ಬೆಂಗಳೂರು: ಭಾರತ ಸರ್ಕಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ʼರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ʼ (NABARD) ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ಎ) ಹುದ್ದೆಗಳ ನೇಮಕಕ್ಕೆ ಪ್ರಕಟಣೆ (Job News) ಹೊರಡಿಸಿದೆ. ಒಟ್ಟು ೧೭೦ ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಜುಲೈ 18 ರಿಂದ ಆಗಸ್ಟ್ 07 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಸದ್ಯ ಈ ನೇಮಕಾತಿಯ ಪ್ರಕಟಣೆ ಮಾತ್ರ ಹೊರಬಿದ್ದಿದ್ದು, ವಿವರವಾದ ಅಧಿಸೂಚನೆಯನ್ನು ಬ್ಯಾಂಕ್ ಸದ್ಯವೇ ಪ್ರಕಟಿಸಲಿದೆ. ಈ ೧೭೦ ಹುದ್ದೆಗಳ ಪೈಕಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಬ್ಯಾಂಕಿಂಗ್ ಸೇವಾ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಸಂಖ್ಯೆಯೇ ೧೬೧. ಇದರೊಂದಿಗೆ ರಾಜಾಭಾಷ ಸೇವೆಗೆ ಸಂಬಂಧಿಸಿದ ೭ ಮತ್ತು ಸೆಕ್ಯುರಿಟಿ ಸೇವೆಗೆ ಸಂಬಂಧಿಸಿದ ೨ ಹುದ್ದೆಗಳಿಗೆ ನೇಮಕ ನಡೆಯಲಿದೆ.
ವಿದ್ಯಾರ್ಹತೆ ಏನು?
ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಬ್ಯಾಂಕಿಂಗ್ ಸೇವಾ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಈ ಕೆಳಗಿನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
೧. ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಶೇ. ೬೦ರಷ್ಟು (ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಶೇ. ೫೫) ಅಂಕ ಪಡೆದಿರಬೇಕಾದದು ಕಡ್ಡಾಯ. ಸ್ನಾತಕೋತ್ತರ ಪದವಿ (MBA/PGDM) ಪಡೆದವರು ಅರ್ಜಿಸಲ್ಲಿಸಬಹುದಾಗಿದ್ದು, ಶೇ.೫೫ ರಷ್ಟು (ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಶೇ. ೫೦) ಅಂಕ ಪಡೆದಿರಬೇಕು. ಸಿಎ, ಐಸಿಡಬ್ಲ್ಯುಎ ಮಾಡಿದವರೂ ಅರ್ಜಿ ಸಲ್ಲಿಸಬಹುದು.
೨. ಕೃಷಿಯಲ್ಲಿ, ಕೃಷಿ ಎಂಜಿನಿಯರಿಂಗ್, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ತೋಟಗಾರಿಕೆ, ಭೂ ಅಭಿವೃದ್ಧಿ ಅಥವಾ ಮಣ್ಣಿನ ವಿಜ್ಞಾನ, ಜಲಸಂಪನ್ಮೂಲ ಈ ಯಾವುದಾದರೂ ವಿಷಯದಲ್ಲಿ ಪದವಿ ಪಡೆದವರು ಕೂಡ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಇವರು ಕೂಡ ಪದವಿಯಲ್ಲಿ ಶೇ. ೬೦ರಷ್ಟು (ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಶೇ. ೫೫) ಅಂಕ ಪಡೆದಿರಬೇಕಾದದು ಕಡ್ಡಾಯ.
ವಯೋಮಿತಿ ಎಷ್ಟು?
೨೧ ರಿಂದ ೩೦ ವರ್ಷದೊಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷ ವಿನಾಯಿತಿ ನೀಡಲಾಗಿರುತ್ತದೆ.
ನೇಮಕ ಹೇಗೆ?
ಎರಡು ಹಂತದ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲಿಗೆ ೨೦೦ ಅಂಕಗಳಿಗೆ ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದ್ದು, ಇದರಲ್ಲಿ ಅರ್ಹತೆ ಪಡೆದವರಿಗೆ ಮುಖ್ಯ ಪರೀಕ್ಷೆ (ಮೇನ್) ನಡೆಸಲಾಗುತ್ತದೆ. ಈ ಪರೀಕ್ಷೆಯೂ ೨೦೦ ಅಂಕಗಳಿಗೆ ನಡೆಯಲಿದೆ. ಇದರಲ್ಲಿ ಹೆಚ್ಚು ಅಂಕ ಪಡೆದವರಿಗೆ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಂದರ್ಶನಕ್ಕೆ ೫೦ ಅಂಕ ನಿಗದಿಯಾಗಿರುತ್ತದೆ. ರಾಜ್ಯದ ಒಂಬತ್ತು ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆಯ ಕೇಂದ್ರಗಳಿರಲಿವೆ. ಮುಖ್ಯ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ ಪ್ರಕಟಿಸುವ ವಿವರಣಾತ್ಮಕ ಅಧಿಸೂಚನೆಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ನೋಡುತ್ತಿರಬೇಕಾದ ವೆಬ್‌ಸೈಟ್ ವಿಳಾಸ ಇಂತಿದೆ; https://www.nabard.org/ftrcontent.aspx?id=660
ಇದನ್ನೂ ಓದಿ | Job News | ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಸಿಬ್ಬಂದಿ ನೇಮಕಾತಿ ಆಯೋಗ