ಬೆಂಗಳೂರು: ಕಲ್ಯಾಣ ಕರ್ನಾಟಕದ (ಹೈದರಾಬಾದ್ ಕರ್ನಾಟಕ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿ, ಪ್ರತ್ಯೇಕ ನೇಮಕ ಪ್ರಕ್ರಿಯೆ ನಡೆಸುವಂತೆ (Job News) ಕಳೆದ ವರ್ಷ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಈ ಸಂಬಂಧ ಫೆಬ್ರವರಿ 1 ರಂದು ಸುತ್ತೋಲೆ ಹೊರಡಿಸಿರುವ ಸರ್ಕಾರ, ದಿನಾಂಕ 15-06-2022 ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿನ ಕೊನೆಯ ಪ್ಯಾರಾವನ್ನು ಕೈ ಬಿಟ್ಟಿದೆ.
“ವಿವಿಧ ನೇಮಕಾತಿ ಪ್ರಾಧಿಕಾರಗಳು ದಿನಾಂಕ 15.06.2022ರ ಸುತ್ತೋಲೆಯು ಜಾರಿಗೆ ಬರುವುದಕ್ಕೆ ಮೊದಲು ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಹೊರತುಪಡಿಸಿ, ಬೇರೆ ಎಲ್ಲಾ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 06.06.2020ರ ಸುತ್ತೋಲೆಯನ್ವಯ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ, ಅಂತಿಮ ಆಯ್ಕೆಪಟ್ಟಿ ಪುಕಟಿಸದೇ ಇದ್ದಲ್ಲಿ, ಅಂತಹ ನೇಮಕಾತಿ ಪ್ರಕ್ರಿಯೆಗಳಿಗೆ ಸೀಮಿತವಾಗಿ ಮಾತ್ರ ಅರ್ಜಿ ಸಲ್ಲಿಸುವ ಸಮಯದಲ್ಲಿ ಸ್ಥಳೀಯ ಅಭ್ಯರ್ಥಿಗಳಿಂದ ಪಡೆಯಲಾಗಿರುವ ಆಯ್ಕೆಯನ್ನು ಪರಿಗಣಿಸದೇ, ಮೆರಿಟ್ ಪಟ್ಟಿಯಿಂದ ಆಯ್ಕೆ ಪಟ್ಟಿ ತಯಾರಿಸುವಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಮೊದಲಿಗೆ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆದುರಾಗಿ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸುವುದು. ನಂತರ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸುವಂತೆ ಸೂಚಿಸಿದೆʼʼ ಎಂದು ಹೊಸ ಸುತ್ತೋಲೆಯಲ್ಲಿ ಹೇಳಲಾಗಿದೆ.
ಹೊಸ ಸುತ್ತೋಲೆ ಇಲ್ಲಿದೆ ನೋಡಿ
2020ರ ಜೂನ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಪ್ರಕಾರ ಒಂದೇ ಅಧಿಸೂಚನೆಯಲ್ಲಿ ಮಿಕ್ಕುಳಿದ ವೃಂದ ಮತ್ತು ಸ್ಥಳೀಯ ವೃಂದ ಎಂದು ಹುದ್ದೆಗಳನ್ನು ವಿಭಾಗಿಸಿ, ನೇಮಕ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಒಂದೇ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಿ, ಒಂದೇ ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನದ ಮೂಲಕ ನೇಮಕ ನಡೆಯುತ್ತಿತ್ತು. ಅಭ್ಯರ್ಥಿಗಳು ತಮ್ಮ ಇಚ್ಛೆಯಂತೆ ಸ್ಥಳೀಯ ಅಥವಾ ಮಿಕ್ಕುಳಿದ ವೃಂದವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಈಗಾಗಲೇ ನಡೆಯುತ್ತಿರುವ ನೇಮಕ ಪ್ರಕ್ರಿಯೆಯಲ್ಲಿ 2020ರ ಸುತ್ತೋಲೆಯಂತೆ ನೇಮಕ ಪ್ರಕ್ರಿಯೆ ನಡೆಸುವಂತೆ ತಿಳಿಸಿರುವುದಕ್ಕೆ ಕಲ್ಯಾಣ ಕರ್ನಾಟಕ ಭಾಗದ ಸ್ಥಳೀಯ ಅಭ್ಯರ್ಥಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಈ ವಿಷಯದ ಕುರಿತು ಕಳೆದ ಡಿಸೆಂಬ್ 29 ರಂದು ನಡೆದ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದ್ದು, ದಿನಾಂಕ 15-6-2022ರ ಸುತ್ತೋಲೆಯಲ್ಲಿನ ಈ ಕುರಿತ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಹೊಸ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹೀಗಾಗಿ ಇನ್ನೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದೇ ಇರುವ ನೇಮಕಾತಿಗಳಲ್ಲಿ, ಮೆರಿಟ್ ಪಟ್ಟಿಯಿಂದ ಆಯ್ಕೆ ಪಟ್ಟಿ ತಯಾರಿಸುವಾಗ ಸ್ಥಳೀಯ ಅಭ್ಯರ್ಥಿಗಳನ್ನು ಮೊದಲಿಗೆ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆದುರಾಗಿ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ. ನಂತರ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳ ನೇಮಕಕ್ಕೆ ಪ್ರತ್ಯೇಕ ಅಧಿಸೂಚನೆ: ಸರ್ಕಾರದ ಆದೇಶ