Site icon Vistara News

Education Guide: ವಿದ್ಯಾರ್ಥಿಯಾಗಿದ್ದಾಗಲೇ ಗಳಿಸಿ: ಕಾಲೇಜು ಓದುತ್ತಲೇ ಹೀಗೂ ನೀವು ದುಡಿಯಬಹುದು!

learn and earn

ಹಲವು ದಶಕಗಳ ಹಿಂದೆ ಕಾಲೇಜು ಮೆಟ್ಟಿಲು ಹತ್ತುವುದೇ ದೊಡ್ಡ ಸಾಹಸ. ಹತ್ತಿದರೂ, ಆಗಿನ ಕಾಲದಲ್ಲಿ ಬಡತನದಲ್ಲಿ ವಿದ್ಯಾರ್ಜನೆಯನ್ನೂ ಮಾಡಿಕೊಳ್ಳಲು ಹೆಚ್ಚು ಅವಕಾಶಗಳಿರಲಿಲ್ಲ. ಅವರಿವರ ಮನೆಯಲ್ಲಿ ಉಂಡು, ರಸ್ತೆಯಲ್ಲೆಲ್ಲೋ ಕೂತು ಓದಿ ಮಹಾನ್‌ ಮೇಧಾವಿಗಳಾದವರ ಕತೆಗಳು ನಮ್ಮ ಕಣ್ಣ ಮುಂದಿವೆ. ಇವೆಲ್ಲ ನಮಗೆ ಸ್ಪೂರ್ತಿ ಕತೆಗಳಾದರೂ, ಪರಿಸ್ಥಿತಿ ಇಂದು ಹಾಗಿಲ್ಲ. ಬಡತನವಿದ್ದರೂ, ಓದಲು ಸಾಕಷ್ಟು ಅವಕಾಶಗಳೂ ಇದ್ದರೂ, ಓದುವ ಕಾಲದಲ್ಲಿ ಹಾದಿತಪ್ಪಿಸುವ ಅವಕಾಶಗಳೂ ಹೆಚ್ಚಿವೆ. ಇಂತಹ ಮಾರ್ಗಗಳಿಂದ ತಪ್ಪಿಸಿಕೊಂಡು, ಓದುವ ಕಾಲದಲ್ಲಿ ಓದಿ ವಿದ್ಯಾವಂತರಾಗುವುದೂ ಕೂಡಾ ಇಂದಿನ ಮಟ್ಟಿಗೆ ಸವಾಲೇ. ಅದರಲ್ಲೂ ಹಲವು ಮಂದಿ ಓದಬೇಕೆಂಬ ಆಸೆಯಿದ್ದರೂ ನಾನಾ ಹಣಕಾಸಿನ ಕಾರಣಗಳಿಂದಾಗಿ (education news) ಅಂದುಕೊಂಡದ್ದನ್ನು ಓದಲು ಸಾಧ್ಯವಾಗುವುದಿಲ್ಲ. ಅಂದುಕೊಂಡದ್ದನ್ನು ಓದುತ್ತಲೇ, ಸಂಜೆಯ ಹೊತ್ತು, ಅಥವಾ ವಾರಾಂತ್ಯದ ವೇಳೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ತನ್ನ ಖರ್ಚನ್ನು ನೋಡಿಕೊಳ್ಳುವ ಕಷ್ಟಸಹಿಷ್ಣು ವಿದ್ಯಾರ್ಥಿಗಳೂ ಇದ್ದಾರೆ. ಇನ್ನೂ ಕೆಲವರಿಗೆ ಆಸಕ್ತಿ ಇದ್ದರೂ, ಯಾವ ಕೆಲಸಗಳನ್ನು ಹೇಗೆ ಓದಿನ ಜೊತೆಗೆ ಮಾಡಬಹುದೆಂಬ ಅರಿವು ಇರುವುದಿಲ್ಲ. ಹಾಗಾದರೆ ಬನ್ನಿ, ಓದುತ್ತಲೇ ಕೆಲಸವನ್ನೂ ಮಾಡಿಕೊಂಡು (ಕಲಿಕೆ ವೇಳೆ ಗಳಿಕೆ – Education Guide) ನಿಮ್ಮ ಹಣವನ್ನು ನೀವೇ ಸಂಪಾದಿಸುವ ಹಾದಿಗಳೂ (earning while learning) ಈಗ ಬಹಳಷ್ಟಿವೆ. ಯಾವೆಲ್ಲ ಕ್ಷೇತ್ರಗಳಲ್ಲಿ ನೀವು ಓದುತ್ತಲೇ ಕೆಲಸವನ್ನೂ ಮಾಡಬಹುದು ಎಂಬುದನ್ನು ನೋಡೋಣ.

1. ಡೆಲಿವರಿ ಬಾಯ್ (Delivery boy):‌ ಈಗ ಏನಿದ್ದರೂ, ಹೋಮ್‌ ಡೆಲಿವರಿಯ ಕಾಲ. ಎಲ್ಲರೂ ಈಗ ತಿನ್ನಬೇಕಿರುವ ಊಟದಿಂದ ಹಿಡಿದು ಮನೆಯ ನಿತ್ಯ ಬಳಕೆಯ ವಸ್ತುಗಳವರೆಗೆ, ಎಲೆಕ್ಟ್ರಾನಿಕ್‌ ಗಾಜೆಟ್ಟುಗಳವರೆಗೆ ಎಲ್ಲರೂ ಮನೆಯಲ್ಲೇ ಕೂತು ಆರ್ಡರ್‌ ಮಾಡುವವರೇ. ಹೀಗಾಗಿ ಸದ್ಯ ಸಾಕಷ್ಟು ಅವಕಾಶಗಳಿರುವ ಹಾಗೂ ಬಹಳಷ್ಟು ವಿದ್ಯಾರ್ಥಿಗಳು ಮಾಡುತ್ತಿರುವ ಕೆಲಸವಿದು. ನಿಮಗೆ ೧೮ ವರ್ಷ ದಾಟಿದ್ದರೆ, ನಿಮ್ಮ ಬಳಿ ಒಂದು ದ್ವಿಚಕ್ರ ವಾಹನವಿದ್ದರೆ ಹಾಗೂ ಅದನ್ನು ಸರಾಗವಾಗಿ ಓಡಿಸುವಷ್ಟು ಅನುಭವ ಹಾಗೂ ಲೈಸೆನ್ಸ್‌ ನಿಮ್ಮಲ್ಲಿದ್ದರೆ ಬಿಡುವಿನ ವೇಳೆಯಲ್ಲಿ ಮಾಡಬಹುದಾದ ಕೆಲಸವಿದು. ಸ್ವಿಗ್ಗಿ, ಝೊಮೇಟೋ, ಬ್ಲಿಂಕಿಟ್‌ ಸೇರಿದಂತೆ ನಾನಾ ಕಡೆಗಳಲ್ಲಿಂದು ವಿಪುಲ ಅವಕಾಶವಿದೆ. ಕಾಲೇಜು ಮುಗಿದ ಮೇಲೆ, ಅಥವಾ ವಾರಾಂತ್ಯದಲ್ಲಿ ಸ್ವಲ್ಪ ಹೊತ್ತು ಮಾಡಬಹುದಾದ ಕೆಲಸವಿದು. ಬಹಳಷ್ಟು ಮಂದಿ ಇಂದು ಹೀಗೆ ದುಡಿದು ಓದಿ ಉತ್ತಮ ಕೆಲಸಕ್ಕೆ ಸೇರಿದ ನಿದರ್ಶನಗಳೂ ಕಣ್ಣ ಮುಂದಿವೆ.

2. ಭಾಷಾಂತರ ಹಾಗೂ ಬರೆವಣಿಗೆ (Translation): ನೀವು ಚೆನ್ನಾಗಿ ಬರೆಯಬಲ್ಲವರಾಗಿದ್ದರೆ, ಭಾಷಾ ಪ್ರೌಢಿಮೆ ನಿಮ್ಮಲ್ಲಿದ್ದರೆ, ಒಂದು ಭಾಷೆಯಿಂದ ಇನನೊಂದು ಭಾಷೆಗೆ ಭಾಷಾಂತರ ಮಾಡಬಲ್ಲವರಾಗಿದ್ದರೆ ಅದು ನಿಮ್ಮಲ್ಲಿರುವ ಒಂದೊಳ್ಳೆ ಪ್ರತಿಭೆ. ಇದು ಕೇವಲ ಪ್ರತಿಭೆಯಾಗಿ ಉಳಿಯದೆ, ಹಣಕಾಸಿಗೂ ನಿಮಗೆ ಸಹಾಯವಾಗಬಲ್ಲದು. ಈಗ ಏನಿದ್ದರೂ ಆನ್‌ಲೈನ್‌ ಯುಗ. ಕೈಯಲ್ಲೊಂದು ಲ್ಯಾಪ್‌ಟಾಪ್‌ ಇದ್ದರೆ ಸಾಕು, ಮನೆಯಲ್ಲೇ ಕೂತು ವೆಬ್‌ಸೈಟ್‌ಗಳಿಗೆ, ಭಾಷಾಂತರ ಸಂಸ್ಥೆಗಳಿಗೆ ಕೆಲಸ ಮಾಡಬಹುದು. ವಿದೇಶೀ ಭಾಷೆಗಳ ಜ್ಞಾನವಿದ್ದರಂತೂ ಅವಕಾಶಗಳು ಹೆಚ್ಚು.

3. ಡೇಟಾ ಎಂಟ್ರಿ (Data entry): ಭಾಷಾಂತರ ಬರವಣಿಗೆ ಸಾಧ್ಯವಿಲ್ಲ, ಆದರೆ, ಟೈಪ್‌ ಮಾಡಿಕೊಡಬಹುದು ಎಂಬ ಯೋಚನೆ ಇದ್ದವರಿಗೆ ಹೆಚ್ಚು ಮಾನಸಿಕ ಶ್ರಮವಿಲ್ಲದೆ, ದಿನದಲ್ಲಿ ಒಂದೆರಡು ಗಂಟೆ ಮಾಡಬಹುದಾದ ಕೆಲಸವಿದು. ಆನ್‌ಲೈನ್‌ನಲ್ಲೇ ಹುಡುಕಾಡಿದರೆ ಸಿಗಬಹುದಾದ ಕೆಲಸವಿದು.

ಇದನ್ನೂ ಓದಿ: Education Guide : ಉದ್ಯೋಗ ಖಚಿತ ಪಡಿಸುವ ವಿಶಿಷ್ಟ ಎಂಜಿನಿಯರಿಂಗ್ ಪದವಿಗಳಿವು!

4. ಸೋಶಿಯಲ್‌ ಮೀಡಿಯಾ ಅಸಿಸ್ಟೆಂಟ್‌: ಮೀನಿಗೆ ಈಜು ಕಲಿಸಬೇಕೇ ಹೇಳಿ! ಹಾಗೆಯೇ ಇಂದಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಅಥವಾ ಸೋಶಿಯಲ್‌ ಮೀಡಿಯಾ ಬಗ್ಗೆ ತರಬೇತಿಯ ಅಗತ್ಯವಿಲ್ಲ. ಒಳ್ಳೆಯ ಬರವಣಿಗೆ, ಇಂಗ್ಲೀಷ್‌ ಜ್ಞಾನ ಜೊತೆಗೆ ಸ್ವಲ್ಪ ಕ್ರಿಯೇಟಿವಿಟಿ ನಿಮಗಿದ್ದರೆ, ಸೋಶಿಯಲ್‌ ಮೀಡಿಯಾದಲ್ಲಿರುವುದೂ ಕೂಡಾ ನಿಮಗೆ ವರವಾಗಬಲ್ಲುದು. ಹಲವು ಸಂಸ್ಥೆಗಳು, ಪ್ರಸಿದ್ಧ ವ್ಯಕ್ತಿಗಳು ತಮ್ಮ ಸೋಶಿಯಲ್‌ ಮೀಡಿಯಾದ ನಿರ್ವಹಣೆಗೆಂದೇ ತಂಡವನ್ನಿಟ್ಟುಕೊಳ್ಳುತ್ತಾರೆ. ಹಾಗಾಗಿ, ಅಲ್ಲೂ ಕೂಡಾ ಪಾರ್ಟ್‌ ಟೈಂ ಕೆಲಸ ಮಾಡಬಹುದು.

5. ಟ್ಯೂಷನ್‌ ಹೇಳುವುದು: ಓದುತ್ತಲೇ ಕಲಿಸುವುದು ಒಂದೊಳ್ಳೆ ಅಭ್ಯಾಸ. ಕಲಿಸುತ್ತಾ ನಾವೂ ಕಲಿತುಕೊಳ್ಳುವುದು ನಮ್ಮನ್ನು ಇನ್ನಷ್ಟು ದೃಢರನ್ನಾಗಿಸುತ್ತದೆ. ಬೇರೆ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲೇ ಮಾಡಬಹುದಾದ ಅತ್ಯುತ್ತಮ ಆಯ್ಕೆ ಎಂದರೆ ಟ್ಯೂಷನ್‌. ನಿಮ್ಮ ಮನೆಯಲ್ಲೇ ಕುಳಿತು ಮಕ್ಕಳಿಗೆ, ನಿಮ್ಮ ಓದಿನ ಹಿನ್ನೆಲೆ ಅಥವಾ ಆಸಕ್ತಿಯ ವಿಷಯದ ತರಬೇತಿ ನೀಡುವುದು ಸಾಧ್ಯವಿದೆ. ಅಥವಾ ಆನ್ಲೈನ್ನಲ್ಲೂ ಸಾಧ್ಯವಿದೆ. ಉತ್ತಮ ಆದಾಯವಿರುವ ಕೆಲಸವಿದು.

6. ಪ್ರವಾಸೀ ಗೈಡ್‌: ಪ್ರವಾಸದಲ್ಲಿ ಆಸಕ್ತಿ ನಿಮಗಿದ್ದರೆ, ನೀವಿರುವ ಜಾಗ ಪ್ರವಾಸೀ ತಾಣವಾಗಿದ್ದರೆ ಈ ಕೆಲಸವನ್ನೂ ವಾರಾಂತ್ಯದಲ್ಲಿ ಮಾಡಬಹುದು. ನೀವಿರುವ ಜಾಗದ ವಿಶೇಷತೆಗಳನ್ನೂ, ಸ್ಥಳ ಇತಿಹಾಸ ಓದಿ ತಿಳಿದುಕೊಂಡು ಪ್ರವಾಸಿಗರಿಗೆ ಅದನ್ನು ವಿವರಿಸುವ ಈ ಕೆಲಸವೂ ಕೂಡಾ ವಾರಾಂತ್ಯದಲ್ಲಿ ಮಾಡಬಹುದಾದದ್ದೇ.

ಇದನ್ನೂ ಓದಿ: Countries With Best Education System: Countries With Best Education System In The World

Exit mobile version