Site icon Vistara News

Video | ಆನ್​ಲೈನ್​​ನಲ್ಲಿ ಬಂದ ಜಾಬ್ ಆಫರ್​ ನಕಲಿಯೋ? ಅಸಲಿಯೋ?-ಪತ್ತೆ ಹಚ್ಚುವ 5 ವಿಧಾನ ತಿಳಿಸಿದ ಕೇಂದ್ರ ಸರ್ಕಾರ

Fake Job Offer

ನವ ದೆಹಲಿ: ಸೈಬರ್​​ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಇಂಟರ್​​ನೆಟ್​​ನಲ್ಲಿ ಜನರನ್ನು ವಂಚಿಸುವವರ ಜಾಲ ವಿಸ್ತೃತವಾಗುತ್ತಿದೆ. ಅದರಲ್ಲಿ ಒಂದು ನಕಲಿ ಉದ್ಯೋಗ ಭರವಸೆಗಳನ್ನು ಕೊಟ್ಟು, ಉದ್ಯೋಗಾಕಾಂಕ್ಷಿಗಳನ್ನು ಮೋಸಗೊಳಿಸುವುದು. ‘ನಿರುದ್ಯೋಗಿಗಳಿಗೆ ಸುವರ್ಣಾವಕಾಶ’, ಉದ್ಯೋಗ ಖಾಲಿ ಇದೆ, ಆಕರ್ಷಕ ವೇತನ ನೀಡಲಾಗುವುದು..’ ಹೀಗೆ ಇಂಥ ಟ್ಯಾಗ್​​ಲೈನ್​​ಗಳಡಿ ಹತ್ತುಹಲವು ಆಫರ್​​ಗಳನ್ನು ನೀವು ಫೇಸ್​ಬುಕ್​​ನಲ್ಲೋ, ವಾಟ್ಸ್​ಆ್ಯಪ್​​ಗಳಲ್ಲಿ ಬಂದ ಮೆಸೇಜ್​​ಗಳಲ್ಲೋ ನೋಡಿರುತ್ತೀರಿ. ಹಾಗಂತ ಎಲ್ಲವೂ ಫೇಕ್​ ಎನ್ನಲು ಸಾಧ್ಯವಿಲ್ಲ, ಆದರೆ ಇವುಗಳಲ್ಲಿ ಎಲ್ಲವೂ ಸತ್ಯವಾದ ಆಫರ್​ಗಳೇ ಆಗಿರುವುದಿಲ್ಲ

ಉದ್ಯೋಗ ಖಾಲಿ ಇರುವ ಜಾಹೀರಾತನ್ನು ಉದ್ಯೋಗಾಕಾಂಕ್ಷಿಗಳು ನೋಡಿದರೆ ಸಹಜವಾಗಿಯೆ ಅವರಲ್ಲಿ ಒಂದು ಆಸೆ ಹುಟ್ಟುತ್ತದೆ, ನಾವೂ ಪ್ರಯತ್ನಿಸಬಹುದು ಎಂದುಕೊಳ್ಳುತ್ತಾರೆ. ಆದರೆ ಅನೇಕರು ಇಂಥ ಫೇಕ್​ ಜಾಬ್​​ ಜಾಲಕ್ಕೆ ಬಿದ್ದು, ತಮ್ಮ ಬಳಿ ಇರುವ ಹಣವನ್ನೂ ಕಳೆದುಕೊಳ್ಳುತ್ತಾರೆ. ಅತ್ತ ಉದ್ಯೋಗವೂ ಇಲ್ಲದೆ, ಇತ್ತ ಇರುವ ಹಣವನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾಗುತ್ತಾರೆ. ಅದರಲ್ಲೂ ಕೆಲವರಂತೂ ನಕಲಿ ಉದ್ಯೋಗ ಭರವಸೆಯನ್ನು ನಂಬಿ ದೇಶವನ್ನೇ ಬಿಟ್ಟು ಹೋಗಿರುತ್ತಾರೆ. ಅಲ್ಲಿಂದ ವಾಪಸ್​ ಬರಲೂ ಸಾಧ್ಯವಿಲ್ಲದೆ, ಏನೇನೋ ದಿನಗೂಲಿ ಮಾಡಿ ಬದುಕುವ ಪರಿಸ್ಥಿತಿ ತಂದುಕೊಳ್ಳುತ್ತಾರೆ.

ಹೀಗೆ ಉತ್ಕೃಷ್ಟ ವ್ಯವಸ್ಥೆಯೊಂದಿಗಿನ ಉದ್ಯೋಗ ಭರವಸೆಯನ್ನು ನಂಬಿ, ಮ್ಯಾನ್ಮಾರ್​, ಲಾವೋಸ್​, ಕಾಂಬೋಡಿಯಾ ಮತ್ತು ಇತರ ದೇಶಗಳಿಗೆ ಹೋಗಿ, ಅಲ್ಲಿ ಉದ್ಯೋಗವೂ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಸುಮಾರು 130 ಜನರನ್ನು ಕಳೆದ ತಿಂಗಳು ಕೇಂದ್ರ ಸರ್ಕಾರ ರಕ್ಷಣೆ ಮಾಡಿತ್ತು. ಅಂದರೆ ಅವರೆಲ್ಲ ವಾಪಸ್​ ಭಾರತಕ್ಕೆ ಬರಲು ಸಹಾಯ ಮಾಡಿತ್ತು.
ಅದಾದ ಮೇಲೆ ಈಗ ಕೇಂದ್ರ ಸರ್ಕಾರ ಒಂದು ಮಹತ್ವದ ಸಂದೇಶ ನೀಡಿದೆ. ಇಂಥ ನಕಲಿ ಉದ್ಯೋಗ ಜಾಲದಲ್ಲಿ ಸಿಲುಕಬೇಡಿ. ಸುಳ್ಳು ಭರವಸೆಗಳನ್ನು ನಂಬಬೇಡಿ ಎಂದು ಹೇಳಿದೆ. ಹಾಗೇ, ಆನ್​​ಲೈನ್​ ಬರುವ ಉದ್ಯೋಗದ ಆಫರ್​ಗಳು ನಕಲಿಯೋ-ಅಸಲಿಯೋ ಎಂಬುದನ್ನು ಹೇಗೆ ಕಂಡುಹಿಡಿಯಬಹುದು ಎಂಬುದಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಐದು ವಿಧಾನಗಳನ್ನು ತಿಳಿಸಿದೆ.

ಆನ್​ಲೈನ್​ ಮೂಲಕ ಜಾಬ್​ ಆಫರ್​ ಬಂದಾಗ ಅದು ನಕಲಿಯೋ, ಅಸಲಿಯೋ ಎಂದು ಹೇಗೆ ತಿಳಿಯಬಹುದು? ಇಲ್ಲಿವೆ ನೋಡಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದ ಐದು ಪ್ರಮುಖ ಅಂಶಗಳು..

  1. ನಿಮಗೊಂದು ಕಂಪನಿಯಿಂದ ಆನ್​ಲೈನ್ ಮೂಲಕ ಜಾಬ್​ ಆಫರ್​ ಬಂತು ಎಂದುಕೊಳ್ಳಿ. ನೀವು ಇನ್ನೂ ಆರಂಭಿಕ ಮಾತುಕತೆ ಹಂತದಲ್ಲೇ ಇರುತ್ತೀರಿ. ಯಾವುದೇ ವಿಷಯಗಳೂ ಇತ್ಯರ್ಥವಾಗಿರುವುದಿಲ್ಲ. ಅಷ್ಟರಲ್ಲೇ ಆ ಕಂಪನಿ ಅವಸರದಲ್ಲಿ, ಯಾವುದೇ ಹೆಚ್ಚಿನ ಪ್ರಕ್ರಿಯೆಗಳು ಇಲ್ಲದೆ ನಿಮಗೆ ಆಫರ್​ ಲೆಟರ್​ ಕೊಟ್ಟಿತು ಎಂದರೆ, ನೀವು ಸ್ವಲ್ಪ ಯೋಚಿಸಬೇಕು. ಆ ಉದ್ಯೋಗ ಬೋಗಸ್​ ಕೂಡ ಆಗಿರಬಹುದು.
  2. ಹಾಗೇ, ಕಂಪನಿಯಿಂದ ನೀಡಲಾಗುವ ಆಫರ್​ ಲೆಟರ್​ ಅಥವಾ ಅಪಾಯಿಂಟ್​ಮೆಂಟ್​ ಲೆಟರ್​​ನಲ್ಲಿ ಉದ್ಯೋಗದ ಬಗ್ಗೆ ಯಾವುದೇ ವಿಷಯಗಳೂ ಸರಿಯಾಗಿ ಇಲ್ಲದೆ ಇದ್ದರೆ ಸ್ವಲ್ಪ ಗಮನಹರಿಸಿ. ಒಮ್ಮೆಲೇ ನಂಬಬೇಡಿ. ಯಾವುದೇ ಒಂದು ಉದ್ಯೋಗಾವಕಾಶದ ಜಾಹೀರಾತಿನಲ್ಲಿ/ ಅಪಾಯಿಂಟ್​ಮೆಂಟ್​​ ಆರ್ಡರ್​​ನಲ್ಲಿರುವ ವಿವರದಲ್ಲಿ/ಆಫರ್​​ ಲೆಟರ್​​ನಲ್ಲಿ ಅಸ್ಪಷ್ಟತೆ ಇದ್ದರೆ, ಆ ಉದ್ಯೋಗ ಆಫರ್​ ನಂಬಲೇಬೇಡಿ.
  3. ಕಂಪನಿ ಕಳಿಸುವ ಇ-ಮೇಲ್​​ಗಳನ್ನು ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ತಪ್ಪುತಪ್ಪಾದ ಶಬ್ದಗಳಿದ್ದರೆ, ವೃತ್ತಿಪರವಲ್ಲದ ವಾಕ್ಯಗಳಿದ್ದರೆ. ಅಷ್ಟು ಬೇಡ ನಂಬಬೇಡಿ.
  4. ಉದ್ಯೋಗದಾತ ಕಂಪನಿಯವರು ನಿಮ್ಮ ಸಂದರ್ಶನದ ವೇಳೆ ಖಾಸಗಿ ಮಾಹಿತಿಯನ್ನು ಕೇಳುತ್ತಿದ್ದರೆ, ಅದು ಬಹುತೇಕವಾಗಿ ಒಂದು ಸ್ಕ್ಯಾಮ್​ (ಹಗರಣ)ಆಗಿರುತ್ತದೆ. ಹಾಗಾಗಿ ನಿಮ್ಮ ಖಾಸಗಿ ಮಾಹಿತಿಗಳನ್ನು ನೀಡಬೇಡಿ ಮತ್ತು ಆ ಉದ್ಯೋಗಕ್ಕೆ ಪಡೆಯಲು ಪ್ರಯತ್ನ ಮಾಡಲೂಬೇಡಿ.
  5. ಹಾಗೊಮ್ಮೆ ಕಂಪನಿಯವರು ಉದ್ಯೋಗ ಕೊಡುವಾಗಲೇ ನಿಮ್ಮ ಬಳಿ ಹಣ ಪಾವತಿಸುವಂತೆ ಹೇಳಿದರೆ, ಅದು ನಿಜಕ್ಕೂ ಮೋಸ ಮಾಡುವ ಕಂಪನಿಯೇ ಆಗಿರುತ್ತದೆ.
    ಇಷ್ಟನ್ನು ವಿವರಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಒಂದು ವಿಡಿಯೋವನ್ನೂ ಶೇರ್ ಮಾಡಿಕೊಂಡಿದೆ. ನೀವೂ ನೋಡಿ, ನಕಲಿ ಉದ್ಯೋಗ ಭರವಸೆಯ ಜಾಲದಲ್ಲೆಂದೂ ಸಿಲುಕಬೇಡಿ.
Exit mobile version