದುಃಖ ಇವರಿಗೆ ಬೆನ್ನುಬಿಡಲಾರದು.

ಚತುರ್ಥ ಭಾವಗತ ಶನಿಯು ಬಹುತೇಕ ದುಃಖವನ್ನು ನೀಡುತ್ತಾನೆ. ಬಾಲ್ಯಾವಸ್ಥೆಯಿಂದ ರೋಗಪೀಡಿತರಾಗಿದ್ದು, ಗೃಹವಾಹನಾದಿ ರಹಿತರಾಗುತ್ತಾರೆ. ಮಾತೃಪ್ರೀತಿಯಿಂದ ವಂಚಿತರಾಗಿ ಬದುಕುವ ಜೀವನ ಇವರದ್ದಾಗುತ್ತದೆ.

ಶನಿಯು ಪಂಚಮ ಭಾವದವನಾದರೆ, ಸಂಚಾರದ ಜೀವನ ಇವರದ್ದಾಗಿರುತ್ತದೆ. ಭ್ರಮಿತ ಬುದ್ಧಿಯವರಾಗಿದ್ದು, ಸಂತಾನ ಮತ್ತು ಧನವನ್ನು ಕಳೆದುಕೊಳ್ಳುವ ಸನ್ನಿವೇಶ ಎದುರಾಗಿತ್ತದೆ. ಅಲ್ಲದೆ, ಸುಖ ಹೀನನಾಗಿ ಬದುಕುವಂಥಾಗುತ್ತದೆ. ಈ ಜಾತಕದವರು ದುಷ್ಟರು ಹಾಗೂ ದುರ್ಬುದ್ಧಿ ಉಳ್ಳುವವರಾಗಿರುತ್ತಾರೆ.

ಶನಿಯು ಷಷ್ಟಮದಲ್ಲಿದ್ದರೆ, ಆಹಾರದ ಬಗ್ಗೆ ಪ್ರೀತಿ ಮತ್ತು ಆಸಕ್ತಿ ಹೆಚ್ಚಿಸುತ್ತಾನೆ. ಈ ಜಾತಕದವರಿಗೆ ರುಚಿರುಚಿಯ ಆಹಾರವನ್ನು ಸೇವಿಸುವ ಅಭಿರುಚಿ ಹೊಂದಿರುವವರಾಗಿರುತ್ತಾರೆ. ಇವರಿಗೆ ಧನದ ಕೊರತೆ ಇರುವುದಿಲ್ಲ. ಅಲ್ಲದೆ, ಇವರು ಶತೃಗಳನ್ನು ನಾಶಮಾಡುವ ಸಾಮರ್ಥ್ಯವಿದ್ದು, ಹಠವಾದಿ ಹಾಗೂ ಸ್ವಾಭಿಮಾನಿಯಾಗಿರುತ್ತಾರೆ.

ಸಪ್ತಮಭಾವಗತ ಶನಿಯ ಜಾತಕದವರು ಕುರೂಪಿಯಾದ ಪತ್ನಿ ಉಳ್ಳವವರಾಗಿರುತ್ತಾರೆ. ಇವರು ಸಂಪತ್ತಿನ ಸುಖದಿಂದ ವಂಚಿತರಾಗಿದ್ದು, ಸಂಚಾರದ ಮನೋಭಾವದವರಾಗಿರುತ್ತಾರೆ.

ಶನಿಯು ಅಷ್ಟಮದಲ್ಲಿದ್ದರೆ ಜಾತಕದ ಫಲ ಅಶುಭಕರವಾಗಿರುತ್ತದೆ. ಈ ಜಾತಕದವರು ಸಹಜವಾಗಿ ಮಲೀನರು, ಮೂಲವ್ಯಾಧಿ ಪೀಡಿತರಾಗಿರುತ್ತಾರೆ. ಈ ಜಾತಕದವರು ಕ್ರೂರಬುದ್ಧಿಯನ್ನು ಹೊಂದಿದ್ದು ಸ್ವಜನರಿಂದ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಅಲ್ಲದೆ, ಇವರು ಹಸಿವೆಯಿಂದ ಪೀಡಿತರಾಗಿ ಸಂಕಷ್ಟವನ್ನು ಎದುರಿಸುತ್ತಾರೆ.

ನವಮದಲ್ಲಿ ಶನಿಯು ಫಲಗಳು ಅಶುಭವಾಗಿರುತ್ತದೆ. ಇವರು ಧನ ಹಾಗೂ ಸಂತಾನಹೀನರಾಗಿರುತ್ತಾರೆ. ಇವರು ತಂದೆಯನ್ನು ಕಳೆದುಕೊಂಡು, ಧರ್ಮಭ್ರಷ್ಟರು ಮತ್ತು ದುಷ್ಟ ಬುದ್ಧಿಯುಳ್ಳುವವರಾಗಿರುತ್ತಾರೆ.

ಶನಿಯು ದಶಮ ಭಾವದಲ್ಲಿದ್ದರೆ ರಾಜ ಅಥವಾ ಮಂತ್ರಿಯ ಸ್ಥಾನಕ್ಕೇರುವ ಅವಕಾವಿರುತ್ತದೆ. ಕೃಷಿಕನು ಹಾಗೂ ಶೌರ್ಯವಂತರಾಗಿದ್ದು ಇವರು ಧನಸಂಪನ್ನರಾಗಿ ಜೀವನ ಸಾಗಿಸುತ್ತಾರೆ. ಪ್ರಸಿದ್ಧರಾಗಿ ಜನಪ್ರಿಯತೆಯನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ.

ಏಕಾದಶ ಭಾವದಲ್ಲಿ ಶನಿಯು ಇದ್ದರೆ, ದೀರ್ಘ ಆಯಸ್ಸು ಪ್ರಾಪ್ತಿಯಾಗುತ್ತದೆ. ಸಂಪತ್ತು ಸ್ಥಿರವಾಗಿರುತ್ತದೆ. ಉತ್ತಮ ಸಂಪಾದನೆಯನ್ನು ಹೊಂದಿದ್ದು, ಪರಾಕ್ರಮಿಯೂ ಆಗಿರುತ್ತಾರೆ. ಉತ್ತಮ ಸ್ವಾಸ್ಥ್ಯ ಇವರ ಪಾಲಿಗೆ ಇರುತ್ತದೆ.

ಕೊನೆಯದಾಗಿ ಶನಿಯು ದ್ವಾದಶ ಭಾವದಲ್ಲಿದ್ದರೆ, ಈ ಜಾತಕದವರು ನಿರ್ಲಜ್ಜರಾಗಿರುತ್ತಾರೆ. ಧನ ಹಾಗೂ ಸಂತಾನ ಹೀನರಾಗುತ್ತಾರೆ. ಈ ಜಾತಕದವರು ಶತೃಗಳಿಂದ ಪೀಡಿತಗೊಂಡು ಕಷ್ಟವನ್ನು ಎದುರಿಸುತ್ತಾರೆ.

ಇದನ್ನೂ ಓದಿ: ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?

Exit mobile version