Site icon Vistara News

Job News | ಕೇಂದ್ರ ಸರ್ಕಾರಿ ನೌಕರಿಗೆ SSC ಪರೀಕ್ಷೆ ಬರೆಯಿರಿ

government jobs- SSC

ನಾನು ಕೇಂದ್ರ ಸರ್ಕಾರಿ ಉದ್ಯೋಗಿಯಾಗಬೇಕೆಂದು ಕನಸು ಕಾಣುತ್ತಿದ್ದೀರಾ? ಹಾಗಾದರೆ ನೀವು ‘ಸಿಬ್ಬಂದಿ ನೇಮಕಾತಿ ಆಯೋಗ’ (Staff Selection Commission-SSC) ಬಗ್ಗೆ ತಿಳಿದುಕೊಳ್ಳಲೇಬೇಕು.

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆ, ಸಂಸ್ಥೆ, ಅರೆಸೇನಾಪಡೆಗಳಲ್ಲಿನ ಗ್ರೂಪ್‌-ಬಿ, ಗ್ರೂಪ್‌-ಸಿ ಮತ್ತು ಗ್ರೂಪ್-ಡಿ ಹುದ್ದೆಗಳಿಗೆ ಈ ಆಯೋಗದ ಮೂಲಕ ಸದ್ಯ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಸಚಿವಾಲಯ, ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅರ್ಜಿ ಆಹ್ವಾನಿಸುವ ಎಸ್‌ಎಸ್‌ಸಿಯು, ವಿವಿಧ ಹಂತದ ಪರೀಕ್ಷೆ ಸೇರಿದಂತೆ ನೇಮಕ ಪ್ರಕ್ರಿಯೆ ನಡೆಸುತ್ತದೆ. ನಿಗದಿತವಾಗಿ ಕೆಲವು ಹುದ್ದೆಗಳಿಗೆ ಪ್ರತಿ ವರ್ಷ ಪರೀಕ್ಷೆ ನಡೆಸಿಕೊಂಡು ಬರಲಾಗುತ್ತಿದೆ. ಸಾಮಾನ್ಯವಾಗ ವಾರ್ಷಿಕ ಸುಮಾರು 15ರಿಂದ20 ಪರೀಕ್ಷೆಗಳನ್ನು ಎಸ್‌ಎಸ್‌ಸಿ ನಡೆಸಿಕೊಂಡು ಬಂದಿದೆ.

ಕೇಂದ್ರ ಲೋಕಸೇವಾ ಆಯೋಗ(UPSC)ದಂತೆ ಎಸ್‌ಎಸ್‌ಸಿ(SSC)ಯು ಮೊದಲೇ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸುತ್ತದೆ. ಇದರಿಂದ ಅಭ್ಯರ್ಥಿಗಳಿಗೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಅನುಕೂಲವಾಗುತ್ತದೆ. ನೀವು ನಿಮ್ಮ ವಿದ್ಯಾರ್ಹತೆ, ಅನುಭವ, ವಯಸ್ಸಿಗೆ ಸೂಕ್ತವಾದ ಪರೀಕ್ಷೆ ತೆಗೆದುಕೊಂಡು, ಕೇಂದ್ರ ಸರ್ಕಾರದ ಉದ್ಯೋಗಿಯಾಗಬಹುದು.

ಎಸ್‌ಎಸ್‌ಸಿ(SSC) ರಚನೆ ಯಾವಾಗ?

ಭಾರತ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಡಿ ಈ ಸಿಬ್ಬಂದಿ ನೇಮಕಾತಿ ಆಯೋಗ ಕಾರ್ಯನಿರ್ವಹಿಸುತ್ತಿದೆ. 1976ರಲ್ಲಿ ಈ ನೇಮಕಾತಿ ಆಯೋಗವನ್ನು  ರಚಿಸಲಾಗಿತ್ತು. ಮೊದಲಿಗೆ ಇದನ್ನು ಸೇವಾ ಆಯೋಗ (ಸಬಾರ್ಡಿನೆಟ್ ಸರ್ವೀಸ್ ಕಮಿಷನ್) ಎಂದು ಕರೆಯಲಾಗುತ್ತಿತ್ತು. 1977ರಲ್ಲಿ ಇದಕ್ಕೆ ಸಿಬ್ಬಂದಿ ನೇಮಕಾತಿ ಆಯೋಗ (SSC) ಎಂದು ನಾಮಕರಣ ಮಾಡಲಾಯಿತು. 1999ರಲ್ಲಿ  ಇದರ ಉದ್ದೇಶ, ಕಾರ್ಯಚಟುವಟಿಕೆಗಳನ್ನು ಸ್ಪಷ್ಟ ಪಡಿಸಿ, ಹೆಚ್ಚಿನ ಜವಾಬ್ದಾರಿ ನೀಡಲಾಯಿತು.

ಆಯೋಗದ ಕೇಂದ್ರ ಕಚೇರಿಯು ದೆಹಲಿಯಲ್ಲಿದ್ದು, ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಹೊಂದಿದೆ. ಓರ್ವ ಕಾರ್ಯದರ್ಶಿ ಇದ್ದು, ಇವರು ಪರೀಕ್ಷೆಗಳ ಮೇಲ್ವಿಚಾರಕರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಅಲ್ಲದೆ, ಆಯೋಗವು ವಿವಿಧ ಇಲಾಖೆಗಳ ಸಿಬ್ಬಂದಿಯ ಬಡ್ತಿ ನೀಡಲೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತದೆ.

ಎಸ್‌ಎಸ್‌ಸಿ ನಡೆಸುವ ಕೆಲ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳು

ಭಾಷೆಯ ಭಯ ಬೇಡ

ನಮ್ಮ ರಾಜ್ಯದಲ್ಲಿ ಬಹುತೇಕರಿಗೆ ಈ ಪರೀಕ್ಷೆಗಳ ಬಗ್ಗೆ ಸೂಕ್ತ ಮಾಹಿತಿಯೇ ಇಲ್ಲ. ಇದ್ದರೂ ಭಾಷಾ ಸಮಸ್ಯೆ ಮುಂದು ಮಾಡಿಕೊಂಡು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿರುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗರ ಸಂಖ್ಯೆ ಕಡಿಮೆ. ಈಗ ಎಸ್‌ಎಸ್‌ಸಿ(SSC)ಯು ಪ್ರಾದೇಶಿಕ ಭಾಷೆಗಳಲ್ಲಿ ಕೆಲವು ಪರೀಕ್ಷೆಗಳನ್ನು ನಡೆಸುತ್ತಿದ್ದು, ಭಾಷಾ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದೆ.

ಕೇಂದ್ರ ಸರ್ಕಾರದ ಇಲಾಖೆಗಳಷ್ಟು ಉದ್ಯೋಗ ಸೃಷ್ಟಿ ಮಾಡುವ ಮತ್ತೊಂದು ಕ್ಷೇತ್ರ ನಮ್ಮ ದೇಶದಲ್ಲಿ ಇಲ್ಲ. ಹೀಗಾಗಿ ಕನ್ನಡಿಗರು ಕೂಡ ಈ ಅವಕಾಶವನ್ನು ಬಳಸಿಕೊಳ್ಳಲು ಮುಂದೆ ಬರಬೇಕು. “ಭಾಷಾ ಕೀಳರಿಮೆʼʼಯನ್ನು ಬದಿಗೊತ್ತಿ, ಎಸ್‌ಎಸ್‌ಸಿ(SSC) ನಡೆಸುವ ವಿವಿಧ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು.

ನೇಮಕಾತಿ ನಡೆಯಲಿರುವ ರಾಜ್ಯದಲ್ಲಿಯೇ, ಅಲ್ಲಿಯ ಅಭ್ಯರ್ಥಿಗಳಿಗೆ ಅವಕಾಶವಾಗುವಂತೆ ಆಯೋಗ ಪರೀಕ್ಷೆ ನಡೆಸಿಕೊಂಡು ಬರುತ್ತಿದೆ. ಈ ಪರೀಕ್ಷೆಗಳ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಪ್ರಚಾರ ನೀಡಲಾಗುತ್ತದೆ. ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಭ್ಯಯರ್ಥಿಯ ತವರು ರಾಜ್ಯದಲ್ಲಿಯೇ ಉದ್ಯೋಗ ಕಲ್ಪಿಸಲು ಮುತುವರ್ಜಿ ವಹಿಸಲಾಗುತ್ತದೆ.

ವಿವಿಧ ಇಲಾಖೆಗಳಲ್ಲಿನ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸುವುದು ಆಯೋಗದ ಮುಖ್ಯ ಉದ್ದೇಶವಾಗಿದ್ದು, ಅರ್ಹರಿಗೇ ಉದ್ಯೋಗ ದೊರೆಯುವಂತೆ ನೋಡಿಕೊಳ್ಳಲಾಗುತ್ತದೆ. ಹೀಗಾಗಿ ಕಟ್ಟುನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಗ ನಡೆಸಿಕೊಂಡು ಬಂದಿದೆ.

ಹುದ್ದೆಗೆ ತಕ್ಕಂತೆ ಸ್ಪರ್ಧಾತ್ಮಕ ಪರೀಕ್ಷೆಯ ವಿಷಯ ನಿಗದಿಪಡಿಸಲಾಗುವುದರಿಂದ ಪ್ರತಿಯೊಂದು ಪರೀಕ್ಷೆಯೂ ಭಿನ್ನವಾಗಿರಲಿದೆ. ಸಾಮಾನ್ಯವಾಗಿ ರೀಸನಿಂಗ್ ಎಬಿಲಿಟಿ, ಜನರಲ್ ನಾಲೆಡ್ಜ್ ಮತ್ತು ಲಾಂಗ್ವೇಜ್ ಪ್ರಶ್ನೆಪತ್ರಿಕೆಗಳು ಇದ್ದೇ ಇರಲಿವೆ. ಪರೀಕ್ಷಾ ಪ್ರಕಟಣೆಯ ಜೊತೆಗೇ ಸಿಲಬಸ್ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.

ವೆಬ್‌ ನಲ್ಲಿ ಮಾಹಿತಿ

ಪರೀಕ್ಷೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಎಸ್‌ಎಸ್‌ಸಿ(SSC)ಯ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಅರ್ಜಿಯನ್ನು ಕೂಡ ಆನ್‌ಲೈನ್‌ನಲ್ಲಿಯೇ ಆಹ್ವಾನಿಸಲಾಗುತ್ತದೆ. ಅರ್ಜಿ ಶುಲ್ಕ ಪಾವತಿಸಲೂ ಆನ್‌ಲೈನ್‌ನಲ್ಲಿ ಅವಕಾಶ ನೀಡಲಾಗಿರುತ್ತದೆ. ಆನ್‌ಲೈನ್‌ನಲ್ಲಿ ಪರೀಕ್ಷೆ ಕೂಡ ನಡೆಸಲಾಗುತ್ತದೆ. ಪರೀಕ್ಷೆ ಹೇಗಿರುತ್ತದೆ, ಹೇಗೆ ಬರೆಯಬೇಕೆಂಬ ಮಾಹಿತಿಯುಳ್ಳ ವಿಡಿಯೋವನ್ನು ಆಯೋಗದ ವೆಬ್‌ನಲ್ಲಿ ಪ್ರಕಟಿಸಲಾಗಿದೆ. ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯೂ ಆಯೋಗದ ವೆಬ್‌ನಲ್ಲಿರುತ್ತದೆ.
ವೆಬ್‌ ಲಿಂಕ್‌ : https://www.ssc.nic.in

ಬೆಂಗಳೂರಿನಲ್ಲಿಯೇ ಇದೆ ಕಚೇರಿ

ನೇಮಕಾತಿ ಪ್ರಕ್ರಿಯೆಯನ್ನು ಸುಗಮವಾಗಿಸಲು ಆಯೋಗ ಒಟ್ಟು ಒಂಬತ್ತು ಪ್ರಾದೇಶಿಕ/ ಉಪ-ಪ್ರಾದೇಶಿಕ ಕಚೇರಿಗಳನ್ನು ತೆರೆದಿದೆ. ಪ್ರಾದೇಶಿಕ ನಿದೇರ್ಶಕರು ಅಥವಾ ಸಹಾಯಕ ಪ್ರಾದೇಶಿಕ ನಿರ್ದೇಶಕರು ಈ ಕಚೇರಿಗಳ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ.

ಕೇಂದ್ರೀಯ ಸದನ

 ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪದಲ್ಲಿ  ನೇಮಕಾತಿ ಚಟುವಟಿಕೆ ನಡೆಸಲು ಪ್ರಾದೇಶಿಕ ಕಚೇರಿಯೊಂದನ್ನು ತೆರೆಯಲಾಗಿದ್ದು, ಇದರ ಕಚೇರಿ ಇರುವುದು ಬೆಂಗಳೂರಿನಲ್ಲಿ. 1990ರಿಂದ ಈ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಈ ಕಚೇರಿಯ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ವಿವಿಧ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಫಲಿತಾಂಶದ ಬಗ್ಗೆ ಇರುವ ಗೊಂದಲ ಬಗೆಹರಿಸಿಕೊಳ್ಳಬಹುದು.

ಬೆಂಗಳೂರಿನ ಕೋರಮಂಗಲದಲ್ಲಿರುವ ‘ಕೇಂದ್ರೀಯ ಸದನ’ದ ಮೊದಲ ಮಹಡಿಯಲ್ಲಿ ಈ ಕಚೇರಿ ಇದ್ದು,ಇಲ್ಲಿಯ ದೂರವಾಣಿ ಸಂಖ್ಯೆ : 080-25502520, 9483862020.
ಕಚೇರಿಯ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲು ಭೇಟಿ ನೀಡಿ: https://www.ssckkr.kar.nic.in

ಇದನ್ನೂ ಓದಿ| ಮೈಸೂರಿನ ಸೆಸ್ಕಾಂನಲ್ಲಿ ಅಪ್ರೆಂಟಿಸ್‌ಷಿಪ್‌ ಮಾಡಿ

Exit mobile version