ಬೆಂಗಳೂರು: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ಪೀಠಗಳಲ್ಲಿ ಪ್ರಸ್ತುತ ಖಾಲಿ ಇರುವ ಉಳಿದ ಮೂಲ ವೃಂದದ ಶೀಘ್ರಲಿಪಿಗಾರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು (Job News) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು 31.01.2023 ಕೊನೆಯ ದಿನವಾಗಿರುತ್ತದೆ. ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಈ ಹುದ್ದೆಗಳಿಗೆ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಬೆಂಗಳೂರಿನ ಪ್ರಧಾನ ಪೀಠದಲ್ಲಾಗಲೀ, ಬೆಳಗಾವಿ ಅಥವಾ ಕಲಬುರಗಿ ಪೀಠಗಳಲ್ಲಾಗಲಿ ನಿಯೋಜಿಸ ಬಹುದಾಗಿರುತ್ತದೆ ಮತ್ತು ಅಭ್ಯರ್ಥಿಗಳು ಮೂರೂ ಪೀಠಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹುದ್ದೆಗಳ ವಿವರ
ವಿದ್ಯಾರ್ಹತೆ ಏನು?
ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪರೀಕ್ಷೆ ಪ್ರೌಢದರ್ಜೆ (ಸೀನಿಯರ್ ಗ್ರೇಡ್) ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯ ಶೀಘ್ರಲಿಪಿ ಪ್ರೌಢದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ಅರ್ಜಿಯ ನಿಗದಿತ ಅಂಕಣದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು ಹಾಗೂ ವಿದ್ಯಾರ್ಹ ತೆಯನ್ನು ದೃಢೀಕರಿಸುವ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು.
ವಯೋಮಿತಿ ಎಷ್ಟು?
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ.ಜಾ/ಪ.ಪಂ/ಪ್ರ-1ರ ಅಭ್ಯರ್ಥಿಗಳಿಗೆ 40 ವರ್ಷ ಹಾಗೂ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಲಾಗಿದೆ.
ನೇಮಕ ಹೇಗೆ?
ಅಭ್ಯರ್ಥಿಯು ನಿಗದಿಪಡಿಸಿದ ಪರೀಕ್ಷೆಗಳಲ್ಲಿ ಪಡೆದ ಶೇಕಡ ಒಟ್ಟು ಅಂಕಗಳ ಸರಾಸರಿ ಆಧಾರದ ಮೇಲೆ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.
ಅರ್ಜಿ ಶುಲ್ಕ ಎಷ್ಟು?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇತರೆ ಪ್ರವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ.150/ ಗಳನ್ನು Registrar, K.S.A.T., 7th Floor, Kandaya Bhavana, K.G.Road, Bengaluru ಹೆಸರಿನಲ್ಲಿ ಡಿಡಿ/ಐಪಿಒ ಪಡೆದು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಅಧಿಕೃತ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು, ಇದನ್ನು ಭರ್ತಿ ಮಾಡಿ ಸಲ್ಲಿಸಬೇಕಿರುತ್ತದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು, ವಿಲೇಖನಾಧಿಕಾರಿಗಳು, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆಂಪೇಗೌಡ ರಸ್ತೆ, ಬೆಂಗಳೂರು-560009, ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು. ಅರ್ಜಿ ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಮತ್ತು ನಿಗದಿತ ಸಮಯದ ನಂತರ ಬರುವ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುತ್ತದೆ.
ವೇತನ ಎಷ್ಟಿರುತ್ತದೆ? : ರೂ. 30350-750-32600-850-36000-950-39800-1100-46400-1250-53900- 1450-58250.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ : https://www.ksat.karnataka.gov.in
ಇದನ್ನೂ ಓದಿ| KPSC Recruitment 2023 | ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ಅವಧಿ ಅರ್ಧ ಗಂಟೆ ಹೆಚ್ಚಳ