ದೇಶಾದ್ಯಂತ ಖಾಲಿ ಇರುವ 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ (public sector banks) 6128 ಕ್ಲೆರಿಕಲ್ ಹುದ್ದೆಗಳನ್ನು (clerical posts) ಭರ್ತಿ ಮಾಡಲು ಐಬಿಪಿಎಸ್ ಕ್ಲರ್ಕ್ ನೇಮಕಾತಿ 2024ರ (IBPS Clerk exam) ಅಧಿಸೂಚನೆಯನ್ನು (Job Alert) ಹೊರಡಿಸಲಾಗಿದೆ. ಇದಕ್ಕಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಜುಲೈ 1ರಿಂದ ಪ್ರಾರಂಭಿಸಲಾಗಿದೆ. ಇದರ ನೋಂದಣಿ ಪ್ರಕ್ರಿಯೆ, ಪರೀಕ್ಷೆಯ ಮಾದರಿ, ಖಾಲಿ ಹುದ್ದೆ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ, ಫಲಿತಾಂಶ, ಸಂಬಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಐಬಿಪಿಎಸ್ ಕ್ಲರ್ಕ್ 2024ರ ಕುರಿತು ಸಂಪೂರ್ಣ ಮಾಹಿತಿಯನ್ನು www.ibps.in ನಲ್ಲಿ ಪ್ರಕಟಿಸಲಾಗಿದೆ. 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ 6,128 ಕ್ಲೆರಿಕಲ್ ಪೋಸ್ಟ್‌ಗಳ ಖಾಲಿ ಹುದ್ದೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿರುವ ಎಲ್ಲಾ ಪದವೀಧರರಿಗೆ ಇದೊಂದು ಸುವರ್ಣ ಅವಕಾಶ.
ಹುದ್ದೆಗಳ ವಿವರ
ಆರ್ಗನೈಸೇಶನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 11 ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ 6,128 ಕ್ಲೆರಿಕಲ್ ಪೋಸ್ಟ್‌ಗಳಿಗೆ ಪರೀಕ್ಷೆ ನಡೆಸಲಿದೆ.
ಐಬಿಪಿಎಸ್ ಕ್ಲರ್ಕ್ 2024 ಪರೀಕ್ಷೆಗೆ ರಾಜ್ಯವಾರು ಮತ್ತು ವರ್ಗವಾರು ಖಾಲಿ ಹುದ್ದೆಗಳ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈ ವರ್ಷ ಉತ್ತರ ಪ್ರದೇಶ ರಾಜ್ಯಕ್ಕೆ 1,246 ಒಟ್ಟು ಹುದ್ದೆಗಳೊಂದಿಗೆ ಗರಿಷ್ಠ ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಎಸ್ ಸಿ 75, ಎಸ್ ಟಿ 39, ಒಬಿಸಿ 108, ಇಡಬ್ಲ್ಯೂ ಸಿ 44, ಸಾಮಾನ್ಯ 191 ಹುದ್ದೆಗಳು ಸೇರಿ ಒಟ್ಟು 457 ಹುದ್ದೆಗಳಿವೆ. ದೇಶಾದ್ಯಂತ ಎಸ್ ಸಿ 1068, ಎಸ್ಟಿ 388, ಒಬಿಸಿ 1426, ಇಡಬ್ಲ್ಯೂ ಸಿ 562, ಸಾಮಾನ್ಯ 2684 ಸೇರಿ ಒಟ್ಟು 6,128 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಸಂಬಳ ವಿವರ
ಐಬಿಪಿಎಸ್ ಕ್ಲರ್ಕ್‌ಗಳಿಗೆ ಮೂಲ ವೇತನವು ತಿಂಗಳಿಗೆ 19,900 ರೂ.ನಿಂದ 47,920 ರೂ. ಆಗಿದೆ. ಐಬಿಪಿಎಸ್ ಕ್ಲರ್ಕ್ ವೇತನದಲ್ಲಿ 19,900 ರೂ. ಮೂಲ ವೇತನವಾಗಿದ್ದು, ಉಳಿದ ವೇತನವು ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ ಮತ್ತು ಸಾರಿಗೆ ಭತ್ಯೆಯನ್ನು ಒಳಗೊಂಡಿದೆ. ಆರಂಭದಲ್ಲಿ ಸೇರುವವರಿಗೆ ಐಬಿಪಿಎಸ್ ಕ್ಲರ್ಕ್ ವೇತನಕ್ಕೆ ಸಂಬಂಧಿಸಿ ನಗದು 29,453 ರೂ. ಆಗಿದೆ.
ಪ್ರಮುಖ ದಿನಾಂಕಗಳು
ಐಬಿಪಿಎಸ್ ಕ್ಲರ್ಕ್ 2024ರ ನೇಮಕಾತಿಗೆ ಪ್ರಿಲಿಮ್ಸ್ ಪರೀಕ್ಷೆಯು 2024ರ ಆಗಸ್ಟ್ 24, 25 ಮತ್ತು 31 ರಂದು ನಡೆಯಲಿದೆ. ಐಬಿಪಿಎಸ್ ಕ್ಲರ್ಕ್ ಪರೀಕ್ಷೆಯು ಅಕ್ಟೋಬರ್ 13ರಂದು ನಡೆಯಲಿದೆ. ನೋಂದಣಿ ಪ್ರಕ್ರಿಯೆ ಜುಲೈ 1ರಿಂದ 21ರವರೆಗೆ ನಡೆಯಲಿದೆ.
ನೋಂದಣಿ ಪ್ರಕ್ರಿಯೆ
ನೋಂದಣಿ ಪ್ರಕ್ರಿಯೆ ಜುಲೈ 1 ರಿಂದ 21ರವರೆಗೆ ನಡೆಯಲಿದ್ದು, ಅಧಿಕೃತ ವೆಬ್‌ಸೈಟ್ www.ibps.in ಮೂಲಕ ಅರ್ಜಿ ಸಲ್ಲಿಸಬಹುದು. 20ರಿಂದ 28 ವರ್ಷಗಳ ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಎಸ್ ಸಿ, ಎಸ್ ಟಿ, ಇಡಬ್ಲ್ಯೂ ಸಿ ಅಭ್ಯರ್ಥಿಗಳಿಗೆ 175 ರೂ., ಸಾಮಾನ್ಯ ಮತ್ತು ಇತರರ ಅಭ್ಯರ್ಥಿಗಳಿಗೆ 850 ನೋಂದಣಿ ಶುಲ್ಕ ವಿಧಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇದರೊಂದಿಗೆ ಅಗತ್ಯ ದಾಖಲೆಗಳು, ಛಾಯಾಚಿತ್ರ, ಸಹಿ ಮತ್ತು ಐಬಿಪಿಎಸ್ ಕ್ಲರ್ಕ್ ಕೈಬರಹದ ಪತ್ರವನ್ನು ವೆಬ್ ಸೈಟ್ ನಲ್ಲಿ ಸಲ್ಲಿಸಬೇಕು. ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ,ಮಾಡುವಾಗ ತಾಂತ್ರಿಕ ದೋಷಗಳನ್ನು ತಪ್ಪಿಸಲು Internet Explorer 8, Mozilla FireFox 3.0, Google Chrome 3.0 ಮತ್ತು ಹೆಚ್ಚಿನದರಲ್ಲೇ ಮಾಡುವಂತೆ ಸೂಚಿಸಲಾಗಿದೆ.
ವಯೋಮಿತಿ ಅರ್ಹತೆ
ಐಬಿಪಿಎಸ್ ಕ್ಲರ್ಕ್ 2024 ಅರ್ಹತಾ ಮಾನದಂಡ ವನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಯು 20 ವರ್ಷದಿಂದ 28 ವರ್ಷ ವಯಸ್ಸಿನವರಾಗಿರಬೇಕು. ಅಭ್ಯರ್ಥಿಯು 02.07.1996 ಕ್ಕಿಂತ ಮೊದಲು ಮತ್ತು 01.07.2004 ಕ್ಕಿಂತ ಅನಂತರ ಹುಟ್ಟಿರಬಾರದು. ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ 5 ವರ್ಷ, ಹಿಂದುಳಿದ ವರ್ಗಗಳಿಗೆ 3 ವರ್ಷ, ವಿಕಲಾಂಗ ವ್ಯಕ್ತಿಗಳಿಗೆ 10 ವರ್ಷ, ಮಾಜಿ ಸೈನಿಕರು / ಅಂಗವಿಕಲ ಮಾಜಿ ಸೈನಿಕರು ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸೇವಾ ಅವಧಿ + 3 ವರ್ಷಗಳ ಸಡಿಲಿಕೆ ಇದೆ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿಯ ಕನಿಷ್ಠ ಅರ್ಹತೆಯನ್ನು ಹೊಂದಿರಬೇಕು ಅಥವಾ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು. ಅಭ್ಯರ್ಥಿಯು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆಯಾಗಿ ಪ್ರಮಾಣಪತ್ರವನ್ನು ಒದಗಿಸಬೇಕು. ಆನ್‌ಲೈನ್‌ನಲ್ಲಿ ನೋಂದಾಯಿಸುವಾಗ ಪದವಿಯಲ್ಲಿ ಪಡೆದ ಅಂಕಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸಬೇಕು.
ಅಭ್ಯರ್ಥಿಗಳಿಗೆ ಕಂಪ್ಯೂಟರ್ ಸಿಸ್ಟಂಗಳಲ್ಲಿ ಆಪರೇಟಿಂಗ್ ಮತ್ತು ಕೆಲಸದ ಜ್ಞಾನ ಕಡ್ಡಾಯವಾಗಿದೆ. ಕೆಲಸ ಮಾಡಲು ಬಯಸುವ ರಾಜ್ಯದ ಅಧಿಕೃತ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರಬೇಕು.
ಇದನ್ನೂ ಓದಿ: Job Alert: ಬರೋಬ್ಬರಿ 17,727 ಹುದ್ದೆಗಳ ಭರ್ತಿಗೆ ಮುಂದಾದ SSC; ಇಂದೇ ಅಪ್ಲೈ ಮಾಡಿ
ಆಯ್ಕೆ ಪ್ರಕ್ರಿಯೆ
ಐಬಿಪಿಎಸ್ ಕ್ಲರ್ಕ್ ನೇಮಕಾತಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಡೆಸಲಾಗುತ್ತದೆ. ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತದೆ.
ಕರ್ನಾಟಕದ ಅಭ್ಯರ್ಥಿಗಳಿಗೆ ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. ಕ್ಲೆರಿಕಲ್ ಕೇಡರ್ ಹುದ್ದೆಗೆ ಆಯ್ಕೆಯಾಗುವವರು ಈ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಮುಖ್ಯ ಪರೀಕ್ಷೆಯ ಅನಂತರ ಅಭ್ಯರ್ಥಿಗಳ ಆಯ್ಕೆಗೆ ಯಾವುದೇ ಸಂದರ್ಶನ ಪ್ರಕ್ರಿಯೆ ಇರುವುದಿಲ್ಲ.