Site icon Vistara News

Friendship Day 2023: ಗೆಳೆತನವೂ ರಾಶಿಗುಣವೂ! ಅಂದಹಾಗೆ, ನಿಮ್ಮ ಗೆಳೆಯರ ರಾಶಿ ಯಾವುದು?

friendship

ಜ್ಯೋತಿಷ್ಯಶಾಸ್ತ್ರದ (astrology) ಪ್ರಕಾರ, ನಮ್ಮ ಜನ್ಮರಾಶಿಗೂ (Zodiacs) ನಮ್ಮ ಗುಣಕ್ಕೂ (character) ಅವಿನಾಭಾವ ಸಂಬಂಧವಿದೆ. ಹಾಗಿದ್ದಾಗ, ನಮ್ಮಲ್ಲಿನ ಗೆಳೆತನದ (friendship) ಗುಣಗಳಿಗೂ ನಮ್ಮ ರಾಶಿಗೂ ಸಂಬಂಧ (Zodiac and Friends) ಇಲ್ಲದೆ ಇದ್ದೀತೇ? ಬನ್ನಿ, ಸ್ನೇಹಿತರ ದಿನದ ಹಿನ್ನೆಲೆಯಲ್ಲಿ (Friendship Day 2023) ರಾಶಿ ಕನ್ಯಾದಿಂದ ಮೀನ ರಾಶಿಯವರೆಗಿನ ಮಂದಿಯ ಪೈಕಿ ಯಾರದ್ದು ಗೆಳೆತನದಲ್ಲಿ ಎತ್ತಿದ ಕೈ ನೋಡೋಣ.

ಕನ್ಯಾ: ಕನ್ಯಾ ರಾಶಿಯ ಮಂದಿ ಅದ್ಭುತ ಗೆಳೆಯರು. ಇವರು ಏನೇ ಆಗಲಿ ಗೆಳೆಯರ ಬೆನ್ನಿಗೆ ಸದಾ ಕಾಲ ನಾನಿದ್ದೇನೆ ಎಂದು ನಿಲ್ಲುವ ಪಂಗಡದವರು. ಇವರು ನಿಮ್ಮ ಜೊತೆಗಿದ್ದರೆ, ಯಾವುದಕ್ಕೂ ಭಯಪಡಬೇಕಿಲ್ಲ. ಎಲ್ಲವನ್ನು ತಾಳ್ಮೆಯಿಂದಲೇ ಪರಿಹರಿಸುವ ಚಾಕಚಕ್ಯತೆಯನ್ನೂ ಹೊಂದಿದವರು. ನಿಮ್ಮಯಾವುದೇ ವಿಷಯವಿರಬಹುದು, ನಿಮ್ಮ ಪ್ರೇಮಿಗೆ ಉಡುಗೊರೆ ಆಯ್ಕೆ ಮಾಡಲು ಕ್ರಿಯಾತ್ಮಕ ಐಡಿಯಾ ಕೊಡುವುದರಿಂದ ಹಿಡಿದು, ನಿಮ್ಮ ಉದ್ಯೋಗದ ಇಂಟರ್‌ವ್ಯೂಗೆ ನಿಮಗೆ ಸಲಹೆ ನೀಡುವವವರೆಗೂ ಏನೂ ಬೇಕಾದರೂ ಸಹಾಯ ಮಾಡುವಂತವರಿವರು. ಬದುಕಿನ ಸಣ್ಣಪುಟ್ಟ ವಿಚಾರಗಳಲ್ಲಿ ಹೆಚ್ಚು ಆಸ್ಥೆಯಿಂದ ಗಮನಕೊಟ್ಟು ನಿಮ್ಮ ಬದುಕನ್ನು ಸುಂದರವಾಗಿಸುವವರಿವರು.

ತುಲಾ: ಬಹಳ ಶಾಂತ ಸ್ವಭಾವದ ದಯಾಳು ಮನಸ್ಸಿನ ಮಂದಿ ಇವರು. ಸ್ನೇಹಿತರ ವಿಚಾರದಲ್ಲೂ ಅಷ್ಟೇ, ಇವರು ಅತ್ಯುತ್ತಮ ಗೆಳೆತನ ನಿಭಾಯಿಸುತ್ತಾರೆ. ಸಣ್ಣ ಸಣ್ಣ ವಿಚಾರಗಳಿಗೂ ಗೆಳೆಯ/ಗೆಳತಿಗೆ ಆಧಾರವಾಗಿ ನಿಲ್ಲಬಲ್ಲ ಪ್ರೀತಿ, ಕಾಳಜಿ ಇವರು ತೋರಿಸುತ್ತಾರೆ.ಇವರು, ಗೆಳೆಯರ ಜೊತೆ ಜಗಳ, ವಾದವಿವಾದ ಇಷ್ಟಪಡುವುದಿಲ್ಲ.

ವೃಶ್ಚಿಕ: ಗೆಳೆಯರ ಅತ್ಯಂತ ರಹಸ್ಯ ವಿಚಾರಗಳನ್ನು ಯಾರಿಗೂ ಹೇಳದೆ, ತನ್ನಲ್ಲೇ ಇರಿಸಿಕೊಳ್ಳಬಲ್ಲ, ನಂಬಿಕಸ್ಥ ಗೆಳೆಯರಿವರು. ಮನಸ್ಸಿನ ಯಾವುದೇ ಬಗೆಯ ತಳಮಳಗಳನ್ನೂ ಈ ರಾಶಿಯ ಗೆಳೆಯರಲ್ಲಿ ಯಾವುದೇ ಭಯವಿಲ್ಲದೆ ಹೇಳಿಕೊಳ್ಳಬಹುದು. ನಿಮ್ಮ ಗುಟ್ಟುಗಳನ್ನು, ಎಂಥದ್ದೇ ಸಂದರ್ಭದಲ್ಲಾಗಲೀ ಇವರು ಬೇರೆಯವರ ಬಳಿ ಬಿಚ್ಚಡಲಾರರು. ಇವರು ತಮ್ಮ ಗೆಳೆಯರನ್ನು ತಮ್ಮ ಮನೆಯ ಸದಸ್ಯರಂತೆ ಪ್ರೀತಿಯಿಂದ ಕಾಣುವರು.

ಧನು:‌ ಈ ರಾಶಿಯ ಗೆಳೆಯರು ನಿಮ್ಮ ಜೊತೆಗಿದ್ದರೆ, ಮೂಡು ಕೆಟ್ಟಿದೆ, ಬೇಜಾರು ಎಂಬ ತಳಮಳ ನಿಮ್ಮನ್ನು ಯಾವತ್ತಿಗೂ ಕಾಡದು. ಸದಾ ಧನಾತ್ಮಕ ಚಿಂತನೆಗಳಿಂದ ಸ್ಪೂರ್ತಿಯಾಗಿರುವ ಇವರು, ಗೆಳೆಯರಲ್ಲೂ ಯಾವಾಗಲೂ ಖುಷಿ, ಹರುಷ ಪಸರಿಸುವವರು. ಸದಾ ಚಟುವಟಿಕೆಯಲ್ಲಿರಲು ಪ್ರೇರಣೆ ನೀಡುವವರು.

ಮಕರ:‌ ತುಂಬ ಪರಿಶ್ರಮಿಗಳಾಗಿರುವ ಈ ಮಂದಿ ತಮ್ಮ ಗೆಳೆಯರನ್ನೂ ಕಷ್ಟಪಟ್ಟು ಮೇಲೆ ಬರಲು ಪ್ರೇರಣೆ ನೀಡುತ್ತಾರೆ. ಇವರ ಜೊತೆಗಿದ್ದರೆ, ಯಾರೂ ಉದಾಸೀನತೆಯಿಂದ ಇರಲು ಸಾಧ್ಯವೇ ಇಲ್ಲ. ಗುರಿಗಳನ್ನು ಹಾಗೂ ಕನಸುಗಳನ್ನು ಇಟ್ಟುಕೊಂಡು ಸದಾ ಅದರೆಡೆಗೆ ಮುನ್ನಡೆಯುವ ಮಂದಿ ಇವರು. ಅಷ್ಟೇ ಅಲ್ಲ, ಗೆಳೆಯರನ್ನೂ ತಮ್ಮ ಕನಸುಗಳೆಡೆಗೆ ನಡೆಯಲು ದಾರಿದೀಪವಾಗುವ ಮಂದಿ ಈ ರಾಶಿಯವರು.

ಇದನ್ನೂ ಓದಿ: Dina Bhavishya : ಈ ರಾಶಿಯ ಪ್ರೇಮಿಗಳಿಗೆ ಶುಭ ಸೂಚನೆ

ಕುಂಭ: ಈ ರಾಶಿಯ ಗೆಳೆಯರೊಂದಿಗೆ ನೀವು ಗುಟ್ಟು ಮುಚ್ಚಿಕೊಳ್ಳಲು ಸಾಧ್ಯವೇ ಇಲ್ಲ. ಚಿಪ್ಪಿನೊಳಗೆ ಬಂಧಿಯಾಗಿರುವ ಮನಸ್ಥಿತಿಯುಳ್ಳ ಗೆಳೆಯರನ್ನು ಸುಲಭವಾಗಿ ಅದರಿಂದ ಹೊರತಂದು ಮನಸ್ಸು ಬಿಚ್ಚಿ ಮಾತನಾಡುವಂತೆ ಮಾಡುವ ಗುಣ ಇವರಲ್ಲಿದೆ. ಇವರು ಹುಟ್ಟಾ ಬಂಡಾಯ ಮನೋಭಾವದವರು, ಹಾಗೆಯೇ‌ ಸಾಹಸಿಗಳು ಕೂಡಾ. ಹಾಗಾಗಿ ಈ ರಾಶಿಯ ಗೆಳೆಯರಿದ್ದರೆ, ಬದುಕಿನಲ್ಲಿ ಬಹಳ ಮಜವಾದ, ಜೀವನದಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುವ ಕೆಲವು ಅದ್ಭುತ ದಿನಗಳನ್ನು ಕಳೆಯುತ್ತೀರಿ.

ಮೀನ: ಮೀನ ರಾಶಿಯ ಗೆಳೆಯರು ನಿಮ್ಮ ಗುರುವಿನ ಹಾಗೆ. ಗೆಳೆಯನೂ ಗುರುವೂ ಏಕಕಾಲಕ್ಕೆ ಆಗಬಲ್ಲ ಗುಣ ಇವರಲ್ಲಿದೆ. ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ದಾರಿ ತೋರಿಸುವ ಜೊತೆಗೆ ಕೈಹಿಡಿದು ಮುನ್ನಡೆಸಬಲ್ಲ ಯಾರಾದರೊಬ್ಬ ಇರಬೇಕು ಅಂತಾರಲ್ಲ, ಅಂಥ ಗುಣವನ್ನು ಹೊಂದಿದವರು ಮೀನರಾಶಿಯವರು. ನಿಮ್ಮ ಎಂತಹುದೇ ಇತಿಹಾಸವಿರಲಿ, ನೀವು ತಪ್ಪೇ ಮಾಡಿರಲಿ, ಅಥವಾ ಎಂಥದ್ದೇ ಕ್ಲಿಷ್ಟಕರ ಸ್ಥಿತಿಯಿಂದ ನೀವು ಬಂದಿರಲಿ, ನೀವು ಹೀಗೆ ಎಂಬ ಹಣೆಪಟ್ಟಿ ನಿಮಗೆ ಹಚ್ಚದೆ, ಯಾವಾಗಲೂ ಒಂದೇ ರೀತಿಯಲ್ಲಿ ಗೆಳೆಯರಾಗಿ ಇರಬಲ್ಲ ಸಾಮರ್ಥ್ಯ ಇರುವ ಮಂದಿ ಮೀನರಾಶಿಯವರು.

ಅಂದಹಾಗೆ, ನಿಮ್ಮ ಗೆಳೆಯರ ರಾಶಿ ಯಾವುದು?

ಇದನ್ನೂ ಓದಿ: Love Marriage: ಲವ್ ಮ್ಯಾರೇಜ್ ಆಗ್ತಿರಾ? ಹಾಗಿದ್ದರೆ ನಿಮ್ಮ ತಂದೆ-ತಾಯಿ ಒಪ್ಪಿಗೆ ಕಡ್ಡಾಯ?

Exit mobile version