Site icon Vistara News

ಅಗ್ನಿವೀರರಿಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯಲ್ಲಿ ಶೇ.10 ರಷ್ಟು ಮೀಸಲಾತಿ; ಗೃಹ ಇಲಾಖೆ ಘೋಷಣೆ

Agnipath

ನವ ದೆಹಲಿ: ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ (Agnipath Scheme) ವಿರುದ್ಧದ ಪ್ರತಿಭಟನೆ ಎಂಟು ರಾಜ್ಯಗಳಿಗೆ ವ್ಯಾಪಿಸಿದೆ. ಅದು ಶಾಂತಿಯುತವಾಗಿ ನಡೆಯದೆ, ಹಿಂಸಾಪಥದಲ್ಲಿ ಸಾಗುತ್ತಿರುವುದು ದುರಂತ. ಅಗ್ನಿಪಥ್‌ ಯೋಜನೆ ಯುವಕರಿಗೆ ಉದ್ಯೋಗ ಭರವಸೆ ಕೊಡುವುದಿಲ್ಲ. ನಾಲ್ಕು ವರ್ಷ ಅಗ್ನಿವೀರರಾಗಿ ಸೇವೆ ಸಲ್ಲಿಸಿ ವಾಪಸ್‌ ಬಂದ ಮೇಲೆ ಅವರು ಅತಂತ್ರರಾಗಬೇಕಾಗುತ್ತದೆ. ಎರಡನೇ ದರ್ಜೆ ಕೆಲಸ ಮಾಡಿಕೊಂಡು ಜೀವನ ಸಾಗಿಸಬೇಕಾಗುತ್ತದೆ ಎಂದು ಆರೋಪಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ ಘೋಷಣೆ ಮಾಡಿದೆ. 4 ವರ್ಷ ಅಗ್ನಿವೀರರಾಗಿ ಸೇವೆ ಸಲ್ಲಿಸಿ ವಾಪಸ್‌ ಬಂದವರಿಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (CAPFs) ಮತ್ತು ಅಸ್ಸಾಂ ರೈಫಲ್ಸ್‌ಗಳಲ್ಲಿ ಶೇ.10ರಷು ಮೀಸಲಾತಿ ನೀಡಲಾಗುವುದು ಎಂದು ಹೇಳಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಟ್ವೀಟ್‌ ಮಾಡಿದೆ.

ಇಷ್ಟೇ ಅಲ್ಲ, ಅಗ್ನಿವೀರರಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ಬರುವವರಿಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಮತ್ತು ಅಸ್ಸಾಂ ರೈಫಲ್ಸ್‌ ವಿಭಾಗಗಳಲ್ಲಿ ವಯೋಮಿತಿಯನ್ನು ಮತ್ತೂ ಮೂರು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದೂ ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ಈಗಿರುವ ನಿಯಮದ ಪ್ರಕಾರ CAPFsಗೆ ಸೇರುವವರಿಗೆ ಗರಿಷ್ಠ ೨೩ ವರ್ಷವಾಗಿರಬೇಕು ಮತ್ತು ಅಸ್ಸಾಂ ರೈಫಲ್ಸ್‌ಗೆ ಸೇರ ಬಯಸುವವರಿಗೆ ಗರಿಷ್ಠ 25 ವರ್ಷವಾಗಿರಬೇಕು. ಆದರೆ ಅಗ್ನಿವೀರರಿಗೆ ಈ ವಯಸ್ಸಿನ ಮಿತಿಯಲ್ಲೂ ವಿನಾಯಿತಿ ಸಿಗಲಿದೆ. ಅಂದರೆ ಅಗ್ನಿವೀರರಿಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯಲ್ಲಿ ಗರಿಷ್ಠ 26ವರ್ಷ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಗರಿಷ್ಠ ೨೮ವರ್ಷಗಳ ವಯೋಮಿತಿ ನಿಗದಿಪಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರಲ್ಲೂ ಅಗ್ನಿಪಥ್‌ ಯೋಜನೆಯ ಮೊದಲ ಹಂತದಲ್ಲಿ ನೇಮಕವಾಗುವವರಿಗೆ ಇವೆರಡೂ ವಿಭಾಗಗಳಲ್ಲಿ ವಯಸ್ಸಿನ ಮಿತಿಯನ್ನು 5ವರ್ಷಕ್ಕೆ ವಿಸ್ತರಿಸಲಾಗಿದೆ.

ಅಗ್ನಿಪಥ್‌ ಯೋಜನೆ ಘೋಷಣೆ ಮಾಡಿದ ಬಳಿಕ ಪ್ರತಿಭಟನೆ ಶುರುವಾದ ಹಿನ್ನೆಲೆಯಲ್ಲಿ ಒಂದು ಬಾರಿ ಅದರಲ್ಲಿ ಬದಲಾವಣೆ ಮಾಡಲಾಗಿತ್ತು. ಅಗ್ನಿಪಥ್‌ದಡಿ 17.5ರಿಂದ 21ವರ್ಷದವರೆಗಿನ ಯುವಕ/ಯುವತಿಯರಷ್ಟೇ ಈ ಯೋಜನೆಯಡಿ ಸೇನೆ ಸೇರಬಹುದು ಎಂದು ಮೊದಲು ನಿಯಮ ರೂಪಿಸಿದ್ದ ಕೇಂದ್ರ ಸರ್ಕಾರ ಬಳಿಕ ಆ ವಯೋಮಿತಿಯನ್ನು 23ವರ್ಷಕ್ಕೆ ಏರಿಸಿತ್ತು. ಈಗ ಉದ್ಯೋಗಾವಕಾಶವೂ ಇದೆ ಎಂಬುದನ್ನು ಅರ್ಥ ಮಾಡಿಸಲು ಕೇಂದ್ರ ಸಶಸ್ತ್ರ ಪಡೆ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಶೇ.10 ರಷ್ಟು ಮೀಸಲಾತಿ ಘೋಷಿಸಿದೆ.

ಇದನ್ನೂ ಓದಿ: ಅಗ್ನಿಪಥ್‌ ವಿರೋಧಿಸಿ ಬಿಹಾರದಲ್ಲಿ ಇಂದು ಬಂದ್‌, 12 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಕಟ್

Exit mobile version